ಬೆಂಗಳೂರು: ಗ್ರಾಮೀಣ ಕುಟುಂಬದ ವತಿಯಿಂದ ಮೇ 3 ರಿಂದ 5ರವರೆಗೆ ಕರ್ನಾಟಕ ಸಿರಿಧಾನ್ಯಗಳ ವೈಭವ ಮತ್ತು ಸಾವಯವ ಆಹಾರ ಮೇಳ ಹಮ್ಮಿಕೊಳ್ಳಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಕುಟುಂಬ ಸಂಸ್ಥೆಯ ಸಂಸ್ಥಾಪಕ ಎಂ.ಎಚ್.ಶ್ರೀಧರ್ ಮೂರ್ತಿ ಮಾತನಾಡಿ, ಲಾಲ್‌ಬಾಗ್‌ನಲ್ಲಿರುವ ಡಾ.ಮರಿಗೌಡ ಸ್ಮಾರಕ ಭವನದಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ನಿವೃತ್ತ ನ್ಯಾಯಾಮೂರ್ತಿ ವಿ.ಗೋಪಾಲಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಚಲನಚಿತ್ರ ನಿರ್ದೇಶಕ ಬಿ.ಸುರೇಶ್, ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ವೆಂಕಟೇಶ್, ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಸಿ.ಬಸವಲಿಂಗಯ್ಯ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು. 2019ರ ಗ್ರಾಮೀಣ ಕುಟುಂಬ ವಿಶೇಷ ಪ್ರಶಸ್ತಿಗೆ ಪರಿಸರ ತಜ್ಞ ಡಾ.ನಾಗೇಶ ಹೆಗಡೆ ಭಾಜನರಾಗಿದ್ದಾರೆ.
ಸಾವಯವ ಕೃಷಿಕರಾದ ಮತ್ತು ಸಿರಿಧಾನ್ಯ ಬೆಳೆಗಾರರಾದ ಲಕ್ಷ್ಮೀನಾರಾಯಣ್, ಜಗದೀಶ್ ಬರದೂರು, ಮಡಿವಾಳಪ್ಪ ತೋಟಗಿ, ಕೃಷ್ಣಪ್ಪ ಸಿ.ಪಿ., ನಾರಾಯಣ ರಾವ್ ಕುಲಕರ್ಣಿ, ಬಾಲನ್, ಸಿರಿಧಾನ್ಯ ಆಹಾರ ತಯಾರಕ ಅರುಣ ಪ್ರಸನ್ನ, ಭೀಮೇಶ್ ಹಾಗೂ ಮಾಲೂರು ವಿಜಯಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಮೇ 4ರಂದು ಬೆಳಗ್ಗೆ 11ಕ್ಕೆ ಸಿರಿಧಾನ್ಯ ಹಾಗೂ ಕಾಡು ಕೃಷಿ ಕುರಿತು ಮಲ್ಲಿಕಾರ್ಜುನ ಹೊಸಪಾಳ್ಯ, ಲಕ್ಷ್ಮೀನಾರಾಯಣ್ ಹಾಗೂ ಕೃಷ್ಣಪ್ಪ ಸಿ.ಪಿ ತರಬೇತಿ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ರಶ್ಮಿ ಮತ್ತು ಸುನೀತಾ ಸಿರಿಧಾನ್ಯಗಳ ಅಡುಗೆ ಕುರಿತು ಮಾಹಿತಿ ನೀಡಲಿದ್ದಾರೆ.
ಅಂದು ಸಿರಿಧಾನ್ಯ ಅಡುಗೆ ಸ್ಪರ್ಧೆ ನಡೆಯಲಿದೆ. ಮನೆಯಲ್ಲಿಯೇ ವೈವಿಧ್ಯಮಯವಾಗಿ ಸಿದ್ಧಪಡಿಸಿಕೊಂಡು ಬಂದ ಸಿರಿಧಾನ್ಯ ಅಡುಗೆಗಳಲ್ಲಿ ಆಯ್ದ ಮೂರು ಸ್ಪರ್ಧಿಗಳ ವಿಭಿನ್ನ ಸಿರಿಧಾನ್ಯಗಳ ಅಡುಗೆಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮೇ 5ರಂದು ಬೆಳಗ್ಗೆ 11ಕ್ಕೆ ಸಿರಿಧಾನ್ಯಗಳು ಮತ್ತು ಆರೋಗ್ಯದ ಕುರಿತು ಡಾ.ಖಾದರ್ ಸಂವಾದ ನಡೆಸಿಕೊಡಲಿದ್ದಾರೆ. ನಂತರ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ವಹಿಸಲಿದ್ದಾರೆ. ಶಶಿಧರ ಹಾಗೂ ಬಾಲಾಜಿ ಗೋಷ್ಠಿ ನಡೆಸಿಕೊಡಲಿದ್ದಾರೆ ಎಂದರು.