ಮಹದೇವಪುರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹಗೊಳ್ಳುವ ತೆರಿಗೆಯನ್ನು ಸೋರಿಕೆಯಾಗದಂತೆ ನೋಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಶಾಸಕ ಅರವಿಂದ ಲಿಂಬಾವಳಿ ಸಲಹೆ ನೀಡಿದ್ದಾರೆ.
ಕ್ಷೇತ್ರದ ರಾಂಪುರ ಗ್ರಾಮದಲ್ಲಿ ನಡೆದ ದೊಡ್ಡಗುಬ್ಬಿ ಗ್ರಾಮ ಪಂಚಾಯಿತಿಯ 2017- 18ರ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ದೇಶ ಅಭಿವೃದ್ಧಿಗೊಳ್ಳಲು ಮೊದಲು ಗ್ರಾಮಗಳು ಅಭಿವೃದ್ಧಿಯಾಗಬೇಕು. ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ವಲಸಿಗರ ಸಂಖ್ಯೆ ಹೆಚ್ಚು.
ಹೀಗಾಗಿ ಹಲವು ವಸತಿ ಸಮುಚ್ಚಯಗಳು ನಿರ್ಮಾಣವಾಗುತ್ತಿವೆ. ತೆರಿಗೆ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಪಾಲಿಕೆಗೆ ಅಧಿಕ ತೆರಿಗೆ ಪಾವತಿಸುವ ಕ್ಷೇತ್ರ ಎಂಬ ಹೆಗ್ಗಳಿಕೆ ಮಹದೇವಪುರದ್ದಾಗಿದೆ. ಗ್ರಾಮ ಪಂಚಾಯಿತಿಗಳೂ ತೆರಿಗೆಯನ್ನು ಉತ್ತಮ ಕಾರ್ಯಗಳಿಗೆ ವ್ಯಯಿಸುವ ಮೂಲಕ ತೆರಿಗೆ ಸೋರಿಕೆಯಾಗದಂತೆ ಗಮನಹರಿಸಬೇಕು,’ ಎಂದು ಕಿವಿ ಮಾತು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರ ಮಹದೇವಪರ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಿಗೆ ಬಿಬಿಎಂಪಿಯ ಸವಲತ್ತುಗಳನ್ನು ಒದಗಿಸಲು ಶ್ರಮಿಸಿತ್ತು. ಆದರೆ ಇಂದಿನ ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಹಿಂಜರಿಯುತ್ತಿದೆ. ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಗ್ರಾಮಗಳ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಸವಲತ್ತು ಕಲ್ಪಿಸುತ್ತಿದೆ ಎಂದರು.
2014ರ ಹಣಕಾಸು ಆಯೋಗ ಗ್ರಾಮ ಪಂಚಾಯಿತಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ಗ್ರಾಮಗಳು ಈ ಅನುದಾನವನ್ನು ಬಳಸಿಕೊಂಡು ಸವಲತ್ತು ಕಲ್ಪಿಸಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಣೇಶ್, ಮಾಲಾ ಮಾರುತಿ, ಗ್ರಾ.ಪಂ ಅಧ್ಯಕ್ಷ ಮಾರುತಿ ಕುಮಾರ್, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರೋಹಿತ್ ಮುಖಂಡರಾದ ಕಾಂತಕುಮಾರ್ ಮತ್ತಿತರರು ಇದ್ದರು.