ಚನ್ನರಾಯಪಟ್ಟಣ: ಮಾಗಿಚಳಿಯಲ್ಲಿ ಗ್ರಾಪಂ ಚುನಾವಣೆ ಕಾವು ರಂಗೇರುತ್ತಿದ್ದು, ಗ್ರಾಮಸೌಧ ಪ್ರವೇಶಕ್ಕಾಗಿ ಕಣದಲ್ಲಿ ಇರುವ ಅಭ್ಯರ್ಥಿಗಳು ಹಲವು ಕಸರತ್ತು ನಡೆಸುತ್ತಿದ್ದಾರೆ. ನಿತ್ಯವೂ ಗುಂಡು ತುಂಡಿನ ಪಾರ್ಟಿ ಯನ್ನು ಜೋರಾಗಿ ಮಾಡುತ್ತಿದ್ದಾರೆ.
ಈಗಾಗಲೇ ತಾಲೂಕಿನ 40 ಗ್ರಾಮ ಪಂಚಾಯ್ತಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ತಮಗೆ ನೇರವಾಗಿ ಪೈಪೋಟಿ ನೀಡುವವರನ್ನು ಬೆಂಬಲಿಗರೊಂದಿಗೆ ತೋಟದ ಮನೆಗೆಕರೆಯಿಸಿ ಗುಂಡಿನ ಮತ್ತಿನಲ್ಲಿ ಅವರನ್ನು ತೇಲಿಸುತ್ತಿರುವು ದಲ್ಲದೆ, ಹಣದ ಆಮಿಷವನ್ನೂ ಒಡ್ಡುತ್ತಿದ್ದಾರೆ. ಇದಕ್ಕೆ ಹಲವು ಮಂದಿ ಒಪ್ಪಿದ್ದು, ನಾಮಪತ್ರ ಹಿಂಡೆಯಲು ಮುಂದಾಗುವ ಮುನ್ಸೂಚನೆಗಳು ಕಾಣುತ್ತಿವೆ. ಇನ್ನು ಕೆಲವರು ಈ ಪಂಚಾಯ್ತಿ ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಕಣದಿಂದ ಹಿಂದೆ ಸರಿಯದೆ ಮತ ದಾರರ ಸೆಳೆಯುವ ಸಂಬಂಧ ಹಾಗೂ ಸ್ನೇಹದ ಜಾಡು ಹಿಡಿಯುತ್ತಿದ್ದಾರೆ.
ಗುಂಡು ತುಂಡು: ಕಣದಲ್ಲಿ ಉಳಿಯುವುದು ನಿಶ್ಚಯ ಮಾಡಿಕೊಂಡಿರುವವರು ತಮ್ಮ ಬೆಂಬಲಿಗರು, ಸ್ನೇಹಿತರು, ಆಪ್ತರಿಗೆ ಉಭಯ ಕುಶಲೋಪರಿಯಾಗಿ ಪಾರ್ಟಿಯನ್ನು ನೀಡುತ್ತಿದ್ದಾರೆ. ನಾಮಪತ್ರ ಸಲ್ಲಿಗೆಮುಗಿಯುತ್ತಿದ್ದಂತೆ ಹೋಬಳಿ ಕೇಂದ್ರದ ಸಮೀಪದಲ್ಲಿನ ಡಾಬಾಗಳು, ನಗರದಲ್ಲಿನ ಡಾಬಾ, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಭರ್ತಿಯಾಗುತ್ತಿವೆ. ಅಲ್ಲದೆ, ಕೆಲವು ಮಂದಿ ಲಾಡ್ಜ್ಗಳಲ್ಲಿ ರೂಂಗಳನ್ನು ಬಾಡಿಗೆ ಪಡೆದು ಗೌಪ್ಯವಾಗಿ ಪಾರ್ಟಿ ಮಾಡುತ್ತಿದ್ದಾರೆ.
ಟೋಕನ್ ವ್ಯವಸ್ಥೆ: ಹಿರೀಸಾವೆ, ಬಾಗೂರು, ಶ್ರವಣಬೆಳಗೊಳ, ಉದಯಪುರ, ನುಗ್ಗೇಹಳ್ಳಿ ಹಾಗೂ ನಗರ ವ್ಯಾಪ್ತಿಯ ಡಾಬಾಗಳು ಬೆಳಗ್ಗೆ11 ಗಂಟೆಗೆ ತುಂಬಿ ತುಳುಕುತ್ತಿವೆ. ಕಿರಿಯ ವಯಸ್ಸಿನವರು ಕಣದಲ್ಲಿ ಇದ್ದು ಅವರೊಟ್ಟಿಗೆ ಪಾರ್ಟಿ ಮಾಡಲು ಮುಜುರವಾಗುತ್ತಿದೆ. ಇನ್ನು ಕಣದಲ್ಲಿ ಇರುವ ಹಿರಿಯರು ತಮ್ಮ ಮಕ್ಕಳ ಹಾಗೂ ಮೊಮ್ಮಕ್ಕಳ ಸರಿ ಸಮನಾದವರು ಜೊತೆ ಸೇರಿ ಗುಂಡಿನ ಅಮಲು ಏರಿಸಕೊಳ್ಳಲು ಸಂಕೋಚ ಆಗುತ್ತಿರು ವುದರಿಂದ ಟೋಕನ್ ವ್ಯವಸ್ಥೆಯ ಮೊರೆ ಹೋಗಿದ್ದಾರೆ.ಇನ್ನುಕೆಲವರು ಬಾರ್ ಮಾಲಿಕರೊಂದಿಗೆ ನೇರ ಸಂಪರ್ಕ ಹೊಂದಿದ್ದು, ದೂರವಾಣಿ ಕರೆ ಮಾಡಿ ಅಗತ್ಯ ಮದ್ಯದ ವ್ಯವಸ್ಥೆ ಮಾಡುತ್ತಿದ್ದಾರೆ.
ಟೋಕನಿಂದ ದೊರೆಯುವುದೇನು? ಡಾಬಾ ಹಾಗೂ ರೆಸ್ಟೋರೆಂಟ್‌ಗಳ ಪಾರ್ಟಿಗಳಿಗಾಗಿ ಅಭ್ಯರ್ಥಿಗಳುನೀಡುತ್ತಿರುವ ಟೋಕನಿನಲ್ಲಿ ಅಭ್ಯರ್ಥಿ ಹೆಸರು ಹಾಗೂ ಗ್ರಾಮದ ಹೆಸರು ಇರುತ್ತಿದ್ದು, ಅದನ್ನು ಸಂಬಂಧ ಪಟ್ಟ ಹೋಟೆಲ್‌ಗೆ ನೀಡಿದರೆ ಮದ್ಯ, ಬಿರಿಯಾನಿ ಊಟ, ಬಗೆ ಬಗೆಯ ಮಾಂಸಹಾರಿ ತಿನಿಸುಗಳು ಟೇಬಲ್‌ಗೆ ಬರಲಿವೆ. ಆದರೆ, ಕೆಲವು ತಾವು ಉಂಡು ತಮ್ಮ ಮನೆಗೂ ಊಟ ವನ್ನು ಕಟ್ಟಿಸಿಕೊಂಡು ಹೋಗುತ್ತಿರುವುದರಿಂದ ಅಭ್ಯರ್ಥಿ ಗಳಿಗೆ ನುಂಗಲಾರದ ತುತ್ತಾಗಿದೆ.
ಪ್ರವಾಸದ ವ್ಯವಸ್ಥೆ: ಮಹಿಳೆಯರನ್ನು ತಮ್ಮತ್ತ ಸೆಳೆಯಲ್ಲಿ ಧರ್ಮಸ್ಥಳ, ಹೊರನಾಡು, ಕುಕ್ಕೇಸುಬ್ರಹ್ಮಣ್ಯ, ಶೃಂಗೇರಿ, ಮುರುಡೇಶ್ವರ, ಉಡುಪಿ, ಕೊಲ್ಲೂರು, ಸಿಗಂಧೂರು ಹೀಗೆ ಹಲವು ಪುಣ್ಯಕ್ಷೇತ್ರಗಳಿಗೆ ಸ್ತ್ರೀಶಕ್ತಿ ಸಂಘದ ಮೂಲಕ ಪ್ರವಾಸದ ವ್ಯವಸ್ಥೆ ಮಾಡಲಾಗುತ್ತಿದೆ. ಪುಣ್ಯ ಕ್ಷೇತ್ರದಲ್ಲಿಯೇ ಸೀರೆ, ಮೂಗುಬಟ್ಟು, ಬೆಳ್ಳಿ ಕುಂಕುಮದ ಭರಣಿ, ದೀಪ, ಇತರ ಗಿಫ್ಟ್ ನೀಡುವ ಮೂಲಕ ಗ್ರಾಮ ಸೌಧ ಪ್ರವೇಶಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ನಮ್ಮ ಗ್ರಾಮೀಣ ಭಾಗದ ಮುಖಂಡರುಹಾಗೂ ಪರಿಚಯ ಸ್ಥರು ದೂರವಾಣಿ ಕರೆ ಮಾಡಿ ಹತ್ತಾರುಮಂದಿಗೆಊಟ ನೀಡುವಂತೆಹೇಳುತ್ತಾರೆ. ಡಾಬಾಕ್ಕೆ ಬಂದವರಿಗೆ ನಾವು ಊಟ ನೀಡುತ್ತಿದ್ದೇವೆ, ಇನ್ನು ಕೆಲವರು ಟೋಕನ್ ನೀಡುತ್ತಿದ್ದಾರೆ, ಅದನ್ನು ಪಡೆದು ಮದ್ಯ ಹಾಗೂ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ, ಚುನಾವಣೆ ವೇಳೆ ಇದೆಲ್ಲ ಸಾಮಾನ್ಯ. ಆದರೆ, ಈ ವರ್ಷ ಗ್ರಾಮ ಪಂಚಾಯಿತಿ ಚುನಾವಣೆ ಬಹಳ ಜೋರಾಗಿ ನಡೆಯುತ್ತಿದ್ದು ಉತ್ತಮವಾಗಿ ವ್ಯಾಪಾರ ಆಗುತ್ತಿದೆ.
– ಹೆಸರು ಹೇಳಲಿಚ್ಚಿಸದ ಡಾಬಾ ಮಾಲಿಕ
– ಶಾಮಸುಂದರ್ ಕೆ. ಅಣ್ಣೇನಹಳ್ಳಿ