Advertisement

ಗ್ರಾ.ಪಂ. ಮೂಲಕ ಮೊಬೈಲ್‌ ಸೇವಾದಾರರ ಮಾಹಿತಿ

02:50 PM May 25, 2017 | Team Udayavani |

ಮಂಗಳೂರು: ದೇಶದ ಪ್ರತಿ ಗ್ರಾಮ ವ್ಯಾಪ್ತಿಯಲ್ಲೂ ಮೊಬೈಲ್‌ ಸಂಪರ್ಕ ಕಲ್ಪಿಸುವ ಜತೆಗೆ ಮಾಹಿತಿ ತಂತ್ರ ಜ್ಞಾನದ ಸೌಲಭ್ಯವನ್ನು ಗ್ರಾಮಾಂತರ ಭಾಗಕ್ಕೆ ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರತೀ ಗ್ರಾ.ಪಂ.ಗಳಿಗೆ ಪತ್ರ ಬರೆದು ಆಯಾ ಗ್ರಾಮದ ಮೊಬೈಲ್‌ ಸೇವಾದಾರರ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದೆ.
 
ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಮೊಬೈಲ್‌ ಸೇವಾದಾರರ ಮಾಹಿತಿ ನೀಡುವಂತೆ ಕೇಂದ್ರ ದೂರ ಸಂಪರ್ಕ ಇಲಾಖೆ ರಾಜ್ಯ ಸರಕಾರಕ್ಕೆ ಕಳೆದ ವರ್ಷವೇ ಪತ್ರ ಬರೆದು ಕೋರಿತ್ತು. ಅದರಂತೆ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂ.ರಾಜ್‌ ಇಲಾಖೆ ಯಿಂದ ಎಲ್ಲ ಜಿ.ಪಂ.ನ ಯೋಜನಾ ವ್ಯವಸ್ಥಾಪಕರಿಗೆ/ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿಗಳಿಗೆ/ ಗ್ರಾ.ಪಂ.ನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ರವಾನೆಯಾಗಿದೆ.

Advertisement

ಪ್ರತೀ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ವ್ಯಾಪ್ತಿಯಲ್ಲಿರುವ ಬಿಎಸ್‌ಎನ್‌ಎಲ್‌, ಏರ್‌ಟೆಲ್‌ ಸೇರಿದಂತೆ ಮೊಬೈಲ್‌ ಸೇವಾದಾರರ ಮೂಲಕ ಅಥವಾ ಮೊಬೈಲ್‌ ಹೊಂದಿರುವವರಿಂದಲೇ ಮಾಹಿತಿ ಸಂಗ್ರಹಿಸಬೇಕಾಗಿದೆ. ಪ್ರತಿ ಗ್ರಾಮದಿಂದ ಸಂಗ್ರಹಿಸುವ ಮೊಬೈಲ್‌ ಸಂಖ್ಯೆಗಳನ್ನು ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಕಾಪಾಡ ಬೇಕಾಗಿದೆ. ಇದಕ್ಕಾಗಿ ಪ್ರತ್ಯೇಕ ವೆಬ್‌ಪೋರ್ಟಲ್‌ ಕೂಡ ರಚಿಸಲಾಗಿದೆ. ಜಿಲ್ಲಾ ಮಾಹಿತಿ ಅಧಿಕಾರಿ (ಡಿಐಒ)ಯಲ್ಲಿ ಇದರ ಪಾಸ್‌ವರ್ಡ್‌ ಇರಲಿದೆ. ಪ್ರತೀ ಪಂಚಾಯತ್‌ನಿಂದ ಸಂಗ್ರಹಿಸುವ ಮೊಬೈಲ್‌ ಸಂಖ್ಯೆಗಳನ್ನು ತಾಲೂಕು ಇಒ (ತಾ.ಪಂ. ಕಾರ್ಯನಿರ್ವಹಣಾಧಿಕಾರಿ)ಗಳು ಡಿಐಒ ಅವರಿಂದ ಪಾಸ್‌ವರ್ಡ್‌ ಕೇಳಿ, ವೆಬ್‌ಪೋರ್ಟಲ್‌ನಲ್ಲಿ ಭರ್ತಿ ಮಾಡಬೇಕು.

ದೇಶದ ಗ್ರಾಮಾಂತರ ಭಾಗಕ್ಕೂ ಸರಕಾರದ ಎಲ್ಲ ಯೋಜನೆಗಳ ಮಾಹಿತಿಗಳು ಮೊಬೈಲ್‌ ಮೂಲಕ ದೊರೆಯುವಂತಾಗಬೇಕು ಹಾಗೂ ಮಾಹಿತಿ ತಂತ್ರಜ್ಞಾನದ ಸೇವೆ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕು ಎಂಬ ನೆಲೆಯಲ್ಲಿ ಕೇಂದ್ರ ಸರಕಾರ ಈ ಕ್ರಮಕ್ಕೆ ಮುಂದಾಗಿವೆ. ಇದರಂತೆ ಪ್ರತೀ ಪಂಚಾಯತ್‌ನವರು ತಮ್ಮ ವ್ಯಾಪ್ತಿಯ ಮೊಬೈಲ್‌ ಬಳಕೆದಾರರ ಸಂಖ್ಯೆ ನೀಡಬೇಕಿದೆ.

ಮೊಬೈಲ್‌ ಸಂಖ್ಯೆಗಳನ್ನು ಪ್ರತೀ ಜಿಲ್ಲೆಯಲ್ಲಿ ಸಂಗ್ರಹ ಮಾಡುವ ಉದ್ದೇಶದಿಂದ ಪ್ರತ್ಯೇಕ ವೆಬ್‌ ಪೋರ್ಟ್‌ಲ್‌ ರಚಿಸಲಾಗಿದೆ. ಇದಕ್ಕೆ ಜಿಲ್ಲಾ ಮಾಹಿತಿ ಅಧಿಕಾರಿ (ಡಿಐಒ)ಯಲ್ಲಿ ಪಾಸ್‌ವರ್ಡ್‌ ಇರಲಿದೆ. ಪ್ರತೀ ಪಂಚಾಯತ್‌ನಿಂದ ಸಂಗ್ರಹಿಸುವ ಮೊಬೈಲ್‌ ಸಂಖ್ಯೆಗಳನ್ನು ಪ್ರತೀ ತಾಲೂಕು ಇಒ (ತಾ.ಪಂ. ಕಾರ್ಯನಿರ್ವಹಣಾಧಿಕಾರಿ)ಗಳು ಡಿಐಒ ಅವರಿಂದ ಪಾಸ್‌ವರ್ಡ್‌ ಕೇಳಿ, ವೆಬ್‌ಪೋರ್ಟಲ್‌ನಲ್ಲಿ ಭರ್ತಿ ಮಾಡಬೇಕು. 

ಮಾಹಿತಿ ಸಂಗ್ರಹಣೆಗೆ ಮಾಹಿತಿಯ ಕೊರತೆ…!
ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮೊಬೈಲ್‌ ಸೇವಾದಾರರ ಮಾಹಿತಿ ನೀಡುವಂತೆ ಕಳೆದ ವರ್ಷವೇ ಕೇಂದ್ರ ಸರಕಾರ
ದಿಂದ ಪತ್ರ ರವಾನೆಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ಪೂರಕ ಕೆಲಸ ನಡೆಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎರಡನೇ ಬಾರಿಗೆ ಜಿ.ಪಂ./ತಾ.ಪಂ. ಹಾಗೂ ಗ್ರಾ.ಪಂ.ಗೆ ಪತ್ರ ಬರೆದು ವಿಳಂಬವಿಲ್ಲದೆ ಮೊಬೈಲ್‌ ಸೇವಾದಾರರ ಮಾಹಿತಿ ನೀಡುವಂತೆ ಸೂಚಿಸಿದೆ. ಎರಡನೇ ಪತ್ರ ಬಂದು ವಾರ ಎರಡಾಗುತ್ತಿದ್ದರೂ ಜಿಲ್ಲೆಯ ಬಹುತೇಕ ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿಗೆ, ಕೆಲವು ಪಂಚಾಯತ್‌ನವರಿಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿ ಇದ್ದಂತಿಲ್ಲ. ವಿಚಾರಿಸಿದಾಗ, ಈ ಬಗ್ಗೆ ಪರಿಶೀಲಿಸುವುದಾಗಿಯೇ ಉತ್ತರ ನೀಡುತ್ತಿದ್ದಾರೆ.

Advertisement

ಎಲ್ಲ ಪಂಚಾಯತ್‌ಗೆ  ಸೂಚನೆ ರವಾನೆ
ಮೊಬೈಲ್‌ ಸೇವಾದಾರರ ಮಾಹಿತಿ ನೀಡುವಂತೆ ಸರಕಾರದಿಂದ ಈಗಾಗಲೇ ಪತ್ರ ಬಂದಿದೆ. ಎಲ್ಲ ತಾಲೂಕು ಇ.ಒ. ಅವರಿಗೆ ಇದನ್ನು ಕಳುಹಿಸಲಾಗಿದೆ. ಅವರು ಪಂಚಾಯತ್‌ಗಳಿಗೆ ಸೂಚಿಸಿದ್ದಾರೆ. ಮಾಹಿತಿ ಸಂಗ್ರಹಿಸುವ ಕೆಲಸವನ್ನು ತುರ್ತಾಗಿ ಮಾಡುವಂತೆ ಸೂಚನೆ ನೀಡಲಾಗಿದೆ.

– ಎನ್‌.ಆರ್‌. ಉಮೇಶ್‌, 
ಉಪಕಾರ್ಯದರ್ಶಿ ದ.ಕ. ಜಿ.ಪಂ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next