ವಿಜಯಪುರ: ಸ್ಥಳೀಯ ಸರ್ಕಾರ ಎಂದೇ ಕರೆಸಿಕೊಳ್ಳುವ ಗ್ರಾಮ ಪಂಚಾಯತ್ ಚುನಾವಣೆ ಎಂದರೇ ಅದು ರೋಚಕ ಹಾಗೂ ಕುತೂಹಲಗಳ ಆಗರವಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಎರಡು ಪ್ರತ್ಯೇಕ ಕುಟುಂಬಗಳ ದಂಪತಿ ಚುನಾವಣಾ ಸ್ಪರ್ಧೆಗೆ ಇಳಿದು ಗಮನ ಸೆಳೆದಿವೆ.
ಪತ್ನಿ ಅವಿರೋಧ, ಪತಿ ಸ್ಪರ್ಧೆ: ಈಗಾಗಲೇ ಸತತ ಮೂರು ಬಾರಿ ಗೆದ್ದು ಹೊನವಾಡ ಗ್ರಾಪಂ ಅಧ್ಯಕ್ಷಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರುಕ್ಷ್ಮಿಣಿ ತುಕಾರಾಮ ದಡಕೆ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ವಾರ್ಡ್ -2ರಿಂದ ಸ್ಪರ್ಧಿಸಿ ಅವಿರೋಧ ಆಯ್ಕೆಯಾಗುವ ಮೂಲಕ ಗ್ರಾಮದಲ್ಲಿ ನಾಲ್ಕು ಬಾರಿ ಆಯ್ಕೆಯಾದ ಮಹಿಳೆ ಎಂಬ ಹಿರಿಮೆ ಪಾತ್ರವಾಗಿದ್ದಾರೆ.
ಅಚ್ಚರಿ ಸಂಗತಿ ಎಂದರೆ ಈವರೆಗೆ ಪತ್ನಿ ರುಕ್ಮಿಣಿ ಅವರ ಅಧಿಕಾರದಲ್ಲೇ ಸಂತೃಪ್ತಿ ಪಡುತ್ತಿದ್ದ ತುಕಾರಾಮ ಈ ಬಾರಿ 8ನೇ ವಾರ್ಡ್‌ನಿಂದ ತಾವೂ ಸ್ಪರ್ಧಿಸಿದ್ದಾರೆ. ಪತ್ನಿ ಹಾಗೂ ನಾನು ಇಬ್ಬರೂ ಹೈಸ್ಕೂಲ್ ಮೆಟ್ಟಿಲೇರಿಲ್ಲ, ಆದರೂ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇವೆ. ಹೀಗಾಗಿ ಪತ್ನಿ ಅವಿರೋಧ ಆಯ್ಕೆಯಾಗಿದ್ದು ನನ್ನ ವಿರುದ್ಧ ಸ್ಪರ್ಧೆ ಏರ್ಪಟ್ಟಿದ್ದುಗೆಲುವು ನನ್ನದೇ ಎನ್ನುತ್ತಾರೆ ತುಕಾರಾಮ.
ಪತ್ನಿ ಗ್ರಾಮಾಭಿವೃದ್ಧಿಯಲ್ಲಿ ಉತ್ತಮ ಸೇವೆಗೆ ಬೆನ್ನೆಲುಬಾಗಿ ನಿಂತಿದ್ದ ನನ್ನ ಪರಿಶ್ರಮ ಗಮನಿಸಿ ಜನರೇ ನನ್ನನ್ನೂ ಸ್ಪರ್ಧೆಗೆ ಇಳಿಸಿದ್ದಾರೆ. ಮಹಾತ್ಮ ಗಾಂಧಿಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಆದ್ಯತೆನೀಡಿದ್ದೇ ತಮ್ಮ ಪತ್ನಿಯ ಅವಿರೋಧ ಆಯ್ಕೆಗೆಕಾರಣವಾಗಿದೆ. ಇದಕ್ಕೆ ಒತ್ತಾಸೆಯಾಗಿದ್ದ ಕಾರಣಕ್ಕೆಸ್ಪರ್ಧೆ ಏರ್ಪಟ್ಟಿದ್ದರೂ ನನ್ನ ಗೆಲುವು ಸುಲಭವಾಗಲಿದೆ ಎಂದು ತುಕಾರಾಮ ಹೇಳುತ್ತಾರೆ.
ಮರು ಆಯ್ಕೆಗೆ ಪತಿ, ಪತ್ನಿಗೆ ಮೊದಲ ಸ್ಪರ್ಧೆ: ಹೊನವಾಡ ಗ್ರಾಮದಲ್ಲೇ ಇನ್ನೊಂದು ದಂಪತಿ ಜೋಡಿ ಗ್ರಾಪಂ ಚುನಾವಣೆ ಸ್ಪರ್ಧೆಗೆ ಇಳಿದಿದೆ. ಫಕ್ರುದ್ದೀನ್ ಮುಲ್ಲಾ ಹಾಗೂ ರೇಷ್ಮಾ ಮುಲ್ಲಾ ದಂಪತಿಯೇ ಪ್ರತ್ಯೇಕ ವಾರ್ಡ್‌ನಿಂದ ಸ್ಪರ್ಧೆಗೆ ಇಳಿದಿರುವ ಜೋಡಿ. ಫಕ್ರುದ್ದೀನ್ ಕಳೆದ ಅವಧಿಯಲ್ಲಿ ಸದಸ್ಯರಾಗಿದ್ದು ಇದೀಗ ಮತ್ತೂಮ್ಮೆ ಸದಸ್ಯರಾಗಲು ಚುನಾವಣಾ ಸ್ಪರ್ಧೆಗೆ ಇಳಿದಿದ್ದಾರೆ. ಫಕ್ರುದ್ದೀನ್ 6ನೇ ವಾರ್ಡ್ ನಿಂದ ಪುನಾರಾಯ್ಕೆ ಬಯಸಿರುವ ತಮ್ಮ ವಿರುದ್ಧ ನೇರ ಸ್ಪರ್ಧೆ ಇದೆ. ಇವರ ಪತ್ನಿ ರೇಷ್ಮಾ 9ನೇ ವಾರ್ಡ್ ನಿಂದ ಕಣಕ್ಕೆ ಇಳಿದಿದ್ದು ಇಬ್ಬರೂ ಎದುರಾಳಿಗಳನ್ನು ಎದುರಿಸಬೇಕಿದೆ.
ಈ ಹಿಂದಿನ ಅವಧಿಯಲ್ಲಿ ಗ್ರಾಪಂ ಸದಸ್ಯರಾಗಿದ್ದಾಗ 14ನೇ ಹಣಕಾಸು ಯೋಜನೆ, ಕೆರೆಯ ಹೂಳೆತ್ತುವಲ್ಲಿ ತೋರಿದ ಕಾಳಜಿ ಹಾಗೂ ಪ್ರಾಮಾಣಿಕತೆಯೇ ತಮ್ಮ ಹಾಗೂ ತಮ್ಮ ಪತ್ನಿಯನ್ನು ಜನರೇ ಸ್ಪರ್ಧೆಗೆ ಇಳಿಸಿದ್ದಾರೆ. ನಾನು ಮಾಡಿದ ಗ್ರಾಮದ ಅಭಿವೃದ್ಧಿ ಕಾರ್ಯಗಳೇ ನಮ್ಮ ಜಯವನ್ನು ಸುಲಭವಾಗಿಸಲಿದೆ ಎಂಬುದು ಫಕ್ರುದ್ದೀನ್ ಅವರ ನಿರೀಕ್ಷೆ. ಹೊನವಾಡ ಗ್ರಾಪಂ ಹಾಗೂ ಗ್ರಾಪಂ ಕೇಂದ್ರ ಸ್ಥಾನದ ನಾಲ್ಕು ವಾರ್ಡ್‌ಗಳಲ್ಲಿ ಸ್ಪ ರ್ಧಿಸಿರುವ ದಂಪತಿ ಜೋಡಿಯಲ್ಲಿ ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ಡಿ. 22ರಂದು ಮತದಾನ ನಡೆಯಲಿದ್ದು ಫಲಿತಾಂಶದ ಬಳಿಕ ಈ ಎರಡೂ ಕುಟುಂಬಗಳ ದಂಪತಿ ಜೋಡಿಯ ಮೂವರರಾಜಕೀಯ ಹಣೆಬರಹ ಹೊರ ಬೀಳಲಿದೆ.