Advertisement

ಗ್ರಾ.ಪಂ. ಚುನಾವಣೆ ಮುಂದಕ್ಕೆ

11:27 PM Apr 12, 2020 | Sriram |

ಬೆಂಗಳೂರು: ಕೋವಿಡ್‌-19 ಹಾವಳಿಯಿಂದ ಸರಕಾರದ ಎಲ್ಲ ಕಾರ್ಯಕ್ರಮಗಳು ಮುಂದೂಡಿಕೆಯಾಗುತ್ತಿದ್ದು, ಈಗ ಗ್ರಾಮ ಪಂಚಾಯತ್‌ ಚುನಾವಣೆಯ ಸರದಿ. ಅದನ್ನು ಆರು ತಿಂಗಳು ಮುಂದೂಡಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ಈ ಕುರಿತು ರಾಜ್ಯ ಚುನಾವಣ ಆಯೋಗಕ್ಕೆ ಸರಕಾರ ಮಾಹಿತಿ ನೀಡಿದ್ದು, ನವೆಂಬರ್‌ನಲ್ಲಿ ಚುನಾವಣೆ ನಡೆಸುವುದಾಗಿ ಆಯೋಗಕ್ಕೆ ವರದಿ ನೀಡಿದೆ. 1993ರ ಪಂಚಾಯತ್‌ ರಾಜ್‌ ಕಾಯ್ದೆ ಪ್ರಕಾರ ಗ್ರಾ.ಪಂ.ಗಳ ಅವಧಿ ಮುಗಿದ ಮೇಲೆ ಮುಂದೂಡಲು ಅವಕಾಶವಿಲ್ಲ. ಆದರೆ ಕೋವಿಡ್‌-19 ಹರಡುವುದನ್ನು ಕೇಂದ್ರ ಸರಕಾರವು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿರುವುದರಿಂದ ಅದೇ ಕಾರಣ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಆರು ತಿಂಗಳು ಚುನಾವಣೆ ಮುಂದೂಡಲು ತೀರ್ಮಾನಿಸಿದೆ.

6 ಸಾವಿರ ಪಂಚಾಯತ್‌ಗಳು
ರಾಜ್ಯದಲ್ಲಿ ಸುಮಾರು 6 ಸಾವಿರ ಗ್ರಾ.ಪಂ.ಗಳಿವೆ. ಅವುಗಳ ಅವಧಿ ಬಹುತೇಕ ಎಪ್ರಿಲ್‌ ಅಂತ್ಯ ಮತ್ತು ಮೇ 15ಕ್ಕೆ ಮುಕ್ತಾಯವಾಗಲಿದೆ. ಗ್ರಾ.ಪಂ.ಗಳ ಅವಧಿ ಮುಗಿಯುವ 45 ದಿನ ಮೊದಲೇ ರಾಜ್ಯ ಚುನಾವಣ ಆಯೋಗ ಮೀಸಲಾತಿ ಘೋಷಣೆ ಮಾಡಬೇಕು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಚುನಾವಣೆ ನಡೆಸದಿರಲು ತೀರ್ಮಾನಿಸಿರುವ ಬಗ್ಗೆ ಸರಕಾರ ಆಯೋಗಕ್ಕೆ ವರದಿ ನೀಡಿದೆ. ಲಾಕ್‌ಡೌನ್‌ ಪರಿಣಾಮ ಮೇ ಅಂತ್ಯದ ವರೆಗೂ ಇರಲಿದೆ. ಸದ್ಯ ಸಮಗ್ರ ಆಡಳಿತ ಯಂತ್ರ ಕೋವಿಡ್‌-19 ನಿಯಂತ್ರಣಕ್ಕೆ ಮೀಸಲಾಗಿದೆ.

ವಿಶೇಷ ಉಸ್ತುವಾರಿ ಸಮಿತಿ?
ಮೇ 15ಕ್ಕೆ ಗ್ರಾ.ಪಂ. ಸದಸ್ಯರ ಐದು ವರ್ಷದ ಅವಧಿ ಮುಕ್ತಾಯವಾಗಲಿದ್ದು, ಅನಂತರ 6 ತಿಂಗಳು ಪಂಚಾಯತ್‌ಗಳ ಕಾರ್ಯನಿರ್ವಹಣೆಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕೇ ಅಥವಾ ವಿಶೇಷ ಸಮಿತಿ ರಚನೆ ಮಾಡಬೇಕೇ ಎನ್ನುವ ಕುರಿತು ಸರಕಾರ ಆಲೋಚನೆ ನಡೆಸಿದೆ ಎಂದು ತಿಳಿದುಬಂದಿದೆ.

ಆಡಳಿತಾಧಿಕಾರಿ ಬದಲು ವಿಶೇಷ ಸಮಿತಿ ರಚಿಸಿ, ಪಂಚಾಯತ್‌ ರಾಜ್‌ ಕಾಯ್ದೆಯ ಕಲಂ 8ರಡಿ ಸಮಿತಿಗೆ ಸದಸ್ಯರನ್ನು ನೇಮಿಸಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಸಮಿತಿಗೆ ಹಾಲಿ ಪಂಚಾಯತ್‌ ಸದಸ್ಯರನ್ನು ಅಥವಾ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಹೊಂದಿರುವ ಯಾರನ್ನಾದರೂ ಸದಸ್ಯರನ್ನಾಗಿ ಮಾಡಲು ಅವಕಾಶ ಇರುತ್ತದೆ. ಆ ಸಮಿತಿಯ ಮೂಲಕ ಚುನಾವಣೆ ನಡೆಯುವವರೆಗೂ ಪಂಚಾಯತ್‌ ಆಡಳಿತ ಚಟುವಟಿಕೆಗಳನ್ನು ನಡೆಸುವ ಕುರಿತು ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

Advertisement

ಜಿ.ಪಂ. ಜತೆಗೆ ಚುನಾವಣೆ?
ಸದ್ಯದ ಮಾಹಿತಿ ಪ್ರಕಾರ ಗ್ರಾಮ ಪಂಚಾಯತ್‌ ಚುನಾವಣೆಗಳನ್ನು ನವೆಂಬರ್‌ ಅಂತ್ಯದಲ್ಲಿ ನಡೆಸಲು ಸರಕಾರ ನಿರ್ಧರಿಸಿದೆ. ಆದರೆ ಮುಂದಿನ ವರ್ಷ 2021ರ ಮೇಯಲ್ಲಿ ನಡೆಯುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಚುನಾವಣೆಗಳ ಸಂದರ್ಭದಲ್ಲೇ ಗ್ರಾ.ಪಂ. ಚುನಾವಣೆ ನಡೆಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂಬ ಮಾತಿದೆ.

ಸಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದಿದ್ದರೆ ವಿಶೇಷ ಸಂದರ್ಭದಲ್ಲಿ ಮುಂದೂಡಲು ಕರ್ನಾಟಕ ಗ್ರಾಮ ಸ್ವರಾಜ್‌ ಕಾಯ್ದೆಯ ಸೆ. 8ರಡಿ ಅವಕಾಶ ಇದೆ. ಗ್ರಾ.ಪಂ. ಚುನಾವಣೆ ಮುಂದೂಡುವ ಬಗ್ಗೆ ಸರಕಾರ ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಬೇಕು.
– ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷರು, ಕರ್ನಾಟಕ ಪಂ.ರಾಜ್‌ ಪರಿಷತ್‌,

Advertisement

Udayavani is now on Telegram. Click here to join our channel and stay updated with the latest news.

Next