Advertisement

ಒಣ ತ್ಯಾಜ್ಯ ನಿರ್ವಹಣೆಯಲ್ಲಿ ಕರಾವಳಿ ದಾಪುಗಾಲು

12:32 AM Nov 23, 2021 | Team Udayavani |

ಮಂಗಳೂರು: “ಎಲ್ಲ ಗ್ರಾಮ ಪಂಚಾಯತ್‌ಗಳಿಗೂ ಸ್ವಚ್ಛ ಸಂಕೀರ್ಣ ಘಟಕ’ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ದಾಪುಗಾಲು ಇಡುತ್ತಿದ್ದು, ಗ್ರಾಮೀಣ ಭಾಗದ ಒಣತ್ಯಾಜ್ಯ ವೈಜ್ಞಾನಿಕ ನಿರ್ವಹಣೆಗೆ ವ್ಯವಸ್ಥಿತವಾಗಿ ಸಿದ್ಧಗೊಳ್ಳುತ್ತಿವೆ.

Advertisement

ದ.ಕ. ಜಿಲ್ಲೆಯ ಶೇ. 85ಕ್ಕೂ ಅಧಿಕ ಹಾಗೂ ಉಡುಪಿ ಜಿಲ್ಲೆಯ ಶೇ. 95ಕ್ಕೂ ಅಧಿಕ ಗ್ರಾ.ಪಂ.ಗಳು ಸ್ವತ್ಛ ಸಂಕೀರ್ಣ ಘಟಕಗಳ ಮೂಲಕ ಒಣತ್ಯಾಜ್ಯ ಶೇಖರಣೆ, ವಿಂಗಡಣೆ, ನಿರ್ವಹಣೆ ಆರಂಭಿಸಿವೆ. ದ.ಕ.ದ 223 ಗ್ರಾ.ಪಂ.ಗಳ ಪೈಕಿ 153ರಲ್ಲಿ ಹಾಗೂ ಉಡುಪಿ ಜಿಲ್ಲೆಯ 155 ಗ್ರಾ.ಪಂ.ಗಳ ಪೈಕಿ 152ರಲ್ಲಿ ಘಟಕ ಕಾರ್ಯಾಚರಿಸುತ್ತಿದೆ.

8ರಿಂದ 25 ಲ.ರೂ. ವೆಚ್ಚ
ಗ್ರಾ.ಪಂ.ಗಳಿಗೆ ಲಭ್ಯವಿರುವ ವಿವಿಧ ಅನುದಾನಗಳು, ಸಂಗ್ರಹವಾಗುವ ಕಸದ ಅಂದಾಜು ಪ್ರಮಾಣಕ್ಕೆ ಅನುಗುಣವಾಗಿ ಕನಿಷ್ಠ 8ರಿಂದ ಗರಿಷ್ಠ 25 ಲ.ರೂ. ವೆಚ್ಚದಲ್ಲಿ ಘಟಕ ನಿರ್ಮಿಸಲಾಗುತ್ತಿದೆ. ಉಡುಪಿಯಲ್ಲಿ ಬಹುತೇಕ ಘಟಕಗಳು 8 ರಿಂದ 15 ಲ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿವೆ. ದ.ಕ. ದಲ್ಲಿ ಕೆಲವೆಡೆ 25 ಲ.ರೂ. ವರೆಗೂ ವೆಚ್ಚ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಭವಿಷ್ಯದಲ್ಲಿ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ಘಟಕಗಳು ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.

5 ತಾಲೂಕುಗಳಲ್ಲಿ ಶೇ. 100
ಉಡುಪಿ ಜಿಲ್ಲೆಯ 7 ತಾಲೂಕುಗಳ ಪೈಕಿ 5 ಶೇ. 100 ಸಾಧನೆ ಮಾಡಿವೆ. ದ.ಕ. ಜಿಲ್ಲೆಯ 202 ಗ್ರಾ.ಪಂ.ಗಳಿಗೆ ಡಿಪಿಆರ್‌(ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಲಾಗಿದ್ದು, 186 ಗ್ರಾ.ಪಂ.ಗಳ ಡಿಪಿಆರ್‌ ಮಂಜೂರಾಗಿದೆ. 153 ಕಾರ್ಯಾಚರಿಸುತ್ತಿದ್ದು 33 ಪ್ರಗತಿಯಲ್ಲಿವೆ. 35ಕ್ಕೆ ನಿವೇಶನ ಬಾಕಿ ಇದೆ. ಮಂಗಳೂರು ತಾಲೂಕಿನಲ್ಲಿ 18, ಮೂಡುಬಿದಿರೆಯಲ್ಲಿ 5, ಬಂಟ್ವಾಳದಲ್ಲಿ 40, ಪುತ್ತೂರಿನಲ್ಲಿ 19, ಕಡಬದಲ್ಲಿ 16, ಸುಳ್ಯದಲ್ಲಿ 20 ಮತ್ತು ಬೆಳ್ತಂಗಡಿಯಲ್ಲಿ 35 ಘಟಕಗಳು ಕಾರ್ಯಾಚರಿಸುತ್ತಿವೆ.

ಇದನ್ನೂ ಓದಿ:ಸಿಬಿಎಸ್‌ಇ ಫ‌ಲಿತಾಂಶ: ಡಿ.6ಕ್ಕೆ ವಿದ್ಯಾರ್ಥಿಗಳ ಅರ್ಜಿ ವಿಚಾರಣೆ

Advertisement

ಸುಳ್ಯ ಗರಿಷ್ಠ ಶೇ. 91 ಸಾಧನೆ ಮಾಡಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಕಾಪು, ಬ್ರಹ್ಮಾವರ ಮತ್ತು ಹೆಬ್ರಿ ತಾಲೂಕುಗಳು ಶೇ. 100, ಬೈಂದೂರು ಶೇ. 93 ಹಾಗೂ ಉಡುಪಿ ಶೇ. 87.5 ಸಾಧನೆ ಮಾಡಿವೆ. ಜಾಗದ ಅಲಭ್ಯತೆ ಇರುವಲ್ಲಿ 2ರಿಂದ 4 ಗ್ರಾ.ಪಂ.ಗಳಿಗೆ ಒಂದು ಘಟಕವನ್ನು ನಿರ್ಮಿಸಲಾಗಿದೆ. ಕೆಲವೆಡೆ ಸರಕಾರದ ಹಳೆಯ ಕಟ್ಟಡಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತಿದೆ.

ಅನುದಾನ ಎಲ್ಲಿಂದ?
ಸ್ವಚ್ಛ ಸಂಕೀರ್ಣ ಘಟಕಗಳ ನಿರ್ಮಾಣಕ್ಕೆ ಸ್ವತ್ಛ ಭಾರತ್‌ ಮಿಷನ್‌(ಗ್ರಾಮೀಣ) ಯೋಜನೆ ಹಂತ 2ರ ಅನುದಾನ, ಗ್ರಾ.ಪಂ.ನ ಅನುದಾನವನ್ನು ಬಳಸಲಾಗುತ್ತಿದೆ. ನರೇಗಾ ಯೋಜನೆಯಡಿಯೂ ಘಟಕ ನಿರ್ಮಿಸಲು ಅವಕಾಶವಿದೆ. ಹಸಿ ತ್ಯಾಜ್ಯ ನಿರ್ವಹಣೆಗೆ ಘಟಕದ ಅಗತ್ಯವಿದ್ದರೆ ಅದಕ್ಕೂ ಸ್ವಚ್ಛ ಭಾರತ್‌ ಮಿಷನ್‌ನಿಂದ ಅನುದಾನ ನೀಡಲಾಗುತ್ತಿದೆ. ಇತರ ಲಭ್ಯ ಅನುದಾನಗಳ ಬಳಕೆಗೂ ಅವಕಾಶವಿದೆ.

10 ತಿಂಗಳಲ್ಲಿ 72 ಘಟಕ
ಗ್ರಾಮೀಣ ಭಾಗದಲ್ಲಿ ಒಣತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿ ವಿಂಗಡಣೆ ಮಾಡಿ ಅನಂತರ ವಿಲೇವಾರಿಗೆ ಸಿದ್ಧಗೊಳಿಸುವಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳ ಪಾತ್ರ ಪ್ರಮುಖವಾಗಿದೆ. ದ.ಕ ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ 72 ಘಟಕಗಳಿಗೆ ಜಾಗ ಮಂಜೂರಾಗಿದೆ. ತ್ಯಾಜ್ಯ ನಿರ್ವಹಣೆಗೆ ಎಲ್ಲರ ಸಹಕಾರ ಅತ್ಯಗತ್ಯ.
– ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

ಅಗತ್ಯವಿದ್ದರೆ ಬಹುಗ್ರಾಮ ಘಟಕ
ಕಳೆದ ಒಂದು ವರ್ಷದಲ್ಲಿ 62ಕ್ಕೂ ಅಧಿಕ ಸ್ವಚ್ಛ ಸಂಕೀರ್ಣ ಘಟಕ ನಿರ್ಮಿಸಲಾಗಿದೆ. ಅನುದಾನದ ಕೊರತೆ ಇಲ್ಲ. ಜಾಗದ ಕೊರತೆ ಇರುವಲ್ಲಿ 2-3 ಗ್ರಾ.ಪಂ.ಗಳಿಗೆ ಒಂದು ಘಟಕ (ಬಹುಗ್ರಾಮ ಘಟಕ) ನಿರ್ಮಿಸಲಾಗಿದೆ. ಕೆಲವು ಗ್ರಾ.ಪಂ.ಗಳಲ್ಲಿ ಹಸಿ ತ್ಯಾಜ್ಯ ನಿರ್ವಹಣೆಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
– ಡಾ| ನವೀನ್‌ ಭಟ್‌, ಉಡುಪಿ ಜಿ.ಪಂ ಸಿಇಒ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next