Advertisement

ಒಂದೆಡೆ ತುಲಾಭಾರ ಕೆಲವೆಡೆ 50-50 ಉಳಿದೆಡೆ ನೇರಾನೇರ

08:56 PM Dec 09, 2020 | mahesh |

ಹಳ್ಳಿಗಳಲ್ಲಿನ ಜಂಗೀ ಕುಸ್ತಿಗೆ ವೇದಿಕೆ ಸಿದ್ಧವಾಗಿದೆ. ಪಂಚಾಯತ್‌ ಚುನಾವಣೆಗಳಲ್ಲಿ ಪಕ್ಷಗಳ ನೆರಳಿನಲ್ಲಿ ಅಭ್ಯರ್ಥಿಗಳು ಸೂತ್ರದ ಗೊಂಬೆಗಳಂತೆ ಸ್ಪರ್ಧಿಸುತ್ತಾರೆ. ಹಾಗಾಗಿ ಸೂತ್ರ ಇರುವುದು ಬೆಂಬಲಿತ ಎನ್ನುವ ವ್ಯಾಖ್ಯಾನದಲ್ಲಿ. ಹಳ್ಳಿಗಳಲ್ಲೀಗ ಚುನಾವಣೆ ಚರ್ಚೆ ಕಾವು ಪಡೆದಿದೆ. ಹಲವೆಡೆ ಸಮಸ್ಯೆಗಳೊಂದಿಗೆ ಹಳೆಯದ್ದರ, ಈಗಿನ ಬದಲಾದ ರಾಜಕೀಯ ಸನ್ನಿವೇಶಗಳೂ ಪ್ರಸ್ತಾವವಾಗುತ್ತಿವೆ. ಇಂದಿನಿಂದ ನಮ್ಮ ರೌಂಡಪ್‌ ಆರಂಭ.

Advertisement

ಕುಂದಾಪುರ: ದಿಲ್ಲಿಯ ರಾಜಕೀಯವೇ ಬೇರೆ, ಹಳ್ಳಿ ರಾಜಕೀಯವೇ ಬೇರೆ. ಸದ್ಯಕ್ಕೆ ಗ್ರಾಮಗಳ ಅಖಾಡ ಸಿದ್ಧವಾಗಿದೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಹ ಆರಂಭವಾಗಿದೆ. ಹಾಗೆಯೇ ಎರಡನೇ ಹಂತಕ್ಕೂ ನಾಮಪತ್ರ ಸಲ್ಲಿಕೆಗೂ ಸಿದ್ಧತೆ ನಡೆದಿದೆ. ಕುಂದಾಪುರದ ಹಳ್ಳಿ- ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಚುನಾವಣೆಯ ಚರ್ಚೆ ಜೋರಾಗಿದೆ.

ವಿಶೇಷವೆಂದರೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ನಡೆಯುವಂತೆ ಕೊನೇ ಹಂತದಲ್ಲಿ ಪಕ್ಷಗಳ ಸೇರ್ಪಡೆ, ಪಕ್ಷಾಂತರ ಎಲ್ಲವೂ ಆರಂಭವಾಗಿರುವುದು ವಿಶೇಷ. ಈ ಸೇರ್ಪಡೆ, ಕೊನೆ ಕ್ಷಣದ ಮುಖಂಡರ ಮುನಿಸು, ಸಾಮೂಹಿಕ ಪಕ್ಷಾಂತರ, ಹೊಂದಾಣಿಕೆ ರಾಜಕೀಯವೆಲ್ಲ ಈ ಹಳ್ಳಿ ಅಖಾಡದಲ್ಲಿ ಮಹತ್ವದ್ದೇ.

ಉದಯವಾಣಿ ಪಂಚಾಯತ್‌ ಕುಸ್ತಿಯ ಬೆಳವಣಿಗೆ ಗಳನ್ನು ನೋಡಲು ಗ್ರಾಮಗಳನ್ನು ಹೊಕ್ಕಿದಾಗ ಕಂಡದ್ದು ಪಕ್ಷಗಳ ನೆರಳುಗಳು. ಎಲ್ಲ ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಕುರಿತಾಗಿ ಪ್ರಚಾರ ಅಭಿಯಾನ ಆರಂಭಿಸಿದ್ದಾರೆ.

ತೆಕ್ಕಟ್ಟೆ, ಗೋಪಾಡಿ, ಬೀಜಾಡಿ, ಕಾಳಾವರ, ಕೆದೂರು, ಬೇಳೂರು, ಕೊರ್ಗಿ ಗ್ರಾ.ಪಂ.ಗಳಲ್ಲಿ ತಿರುಗಿದಾಗ ಜನರ ಸಮಸ್ಯೆಗಳೂ ಕಂಡು ಬಂದವು. ಹಾಗೆಯೇ ಅಭ್ಯರ್ಥಿಗಳ ಉತ್ಸಾಹವೂ ಕಂಡಿತು.

Advertisement

ಗೋಪಾಡಿ ಬೇರ್ಪಟ್ಟ ಬಳಿಕ ಬೀಜಾಡಿ ಪಂಚಾಯತ್‌ನಲ್ಲಿ 16 ಸದಸ್ಯರಿದ್ದು, ಕಳೆದ ಬಾರಿ ತಲಾ 8 ಮಂದಿ ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲಿತರಿದ್ದರು. ಆದರೆ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಕಾಂಗ್ರೆಸನ್ನು ಬೆಂಬಲಿಸಿದ ಕಾರಣ ಅಧಿಕಾರಕ್ಕೇರುವಂತಾಯಿತು. ಆಗ ಕಾಂಗ್ರೆಸ್‌ ಬೆಂಬಲಿತರಾಗಿ ಅಧ್ಯಕ್ಷರಾದ ಸಾಕು ಈ ಬಾರಿ ಬಿಜೆಪಿ ಬುಟ್ಟಿಯಲ್ಲಿದ್ದಾರೆ. ಈ ಬೆಳವಣಿಗೆ ಯಾರಿಗೆ ಅನುಕೂಲ, ಇನ್ಯಾರಿಗೆ ಅನನುಕೂಲ ಎಂಬುವುದನ್ನು ಗ್ರಾಮಸ್ಥರೇ ನಿರ್ಧರಿಸಬೇಕು.

ತೆಕ್ಕಟ್ಟೆಯಲ್ಲಿ ಹೊಂದಾಣಿಕೆ ಸೂತ್ರ
14 ಸದಸ್ಯರಿರುವ ತೆಕ್ಕಟ್ಟೆ ಗ್ರಾ.ಪಂ.ನಲ್ಲಿ ಕಳೆದ ಬಾರಿ 10 ಮಂದಿ ಕಾಂಗ್ರೆಸ್‌ ಬೆಂಬಲಿತ, ನಾಲ್ವರು ಬಿಜೆಪಿ ಬೆಂಬಲಿತ ಸದಸ್ಯರಿದ್ದರು. ಈ ಪಂಚಾಯತ್‌ ಇತಿಹಾಸದಲ್ಲೇ ಮೊದಲ ಬಾರಿ ಬಿಜೆಪಿ ಬೆಂಬಲಿತರು ಖಾತೆ ತೆರೆದಿದ್ದರು. ಈ ಬಾರಿ ಅದರ ವಿಸ್ತರಣೆಯ ಆಶಾವಾದ ಕಂಡು ಬರುತ್ತಿದೆ. ಇದರ ಮಧ್ಯೆ ಹೊಂದಾಣಿಕೆ ರಾಜಕೀಯದ ಮಾತೂ ಕೇಳಿಬರುತ್ತಿದೆ. ಸ್ಥಾನ ಹೊಂದಾಣಿಕೆ ಮಾಡಿಕೊಂಡು ಅವಿರೋಧ ಆಯ್ಕೆಗೆ ಮುಂದಾಗುತ್ತೀರಾ ಎಂಬುದಕ್ಕೆ ಉಭಯ ಪಕ್ಷಗಳ ನಾಯಕರದ್ದು ಮೌನವೇ ಉತ್ತರ.

ಗೋಪಾಡಿ ಕಥೆ ಕೇಳಿ
ಬೀಜಾಡಿ ಗ್ರಾ.ಪಂ.ನಿಂದ ಬೇರ್ಪಟ್ಟ ಬಳಿಕ ಗೋಪಾಡಿ ಗ್ರಾ.ಪಂ. ಎದುರಿಸುತ್ತಿರುವ ಎರಡನೇ ಪಂಚಾಯತ್‌ ಚುನಾವಣೆ ಇದು. 4 ವಾರ್ಡ್‌ಗಳಿದ್ದು, 9 ಮಂದಿ ಸದಸ್ಯರ ಆಯ್ಕೆ ನಡೆಯಲಿದೆ. ಕಳೆದ ಬಾರಿ ಇಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಮುನ್ನಡೆ ಪಡೆದು, ಅಧಿಕಾರಕ್ಕೇರಿದ್ದರು. ಇಲ್ಲಿ ಕಾಂಗ್ರೆಸ್‌ಗಿಂತಲೂ ಬಿಜೆಪಿಯೊಳಗಿನ ಎರಡು ಬಣಗಳ ಮಧ್ಯೆಯೇ ಪೈಪೋಟಿ ಸಾಧ್ಯತೆ ಹೆಚ್ಚು. ಇದು ಕಾಂಗ್ರೆಸ್‌ ಬೆಂಬಲಿತರಿಗೆ ವರವಾಗಲೂ ಬಹುದು.

ಕೆದೂರಲ್ಲಿಯೂ ಹೊಂದಾಣಿಕೆಯೇ ?
10 ಸದಸ್ಯ ಸ್ಥಾನದ ಕೆದೂರು ಪಂಚಾಯತ್‌ನಲ್ಲಿ ತಲಾ 5 ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದರು. ಆ ಬಳಿಕ ಹೊಂದಾಣಿಕೆ ಸೂತ್ರದ ಮೂಲಕ ಎರಡೂವರೆ ವರ್ಷ ಉಭಯ ಪಕ್ಷಗಳ ಬೆಂಬಲಿತರು ಅಧಿಕಾರ ಅನುಭವಿಸಿದ್ದರು. ಈ ಬಾರಿಯೂ ಅದೇ ಸೂತ್ರವೇ ಕಾದು ನೋಡಬೇಕಿದೆ.

ಕಾಳಾವರ: ನೇರ ಪೈಪೋಟಿ
ಹಿಂದೆ ದೊಡ್ಡ ಪಂಚಾಯತ್‌ ಆಗಿದ್ದ ಕಾಳಾವರದಿಂದ ಕೊರ್ಗಿ ಹಾಗೂ ಹೆಸ್ಕತ್ತೂರು ಗ್ರಾಮಗಳು ಬೇರ್ಪಟ್ಟಿದ್ದರಿಂದ ಕಾಳಾವರ, ಅಸೋಡು, ವಕ್ವಾಡಿ ಗ್ರಾಮಗಳು ಮಾತ್ರ ಉಳಿದವು. ಇಲ್ಲಿ 16 ಸದಸ್ಯ ಸ್ಥಾನಗಳಿವೆ. ಕಳೆದ ಬಾರಿ ಕಾಂಗ್ರೆಸ್‌ – ಬಿಜೆಪಿ ಬೆಂಬಲಿತರು ಸಮಬಲ ಸಾಧಿಸಿದ್ದು, ಈ ಬಾರಿಯೂ ನೇರ ಪೈಪೋಟಿಯ ಸೂಚನೆಯಿದೆ. ಕೊನೇ ಹಂತದಲ್ಲಿ ಹೊಂದಾಣಿಕೆಯ ಚಾದರ್‌ ಹೊದ್ದುಕೊಂಡರೂ ಅಚ್ಚರಿ ಇಲ್ಲ.

ಹೆಸ್ಕತ್ತೂರು ಹಾಗೂ ಕೊರ್ಗಿಯ ನ್ನೊಳಗೊಂಡ ಕೊರ್ಗಿ ಗ್ರಾ.ಪಂ.ನಲ್ಲಿ 9 ಸದಸ್ಯ ಸ್ಥಾನಗಳಿವೆ. 4 ಬಿಜೆಪಿ, 5 ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಗೆದ್ದಿದ್ದು, ಕಾಂಗ್ರೆಸ್‌ ಬೆಂಬಲಿತ ಗಂಗೆ ಕುಲಾಲ್ತಿ ಅಧ್ಯಕ್ಷರಾಗಿದ್ದರು. ಆದರೆ ಜಯಪ್ರಕಾಶ್‌ ಹೆಗ್ಡೆ ಅವರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್‌ ಬೆಂಬಲಿತ ಕೆಲವು ಸದಸ್ಯರು ಬಿಜೆಪಿಗೆ ಸೇರಿದರು. ಆಗಿನ ಅಧ್ಯಕ್ಷರು ಈಗ ಬಿಜೆಪಿಯಲ್ಲಿದ್ದಾರೆ. ಹಾಗಾಗಿ ಹೊಂದಾಣಿಕೆ ಲೆಕ್ಕಾಚಾರ ಚಾಲ್ತಿಯಲ್ಲಿದೆ.

ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ
5 ವಾರ್ಡ್‌ಗಳಿರುವ ಕುಂಭಾಶಿ ಪಂಚಾಯತ್‌ನಲ್ಲಿ 14 ಸದಸ್ಯ ಸ್ಥಾನಗಳಿವೆ. 13 ಬಿಜೆಪಿ ಬೆಂಬಲಿತ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ಈ ಬಾರಿಯೂ ಏನಾಗುತ್ತೋ ಕಾದು ನೋಡಬೇಕಿದೆ.

ಬೇಳೂರು: ಪುನರಾವರ್ತನೆ
9 ಸದಸ್ಯ ಬಲದ ಬೇಳೂರು ಗ್ರಾ.ಪಂ.ನಲ್ಲಿ ಕಳೆದ 7 ಮಂದಿ ಕಾಂಗ್ರೆಸ್‌ ಬೆಂಬಲಿತರು ಹಾಗೂ ಇಬ್ಬರು ಬಿಜೆಪಿ ಬೆಂಬಲಿತರು ಗೆದ್ದಿದ್ದರು. ಈ ಬಾರಿ ಪುನರಾವರ್ತನೆಯಾಗಲೂ ಬಹುದು.

ಕೋಟೇಶ್ವರ: ತುಲಾಭಾರ !
ಪಟ್ಟಣ ಪಂಚಾಯತ್‌ ಆಗುವ ಅರ್ಹತೆಯಿರುವ ಕೋಟೇಶ್ವರ ಗ್ರಾ.ಪಂ.ನಲ್ಲಿ ಕಳೆದ ಬಾರಿ 26 ಸ್ಥಾನಗಳ ಪೈಕಿ ಒಬ್ಬರು ಪಕ್ಷೇತರ ಹಾಗೂ ಒಬ್ಬರು ಮಾತ್ರ ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದರೆ, ಉಳಿದ 24 ರಲ್ಲಿ ಬಿಜೆಪಿ ಬೆಂಬಲಿತರು ಗೆದ್ದು ಅಧಿಕಾರಕ್ಕೇರಿದ್ದರು. ಆದರೆ ಮೊದಲ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದ ಜಾನಕಿ ಬಿಲ್ಲವ ಅವರನ್ನು ಕೆಳಗಿಳಿಸಿ, ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಇದರ ಪರಿಣಾಮ ಜಾನಕಿ ಬಿಲ್ಲವ ಕಾಂಗ್ರೆಸ್‌ನತ್ತ ಮುಖ ಮಾಡಿದರು. ಹಾಗೆ ನೋಡಿದರೆ ಈ ಬಾರಿ ತುಲಾಭಾರ. ಯಾರದ್ದು ಹೆಚ್ಚಾಗುತ್ತದೋ ನೋಡಬೇಕು.

ಕಸ, ಉಪ್ಪು ನೀರು ಸಮಸ್ಯೆ
ಈ ಗ್ರಾಮಗಳಲ್ಲಿ ಕಂಡು ಬರುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಕಸ ವಿಲೇವಾರಿ ಹಾಗೂ ಉಪ್ಪು ನೀರು. ಹಲವೆಡೆ ಉಪ್ಪು ನೀರಿ ನಿಂದ ಕೃಷಿ ಮಾಡಲು ಸಾಧ್ಯ ವಾಗು ತ್ತಿಲ್ಲ. ಇವೆಲ್ಲವೂ ಕೃಷಿ ಆಧಾರಿತ ಪ್ರದೇಶ ಗಳಾಗಿರುವುದು ವಿಶೇಷ. ಇದರೊಂದಿಗೆ ಕಸ ವಿಲೇವಾರಿ ಘಟಕಗಳ ರಚನೆಯಂಥ ಅಭಿವೃದ್ಧಿ ಕೆಲಸವೂ ಆಗಬೇಕೆಂಬುದು ಜನರ ಆಗ್ರಹ. ಉಳಿದಂತೆ ಕೆಲವೆಡೆ ರಸ್ತೆ ಸಮಸ್ಯೆ ಇದ್ದದ್ದೇ.

ಕೋಣಿ: ಮತದಾನ ಬಹಿಷ್ಕಾರ?
ಕುಂದಾಪುರ ಪುರಸಭೆಗೆ ಹೊಂದಿಕೊಂಡೇ ಇರುವ ಗ್ರಾ.ಪಂ. ಕೋಣಿ. ಇಲ್ಲಿ ಕಳೆದ ಬಾರಿ ಬಿಜೆಪಿ ಬೆಂಬಲಿತ ಆಡಳಿತವಿತ್ತು. ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆಯೇ ನೇರ ಪೈಪೋಟಿ ಸಾಧ್ಯತೆ ಇದೆ. ಇಲ್ಲಿನ ಒಳರಸ್ತೆಗಳೆಲ್ಲ ಹೊಂಡ ಬಿದ್ದಿದ್ದು, ಅವುಗಳ ದುರಸ್ತಿ ಮಾಡದಿದ್ದರೆ ಮತದಾನ ಬಹಿಷ್ಕಾರವನ್ನು ಇಲ್ಲಿನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next