Advertisement
ಸಂಭಾವ್ಯ ಅಭ್ಯರ್ಥಿಗಳಂತೂ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಚಾರ, ಗ್ರಾಮ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆಯೇ ಪ್ರಮುಖವಾಗಿ ಪ್ರಸ್ತಾಪಿಸಿ, ಜನ ರನ್ನು ಸೆಳೆಯುವತ್ತ ಈಗಾಗಲೇ ತಾಲೀಮು ನಡೆಸತೊಡಗಿದ್ದಾರೆ. ಆದರೆ ಚುನಾವಣೆ ನಡೆಸುವ ಬಗ್ಗೆ ಪರ ವಿರೋಧದ ಪ್ರತಿಕ್ರಿಯೆಗಳು ಕಂಡುಬಂದಿದ್ದು, ಇದೇ ನೆವದಿಂದಲೇ ನ್ಯಾಯಾಲ ಯಕ್ಕೂ ಹೋಗಲಾಗಿತ್ತು. ಚುನಾವಣೆ ಸದ್ಯ ನಡೆಯುವ ಸಾಧ್ಯತೆ ಇಲ್ಲದ ಕಾರಣ ನಮ್ಮನ್ನೇ ಮುಂದುವರಿಸಿ ಎಂದು ಈ ಹಿಂದೆ ಚುನಾಯಿತರಾದವರ ಅರ್ಜಿ ಸಂವಿಧಾನದ ಆಶಯಗಳಿಗೆ ವಿರುದ್ಧ ಎಂದು ಪರಿಗಣಿಸಿ ನ್ಯಾಯಾಲಯ ಮನವಿಯನ್ನು ತಳ್ಳಿ ಹಾಕಿತ್ತು. ಒಂದು ವೇಳೆ ಚುನಾವಣೆ ನಡೆದರೂ ಮೂರನೇ ಎರಡಂಶ ಸದಸ್ಯರ ಆಯ್ಕೆಯಾಗದೇ ಇದ್ದರೆ ಅಥವಾ ಹೊಸದಾಗಿ ಪಂಚಾಯತ್ ರಚನೆಯಾದರೆ ಚುನಾವಣೆ ವರೆಗೆ ಆಡಳಿತಾಧಿಕಾರಿ ನೇಮಿಸಬಹುದು ಎಂಬ ನಿಯಮ ಇದೆ. ಆದರೆ ಚುನಾವಣೆಯನ್ನೇ ನಡೆಸದೇ ಆಡಳಿತಾಧಿ ಕಾರಿಯ ನೇಮಕ ಮಾಡಿದ್ದು ಸಂವಿಧಾನ ಬಾಹಿರ. ಅಷ್ಟಲ್ಲದೇ ಆಡಳಿತಾಧಿಕಾರಿ ಯೊಬ್ಬರನ್ನು ಸಮಗ್ರ ಗ್ರಾಮ ಪಂಚಾಯತ್ ಎಂದು ಭಾವಿಸಿ ಅಧಿಕಾರ ಚಲಾವಣೆಗೆ ಅವಕಾಶ ನೀಡಿದ್ದು ಕೂಡ ಸರಿಯಲ್ಲ ಎನ್ನುತ್ತಾರೆ ಗಾ.ಪಂ. ಹಕ್ಕೊತ್ತಾಯ ಆಂದೋಲನದ ಕಾರ್ಯಕರ್ತೆ ಕೃಪಾ ಎಂ.ಎಂ. ಅವರು.
ಇತ್ತ ರಾಜಕೀಯ ಪಕ್ಷಗಳೂ ಅಭ್ಯರ್ಥಿಗಳನ್ನು ಬೆಂಬಲಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚುನಾವಣೆ ರಣಕಣವನ್ನು ಮತ್ತಷ್ಟು ರಂಗೇರಿಸುವಂತೆ ಮಾಡಿದೆ. ಬೆಂಬಲಿತ ಅಭ್ಯರ್ಥಿಗಳ ಯಾದಿಯ ಬಗ್ಗೆ ಈಗಾಗಲೇ ಕಾಂಗ್ರೆಸ್ ಶೇ.90ರಷ್ಟು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕವಷ್ಟೇ ತೀರ್ಮಾನ ಮಾಡಲು ಬಿಜೆಪಿ ಚಿಂತಿಸಿದೆ ಎಂದು ಮೂಲಗಳು ಹೇಳಿವೆ. ಯಾವಾಗ ಘೋಷಣೆ?
ಜೂನ್ ಅಂತ್ಯದಲ್ಲಿ ಪಂಚಾಯತ್‌ಗಳ ಅವಧಿ ಮುಕ್ತಾಯವಾಗಿದ್ದು ಆಡಳಿತಾಧಿಕಾರಿಗಳ ನೇಮಕವಾಗಿದೆ. ಆಡಳಿತಾವಧಿ ಮುಗಿದು 6 ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಅದಕ್ಕಾಗಿ ಚುನಾವಣಾ ಆಯೋಗ ಎಲ್ಲ ಸಿದ್ಧತೆ ನಡೆಸಿದೆ. ನ್ಯಾಯಾಲಯದಲ್ಲಿ ಈ ಕುರಿತ ಅರ್ಜಿಯ ವಿಚಾರಣೆ ನಡೆಯುತ್ತಿದ್ದು ಸರಕಾರ ಸಹಕಾರ ನೀಡುವುದಾಗಿ ಹೇಳಿದೆ. ಮೂಲಗಳ ಪ್ರಕಾರ ಎಲ್ಲ ಸರಿಹೋದರೆ ನವೆಂಬರ್ ಮೂರನೇ ವಾರದಲ್ಲಿ ಆಯೋಗ ಚುನಾವಣಾ ದಿನಾಂಕಗಳನ್ನು ಘೋಷಿಸಲು ಸಿದ್ಧತೆ ಮಾಡಿಕೊಂಡಿದೆ. ತಾಲೂಕುವಾರು ಚುನಾವಣೆ ನಡೆಸಬೇಕೆಂದು ಬಯಸಿದ್ದು ಇದಕ್ಕಾಗಿ ಆಡಳಿತ ಯಂತ್ರಕ್ಕೆ ಸೂಚನೆ ನೀಡಲಾಗಿದೆ. ಒಂದು ದಿನ ಜಿಲ್ಲೆಯ ಒಂದು ಅಥವಾ ಎರಡು ತಾಲೂಕುಗಳಲ್ಲಿ ಮಾತ್ರ ಚುನಾವಣೆ ನಡೆಸುವ ಕುರಿತು ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ಬಿಹಾರ ವಿಧಾನಸಭೆ ಚುನಾವಣೆಯ ಒಳಿತು ಕೆಡುಕುಗಳ ವಿಶ್ಲೇಷಣೆ ಕೂಡ ನಡೆಯುತ್ತಿದೆ.