Advertisement

ಮೇ ಅಂತ್ಯದೊಳಗೆ ವಿದ್ಯಾರ್ಥಿಗಳಿಗೆ ಪೂರ್ಣ ಆಹಾರ ಧಾನ್ಯ ವಿತರಣೆ:  ಸುರೇಶ್ ಕುಮಾರ್

06:45 PM May 12, 2021 | Team Udayavani |

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ನೀಡಬೇಕಾದ ಬಾಕಿ ಉಳಿದಿರುವ ಅಹಾರ ಧಾನ್ಯಗಳನ್ನು ಮೇ ತಿಂಗಳ ಅಂತ್ಯದೊಳಗೆ ಪೂರ್ಣವಾಗಿ ವಿತರಿಸಲು ಸೂಚನೆ ನೀಡಲಾಗಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್  ತಿಳಿಸಿದ್ದಾರೆ.

Advertisement

ಬುಧವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರದ ಬದಲಿಗೆ ನೀಡಲಾಗುತ್ತಿದ್ದ ಬಾಕಿ ಉಳಿದಿರುವ ಅಡುಗೆ ಎಣ್ಣೆ ಸೇರಿದಂತೆ  ಆಹಾರ ಧಾನ್ಯಗಳನ್ನು ಲಾಕ್-ಡೌನ್ ಅವಧಿ ಮುಗಿದ ತಕ್ಷಣವೇ ವಿತರಿಸಬೇಕೆಂದು ನಿರ್ದೇಶನ   ನೀಡಲಾಗಿದೆ ಎಂದು ತಿಳಿಸಿದರು.

ಈ ಆಹಾರ ಧಾನ್ಯಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಪೂರ್ಣ ದಿನಗಳಿಗೆ ವಿತರಣೆ ಮಾಡಲು ಅಗತ್ಯವಿರುವ ಆಹಾರ ಧಾನ್ಯ ಕೆಎಸ್ಎಫ್ ಸಿ ಗೋದಾಮುಗಳಲ್ಲಿ ಏಕ ಕಾಲದಲ್ಲಿ ಸಂಗ್ರಹಣೆ ಮಾಡಿ ಎತ್ತುವಳಿ ಮಾಡಲು ಕಷ್ಟಸಾಧ್ಯವಾಗಿರುವುದರಿಂದ ಎರಡು ಹಂತಗಳಲ್ಲಿ ವಿತರಿಸಲು ತೀರ್ಮಾನಿಸಿ  ಈಗಾಗಲೇ ಒಂದು ಹಂತದ ವಿತರಣೆ ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಮೊದಲ ಹಂತದ 108 ದಿನಗಳ ಆಹಾರ ಧಾನ್ಯಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. ಉಳಿದ ಅವಧಿಯಾದ 2021ರ ನವೆಂಬರ್ ನಿಂದ 2021ಮಾರ್ಚ್ ವರೆಗಿನ 132 ದಿನಗಳಿಗೆ ಸಂಬಂಧಿಸಿದ  ಆಹಾರ ಧಾನ್ಯಗಳನ್ನು  ಕೆಲವು ಶಾಲೆಗಳಿಗೆ ವಿತರಿಸಲಾಗಿದೆ. ಲಾಕ್-ಡೌನ್ ಘೋಷಣೆಯಾದ್ದರಿಂದ ಕೆಲವು ಶಾಲೆಗಳಿಗೆ ಎರಡನೇ ಹಂತದ  ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಲಾಕ್-ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿ ಉಳಿದ ಶಾಲೆಗಳಿಗೆ  ಮೇ ಅಂತ್ಯದೊಳಗೆ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ತೊಗರಿ ಬೇಳೆ ಸರಬರಾಜುದಾರರಿಗೆ ಏ. 27ರಂದು ಮತ್ತು ಅಡುಗೆ ಎಣ್ಣೆ ಸರಬರಾಜುದಾರರಿಗೆ ಮೇ 7ರಂದು  ಸರಬರಾಜು ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದ ಸಚಿವರು ದಾಸ್ತಾನಿನಲ್ಲಿರುವ ಆಹಾರ ಧಾನ್ಯಗಳನ್ನು ಡಿಡಿಪಿಐ ಮತ್ತು ಜಿಪಂ ಸಿಇಒಗಳೊಂದಿಗೆ ಚರ್ಚಿಸಿ ತಕ್ಷಣವೇ ಕೂಡಲೇ ವಿತರಿಸಲು ಸೂಚನೆ ನೀಡಲಾಗಿದೆ. ಎಲ್ಲ ಶಾಲೆಗಳ ಮುಖ್ಯಸ್ಥರು ಶಾಲೆಗಳಲ್ಲಿ ಹಾಜರಿರುವಂತೆ ಸೂಚಿಸಿ ಸೂಚಿತ ಅವಧಿಗೆ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ಅವರು ಹೇಳಿದರು.

Advertisement

ಇದನ್ನೂ ಓದಿ : ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಕ್ರಮ: ಡಾ.ಸುಧಾಕರ್

ಶಾಲೆಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಪ್ರಸ್ತುತ ಆರು ತಿಂಗಳ ಅವಧಿಗೆ ಒಂದು ಬಾರಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಇದನ್ನು ಸರಿಪಡಿಸಲಾಗುತ್ತದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳು ವಿದ್ಯಾರ್ಥಿಗಳ ಮನೆಗೆ ಆಹಾರ ಧಾನ್ಯ ವಿತರಣೆಗೆ ನೀಲನಕ್ಷೆ ತಯಾರಿಸಲು ಸೂಚಿಸಲಾಗಿದೆ ಎಂದೂ ಸಚಿವರು ಹೇಳಿದರು.

ಆರ್.ಟಿ.ಇ. ಹಣ ಮರುಪಾವತಿಗೆ ಸೂಚನೆ:

ಈಗಾಗಲೇ ಬಹುತೇಕ ಶಾಲೆಗಳಿಗೆ  ಆರ್.ಟಿ.ಇ ಅನುದಾನ ಮರುಪಾವತಿಸಲಾಗಿದೆ. ಉಳಿದ ಶಾಲೆಗಳಿಗೆ ತಕ್ಷಣವೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

ಕೋವಿಡ್ ಸಂಕಷ್ಟದ ಸಮಯದಲ್ಲೂ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳು ಕ್ರಮ ವಹಿಸಿದ್ದು, ಬಾಕಿ ಆರ್.ಟಿ.ಇ. ಹಣವನ್ನು ಮೇ ಅಂತ್ಯದೊಳಗೆ ಬಿಡುಗಡೆ ಮಾಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.  ಬಾಕಿ ಹಣ ನೀಡದೇ ಬಾಕಿ ಉಳಿಸಿಕೊಂಡಿರುವ ಬಿಇಒ ಮತ್ತು ಡಿಡಿಪಿಐಗಳಿಗೆ ಎಚ್ಚರಿಕೆ ನೀಡಿ ತಕ್ಷಣವೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕೇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವರು ಸೂಚಿಸಿದರು.

ಶಿಸ್ತು ಕ್ರಮ : ಅನಗತ್ಯವಾಗಿ ಶಾಲೆಗಳಿಗೆ ನೀಡಬೇಕಾದ ಹಣವನ್ನು ತಮ್ಮ ಖಾತೆಯಲ್ಲೇ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಕೂಡಲೇ ಪ್ರಸ್ತಾವನೆ ಮಂಡಿಸಲೂ ಸಹ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಮಧ್ಯಾಹ್ನ ಉಪಹಾರ ಯೋಜನೆ ಅಧಿಕಾರಿಗಳು  ಸೇರಿದಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ  ಭಾಗವಹಿಸಿದ್ದರು.

ಖಾಸಗಿ ಪಿಯು ಆಡಳಿತ ಮಂಡಳಿಗಳೊಂದಿಗೆ ಚರ್ಚೆ:

ಇದೇ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ದಾವಣಗೆರೆ, ಶಿವಮೊಗ್ಗ ಮತು ಚಿತ್ರದುರ್ಗ ಜಿಲ್ಲೆಗಳಿಗೆ ಸೇರಿದ ಖಾಸಗಿ ಅನುದಾನರಹಿತ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕೋವಿಡ್ ಸಂಕಷ್ಟದ ಸಮಯದಲ್ಲಿ ಎದುರಿಸುತ್ತಿರುವ ಸವಾಲುಗಳು, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ಅನುಸರಿಸಬೇಕಾದ ಕ್ರಮಗಳು, ಪರೀಕ್ಷಾ ಪ್ರಕ್ರಿಯೆ ಕುರಿತಂತೆ ಸಚಿವರ ಗಮನ ಸೆಳೆದರು.

ಸಭೆಯಲ್ಲಿ ಮಾಜಿ ವಿಧಾನಪರಿಷತ್ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಸೇರಿದಂತೆ ಆ ಭಾಗದ 45ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪದವಿಪೂರ್ವ ಶಿಕ್ಷಣ ನಿರ್ದೇಶಕಿ ಸ್ನೇಹಲ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next