Advertisement

ಸರಕಾರಕ್ಕೆ ಬೇಡವಾದ ಗ್ರಾಮ ಪಂಚಾಯತ್ ಚುನಾವಣೆ

11:16 PM Oct 16, 2020 | mahesh |

ಬೆಂಗಳೂರು: ಗ್ರಾಮ ಪಂಚಾಯತ್‌ ಚುನಾವಣೆ ನಡೆಸಲು ಸಿದ್ಧ ಎನ್ನುತ್ತಿದ್ದ ಸರಕಾರ ಈಗ ವರಸೆ ಬದಲಾ ಯಿಸಿದ್ದು, ಚುನಾವಣೆ ಮುಂದೂಡುವಂತೆ ಮತ್ತೂಮ್ಮೆ ಆಯೋಗದ ಮೊರೆ ಹೋಗಿದೆ.

Advertisement

ಆಯೋಗವು ಚುನಾವಣೆ ನಡೆಸಲು ಎಲ್ಲ ರೀತಿಯಲ್ಲೂ ಸಜ್ಜಾಗಿರುವ ಹಂತ ದಲ್ಲಿ ಮುಂದೂಡುವುದಕ್ಕೆ ಸರಕಾರ ಪಟ್ಟು ಹಿಡಿದಿದೆ. ಆದರೆ, ಆಯೋಗವು ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದ್ದು, ಸರಕಾರ ಇಕ್ಕಟ್ಟಿಗೆ ಸಿಲುಕಿದೆ.

ಸರಕಾರದ ಜತೆಗೆ ಮೂರು ರಾಜಕೀಯ ಪಕ್ಷಗಳು ಕೂಡ ಸದ್ಯಕ್ಕೆ ಚುನಾವಣೆ ಬೇಡ ಎಂದು ಆಯೋಗಕ್ಕೆ ಪತ್ರ ಬರೆದಿದೆ. ಒಂದೊಮ್ಮೆ ಆಯೋಗ ತನ್ನ ಪಟ್ಟು ಸಡಿಲಿಸದಿದ್ದರೆ ಸರಕಾರ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆಗೆ ಸಿಲುಕಬಹುದು. ಗ್ರಾಮೀಣ ಭಾಗದ ಜನರು ಹಾಗೂ ಬಹುತೇಕ ಜನಪ್ರತಿನಿಧಿಗಳು ಚುನಾವಣೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸರಕಾರದ ನಿಲುವಿಗೆ ವಿರೋಧವೂ ಕೇಳಿ ಬರುತ್ತಿದೆ.

ಆಯೋಗಕ್ಕೆ ಪತ್ರ
ಈ ಹಿಂದೆಯೂ ಗ್ರಾಮ ಪಂಚಾಯತ್‌ ಚುನಾವಣೆ ಮುಂದೂಡಿಕೆಗೆ ಆಯೋಗಕ್ಕೆ ಪತ್ರ ಬರೆದಿದ್ದ ಸರಕಾರ ಶುಕ್ರವಾರ ಮತ್ತೂಂದು ಪತ್ರ ಬರೆದಿದೆ. ಗ್ರಾ.ಪಂ.ಗಳಿಗೆ ಶೀಘ್ರ ಚುನಾವಣೆ ನಡೆಸಲು ಸರಕಾರಕ್ಕೆ ನಿರ್ದೇಶನ ನೀಡು ವಂತೆ ಕೋರಿ ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ| ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಇದಕ್ಕೆ ಮೊದಲು, ಆಯೋಗದ ಪರ ವಕೀಲ ಕೆ.ಎನ್‌. ಫ‌ಣೀಂದ್ರ ಅವರು ಲಿಖೀತ ಹೇಳಿಕೆ ಸಲ್ಲಿಸಿ, ಕೊರೊನಾ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಕೋರಿ ಸರಕಾರ ಅ.3ರಂದು ಬರೆದಿದ್ದ ಪತ್ರದ ಕುರಿತು ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆ ಚರ್ಚಿಸಿದ ಬಳಿಕ ಚುನಾವಣೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ವಿಚಾರಣೆಯನ್ನು ಅ.21ಕ್ಕೆ ಮುಂದೂಡಿತು.

Advertisement

ಸರಕಾರದ ಅಭಿಪ್ರಾಯ
ಸರಕಾರದ ಪರ ವಕೀಲರು ಚುನಾವಣೆಗಳನ್ನು ಮುಂದೂಡುವಂತೆ ಮನವಿ ಮಾಡಿದ್ದು, ಸರಕಾರ ಗುರುವಾರ ಮತ್ತೂಂದು ಪತ್ರ ಬರೆದಿರುವ ವಿಷಯ ಪ್ರಸ್ತಾವಿಸಿದರು. ಅಲ್ಲದೆ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳೂ ಇದೇ ವಿಚಾರವಾಗಿ ಆಯೋಗಕ್ಕೆ ಪತ್ರ ಬರೆದಿವೆ ಎಂದು ನ್ಯಾಯಾಲಯದ ಗಮನ ಸೆಳೆದರು.

ಆಯೋಗ‌ದ ಅಭಿಪ್ರಾಯ
ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಭಾವ್ಯ ವೇಳಾಪಟ್ಟಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅದನ್ನು ಪರಿಗಣಿಸಬೇಕು ಎಂದು ಆಯೋಗದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next