Advertisement

ಅಂಗನವಾಡಿ ಅಭಿವೃದ್ಧಿಗೆ ಗ್ರಾ.ಪಂ. ಆರೋಗ್ಯ ಕರ

03:00 AM Mar 17, 2019 | Team Udayavani |

ಬಜಪೆ: ಗ್ರಾಮ ಪಂಚಾಯತ್‌ಗಳು ಸಂಗ್ರಹಿಸುವ ಆರೋಗ್ಯ ಕರವನ್ನು ಇನ್ನು ಆಯಾ ಗ್ರಾಮದ ಅಂಗನವಾಡಿ ಕೇಂದ್ರಗಳ ಮೂಲ ಸೌಕರ್ಯಗಳಿಗೆ ಬಳಸಲಾಗುವುದು. ಈ ಸಂಬಂಧ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳು ಮೂಲ ಸೌಕರ್ಯಗಳಿಂದ ನಳನಳಿಸಬಹುದು. ಇಲಾಖೆಯ ಆದೇಶದಡಿ ದಕ್ಷಿಣ ಕನ್ನಡ ಜಿ.ಪಂ. ಸಿಇಒ ಅವರು ಎಲ್ಲ ಗ್ರಾಮ ಪಂಚಾಯತ್‌ಗಳ ಪಿಡಿಒಗಳು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Advertisement

ಈಗ ಗ್ರಾ.ಪಂ.ಗಳಿಗೂ ವಿಸ್ತರಣೆ
ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಪೂರೈಸಲು ಆಯಾ ಗ್ರಾ.ಪಂ. ಹಾಗೂ ನಗರ ಪ್ರದೇಶದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕೆಂದು 2018ರ ಅ. 16 ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು. 2018ರ ನ. 28ರಂದು ನಡೆದ ಇನ್ನೊಂದು ಸಭೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ತಾವು ಸಂಗ್ರಹಿಸುವ ಆರೋಗ್ಯ ಕರವನ್ನು ಅಂಗನವಾಡಿ ಕೇಂದ್ರಗಳಿಗೆ ಸೌಲಭ್ಯ ಒದಗಿಸಲು ಬಳಸುವಂತೆ ಸೂಚಿಸಲಾಗಿತ್ತು. ಇದನ್ನೀಗ ಗ್ರಾ.ಪಂ.ಗಳಿಗೂ ವಿಸ್ತರಿಸಲಾಗಿದೆ. ಮನೆ ಕಟ್ಟಡ ತೆರಿಗೆಯ ಶೇ.15 ಗ್ರಾ.ಪಂ.ಗಳು ಆಯಾ ಗ್ರಾಮದಲ್ಲಿ ಮನೆ ಕಟ್ಟಡ ತೆರಿಗೆಯ ಮೇಲೆ ಶೇ.15 ಆರೋಗ್ಯ ಕರವನ್ನು ವಿಧಿಸುತ್ತವೆ. ಇನ್ನು ಇವೆಲ್ಲವೂ ಆಯಾ ಗ್ರಾಮದ ಅಂಗನವಾಡಿಗಳ ಮೂಲ ಸೌಕರ್ಯಕ್ಕೆ ಬಳಸಬಹುದಾಗಿದೆ.

ಸ್ವಂತ ಜಾಗ, ಕಟ್ಟಡವಿಲ್ಲ ವಿದ್ಯುತ್‌ ಬಿಲ್ಲಿಗೂ ಅಡ್ಡಿ
ಮಕ್ಕಳ ಆರೋಗ್ಯವನ್ನು ಕಾಪಾಡಲು ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಅತೀ ಅಗತ್ಯ. ಕೆಲವೆಡೆ ಸ್ವಂತ ಜಾಗ ಹಾಗೂ ಕಟ್ಟಡ ಇಲ್ಲ; ಖಾಸಗಿ ಸ್ಥಳದಲ್ಲಿ ನಡೆಯುತ್ತಿವೆ. ಉದಾಹರಣೆಗೆ, ಮಂಗಳೂರು ದಕ್ಷಿಣದಂಥ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಅಂಗನವಾಡಿ ಗಳಿಗೆ ಸ್ವಂತ ಜಾಗ, ಕಟ್ಟಡ ಇಲ್ಲ. ಇದರಿಂದ ಅನುಕೂಲವಾಗಲಿದೆ.

ಅಂಗನವಾಡಿ ಕೇಂದ್ರಗಳ ಮೂಲ ಸೌಕರ್ಯಗಳಿಗೆ ಗ್ರಾ.ಪಂ. ಆರೋಗ್ಯ ಕರವನ್ನು ಬಳಸಬಹುದು ಎಂಬ ಆದೇಶದಿಂದ ಕೇಂದ್ರಗಳ ಕಟ್ಟಡ ವಿಸ್ತರಣೆ, ಹಳೆಯ ಅಂಗನವಾಡಿ ಕೇಂದ್ರದ ನವೀಕರಣ, ದಾಸ್ತಾನು ಕೊಠಡಿ, ಅಡುಗೆ ಕೋಣೆ ನಿರ್ಮಾಣ ಇತ್ಯಾದಿ ಮಾಡಬಹುದು. ಕಾಂಪೌಂಡ್‌ ಮಾಡಲು ಅವಕಾಶ ಇದೆ. ಈ ಹಿಂದೆ ನರೇಗಾ ಯೋಜನೆಯಡಿ ಕಾಂಪೌಂಡ್‌ ನಿರ್ಮಿಸಲು ಅವಕಾಶ ಇತ್ತು, ಈಗ ಇಲ್ಲ. ತಾಲೂಕಿನ 55 ಗ್ರಾ.ಪಂ.ಗಳಲ್ಲಿ 38 ಗ್ರಾ.ಪಂ.ಗಳು ಅಂಗನವಾಡಿ ಕೇಂದ್ರದ ವಿದ್ಯುತ್‌ ಬಿಲ್‌ ಕಟ್ಟುತ್ತಿದ್ದು, ಇನ್ನು ಗ್ರಾ.ಪಂ.ಗಳೇ ಕಟ್ಟಬಹುದಾಗಿದೆ. 
ಶ್ಯಾಮಲಾ ಸಿ.ಕೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿ,  ಮಂಗಳೂರು ಗ್ರಾಮಾಂತರ

 ಸುಬ್ರಾಯ ನಾಯಕ್‌ ಎಕ್ಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next