ಹುಬ್ಬಳ್ಳಿ: ಗ್ರಾ.ಪಂ ಪಂಚಾಯತ್ ಕಚೇರಿಯನ್ನು ತಮ್ಮ ಗ್ರಾಮದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಮಲ್ಲಿಗವಾಡ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದು, ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯದಿರಲು ನಿರ್ಧರಿಸಿದ್ದಾರೆ.
ಸತತ ಎರಡನೇ ಬಾರಿ ಗ್ರಾ.ಪಂ ಚುನಾವಣೆ ಬಹಿಷ್ಕರಿಸಿದ್ದು, ಈ ಬಾರಿ ನಾಮಪತ್ರ ವಾಪಾಸ್ಸು ಪಡೆಯುವ ಮೂಲಕ ಸರಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಮಲ್ಲಿಗವಾಡ ಗ್ರಾಮ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯಲ್ಲಿದೆ. ಆದರೆ ಉಮ್ಮಚಗಿ ಗ್ರಾ.ಪಂ ಕಚೇರಿಗೆ ತೆರಳಲು ಸಾರಿಗೆ ವ್ಯವಸ್ಥೆಯಿಲ್ಲ. ಅಲ್ಲದೆ 14 ಕಿ.ಮೀ ಪ್ರಯಾಣಿಸಿ ತಲುಪಬೇಕಾಗಿದೆ ಮತ್ತು ಈ ಗ್ರಾಮದಲ್ಲಿಯೇ ಹೆಚ್ಚಿನ ಜನ ಸಂಖ್ಯೆ ಹಾಗೂ ಮತದಾರರಿರುವುದರಿಂದ ಮಲ್ಲಿಗವಾಡ ಗ್ರಾಮದಲ್ಲಿಯೇ ಗ್ರಾ.ಪಂ ಕಚೇರಿ ಸ್ಥಾಪಿಸಬೇಕು ಎಂಬುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಇದನ್ನೂ ಓದಿ:ಮಟ್ಟು: ಗ್ರಾ.ಪಂಚಾಯತ್ ಚುನಾವಣೆ ಬಹಿಷ್ಕಾರದ ಕೂಗು, ಬೇಡಿಕೆ ಈಡೇರಿಕೆ ಭರವಸೆ ಬಳಿಕ ಮತಚಲಾವಣೆ
ಇಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಬೇಕಾಗಿತ್ತು. ಹೀಗಾಗಿ ಗ್ರಾಮದ ಆರು ಸ್ಥಾನಗಳಿಗೆ 23 ಗ್ರಾಮಸ್ಥರು ನಾಮಪತ್ರ ಸಲ್ಲಿಸಿದ್ದರು. ಸರಕಾರ ತಮ್ಮ ಬೇಡಿಕೆ ಈಡೇರಿಸದ ಹಿನ್ನಲೆಯಲ್ಲಿ ಎಲ್ಲರೂ ನಾಮಪತ್ರ ವಾಪಾಸ್ಸು ಪಡೆದು ಚುನಾವಣೆ ಬಹಿಷ್ಕರಿಸಿದ್ದಾರೆ. ಇದರೊಂದಿಗೆ ವಿದ್ಯುತ್ ಹಾಗೂ ನೀರು ಹೊರತುಪಡಿಸಿ ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯದಿರಲು ಗ್ರಾಮಸ್ಥರು ಹಿರಿಯರ ಸಮ್ಮುಖದಲ್ಲಿ ನಿರ್ಧರಿಸಿದ್ದಾರೆ.
ಎರಡು ಗ್ರಾ.ಪಂ ಚುನಾವಣೆ, ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಬಹಿಷ್ಕರಿಸಿದ್ದು, ಗ್ರಾ.ಪಂ ಕಚೇರಿ ಮಲ್ಲಿಗವಾಡ ಗ್ರಾಮದಲ್ಲಿ ಆಗದ ಹೊರತು ಯಾವುದೇ ಚುನಾವಣೆಗಳಲ್ಲಿ ಪಾಲ್ಗೊಳ್ಳದಿರಲು ತೀರ್ಮಾನ ಕೈಗೊಂಡಿದ್ದಾರೆ.