Advertisement

ಗ್ರಾ.ಪಂ. ಚುನಾವಣೆ ಬಹಿಷ್ಕಾರದ ಎಚ್ಚರಿಕೆ

01:43 AM Dec 08, 2020 | mahesh |

ಬೆಂಗಳೂರು: ಕೇರಳ ಮಾದರಿಯಲ್ಲೇ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಬೇಕು, ಇಲ್ಲದಿದ್ದರೆ ಮುಂಬರುವ ಗ್ರಾಮ ಪಂಚಾಯತ್‌ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ…

Advertisement

-ಇದು ರಾಜ್ಯದ ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಜಿಲ್ಲೆಗಳ ಕೆಲವು ಗ್ರಾಮಗಳ ಹಕ್ಕೊತ್ತಾಯ. ಈ ಭಾಗದ ಶಾಸಕರೂ ಪಕ್ಷಾತೀತವಾಗಿ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

100 ಗ್ರಾ.ಪಂ.ಗಳಲ್ಲಿ ಬಹಿಷ್ಕಾರ
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮಾತ ನಾಡಿ, ಮಲೆನಾಡು ಭಾಗದಲ್ಲಿ ಕಸ್ತೂರಿ ರಂಗನ್‌ ವರದಿ ಸಮಸ್ಯೆ ಒಂದು ಕಡೆ, ಮತ್ತೂಂದು ಕಡೆ ಹುಲಿ ಯೋಜನೆ. ಇದರಿಂದ ಮಲೆನಾಡಿಗರು ಮುಕ್ತವಾಗಿ ಜೀವನ ಸಾಗಿಸದಂತಾಗಿದೆ ಎಂದು ತಿಳಿಸಿದರು. ಸರಕಾರದ ಧೋರಣೆಯನ್ನು ಖಂಡಿಸಿ ಮಲೆನಾಡಿನಲ್ಲಿ 100ಕ್ಕೂ ಹೆಚ್ಚು ಪಂಚಾಯತ್‌ಗಳಲ್ಲಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ ಎಂದರು.

ಕರಾವಳಿಯಲ್ಲೇನು?
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿ, ತಪ್ಪಲಿನ ಹಳ್ಳಿಗಳಲ್ಲಿ ಕಸ್ತೂರಿರಂಗನ್‌ ವರದಿ ಜಾರಿಯ ವಿರುದ್ಧ ಹೋರಾಟಗಳು, ಚುನಾವಣೆ ಬಹಿಷ್ಕಾರದ ಬಗ್ಗೆ ಸಭೆಗಳು ನಡೆದಿವೆಯಾದರೂ ನಿರ್ಧಾರದ ರೂಪ ತಳೆದಿಲ್ಲ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯಲ್ಲಿ ಡಿ. 8ರಂದು ಸಭೆ ನಡೆಯಲಿದೆ. ಮಲೆನಾಡು ರೈತ ಹಿತರಕ್ಷಣ ವೇದಿಕೆ ಗ್ರಾಮವಾರು ಸಭೆ ನಡೆಸಿದ ಸಂದರ್ಭ ಹಲವೆಡೆಗಳಲ್ಲಿ ಮತದಾನ ಬಹಿಷ್ಕಾರಿಸುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಪಂಚಾಯತ್‌ ಚುನಾವಣೆ ಬಹಿಷ್ಕಾರದಿಂದ ವರದಿ ಜಾರಿ ತಡೆ ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಹಲವೆಡೆ ವ್ಯಕ್ತವಾಗಿದೆ.

ಸಮಸ್ಯೆ ಆಗದಂತೆ ಜಾರಿ ಮಾಡಿ
ಬಿಜೆಪಿಯ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಜನ ವಸತಿಗೆ, ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗದಂತೆ ಡಾ| ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ವರದಿ ಅನುಷ್ಠಾನದಿಂದ ಜನಜೀವನಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಯಾವುದೇ ರೀತಿಯಲ್ಲೂ ಅಡ್ಡಿ ಆತಂಕ ಎದುರಾಗದಂತೆ ಎಚ್ಚರ ವಹಿಸಬೇಕು. ಸದ್ಯ ವರದಿಯು ಸಂಪುಟ ಉಪಸಮಿತಿ ಮುಂದೆ ಇರುವುದರಿಂದ, ಈ ಎಲ್ಲ ಅಂಶಗಳನ್ನು ಸಂಪುಟ ಉಪಸಮಿತಿ ಪರಿಗಣಿಸಿ ವರದಿ ಸಲ್ಲಿಸಲಿದೆ ಎಂಬ ವಿಶ್ವಾಸವೂ ಇದೆ ಎಂದು ತಿಳಿಸಿದರು.

Advertisement

ವರದಿ ತಿರಸ್ಕರಿಸಿ
ರಾಜ್ಯ ಸರಕಾರವು ಕಸ್ತೂರಿರಂಗನ್‌ ವರದಿ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಕೇರಳ ಮಾದರಿಯಲ್ಲಿ ವರದಿ ತಿರಸ್ಕರಿಸಬೇಕು ಎಂಬುದು ನಮ್ಮ ಬೇಡಿಕೆ. ಸದನದಲ್ಲಿಯೂ ಆ ಕುರಿತು ಪ್ರಸ್ತಾವಿಸಲು ಸ್ಪೀಕರ್‌ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಸಕಲೇಶಪುರ ಶಾಸಕ ಎಚ್‌.ಕೆ. ಕುಮಾರಸ್ವಾಮಿ ತಿಳಿಸಿದರು. ಗ್ರಾ.ಪಂ. ಚುನಾವಣೆ ಬಹಿಷ್ಕಾರ ಪರಿಹಾರವಲ್ಲ. ಆದರೆ ಸರಕಾರದ ಗಮನ ಸೆಳೆಯಲು ಗ್ರಾಮಸ್ಥರಿಗೂ ಆ ಮಾರ್ಗ ಬಿಟ್ಟು ಬೇರೆ ಇಲ್ಲ. ನಾವು ಆ ಭಾಗದ ಜನರ ಜತೆ ಇದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next