ಸುರಪುರ: ತಾಲೂಕಿನ ಆಲ್ದಾಳ ಪಿಡಿಒ ಸ್ವರಸ್ವತಿ ಪತ್ತಾರ ಅವರು 15ನೇ ಹಣಕಾಸು ಯೋಜನೆ ಅಡಿ ಲಕ್ಷಾಂತರ ರೂ. ಅನುದಾನ ಲೂಟಿ ಮಾಡಿದ್ದಾರೆ. ಈ ಕುರಿತು ಸೂಕ್ತ ತನಿಖೆ ಮಾಡಿ ಪಿಡಿಒ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರು ತಾಪಂ ಕಾರ್ಯಾಲಯ ಎದುರು ಧರಣಿ ಆರಂಭಿಸಿದ್ದಾರೆ. ಧರಣಿ ನಿರತರು ಪಿಡಿಒ ವಿರುದ್ಧ ಧಿಕ್ಕಾರ ಕೂಗಿದರು.
ತಾಪಂ ಇಒ ಚಂದ್ರಶೇಖರ ಪವಾರ್ ಧರಣಿ ನಿರತರೊಂದಿಗೆ ಚರ್ಚಿಸಿದರು. ಜಿಪಂ ಸಿಎಸ್ ಅವರು ಸ್ಥಳಕ್ಕೆ ಆಗಮಿಸಿ ಪಿಡಿಒ ಅವರನ್ನು ಅಮಾನತು ಮಾಡುವುದಾಗಿ ಲಿಖೀತ ಭರವಸೆ ನೀಡುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಧರಣಿ ನಿರತರು ಪಟ್ಟು ಹಿಡಿದರು.
ಸಂಜೆವರೆಗೂ ಧರಣಿ ಮುಂದುವರಿದಿತ್ತು. ಗ್ರಾಮದ ಮುಖಂಡ ರಮೇಶ ದೊರೆ ಆಲ್ದಾಳ ಮಾತನಾಡಿ, ಪಿಡಿಒ ಅವರು ಸಾರ್ವಜನಿಕರ ಕುಂದು ಕೊರತೆಗೆ ಸ್ಪಂದಿಸುತ್ತಿಲ್ಲ. ಇದುವರೆಗೆ ಒಮ್ಮೆಯೂ ಗ್ರಾಮ ಸಭೆ ನಡೆಸಿಲ್ಲ. ಆ.15ರಂದು ಸ್ವಾತಂತ್ರ್ಯ ದಿನಾಚರಣೆಗೂ ಬಂದಿಲ್ಲ. ಪಿಡಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ನಾಗರತ್ನ ದೋರನಳ್ಳಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ನರಸಮ್ಮ ಕಟ್ಟಿಮನಿ, ಸದಸ್ಯರಾದ ನಿಂಗಣ್ಣ ಕಿಲ್ಲೇದಾರ, ತಿರುಪತಿ ಹುದ್ದಾರ, ಶಿವಗಂಗಮ್ಮ ದೊರೆ, ನಬಿಪಟೇಲ್ ಲಕ್ಷ್ಮೀ ಅನ್ಸೂರ, ವೆಂಕಟನಾಯಕ, ಈರಮ್ಮ, ಶಾಂತಮ್ಮ, ಶಂಕ್ರಗೌಡ, ಹನುಮಂತ, ಪೀರಮ್ಮ, ವಿವೇಕ, ಅಯ್ಯಮ್ಮ, ಲಕ್ಷ್ಮೀ, ಪರಮಣ್ಣ, ಶರಣಪ್ಪ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಬೆಂಬಲಿತ ಸರ್ವ ಸದಸ್ಯರು ಭಾಗವಹಿಸಿದ್ದರು.