ಬೆಂಗಳೂರು: ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸೃಷ್ಟಿಯಾಗಿರುವ ದೊಡ್ಡ ಕಂದಕದಿಂದಾಗಿ ಶೇ.80 ರಷ್ಟು ಪದವೀಧರರು ಉದ್ಯೋಗ ಪಡೆದುಕೊಳ್ಳಲು ವಿಫಲರಾಗುತ್ತಿದ್ದಾರೆ ಎಂದು ತಾಂತ್ರಿಕ ಶಿಕ್ಷಣ ನಿರ್ದೇಶಕ ಎಚ್.ಯು ತಳವಾರ್ ಕಳವಳ ವ್ಯಕ್ತಪಡಿಸಿದರು.
ಸೋಮವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯೋಗಾರ್ಹತೆಯ ಬಲವರ್ಧನೆ ಸಂಬಂಧಿಸಿದಂತೆ ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಹೈರ್‌ಮಿ ಸಂಸ್ಥೆಯ ನಡುವೆ ಒಡಬಂಡಿಕೆ ಮಾಡಿಕೊಂಡ ನಂತರ ಮಾತನಾಡಿದರು.
ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ ಪದವೀಧರರಲ್ಲಿ ಶೇ.20ರಷ್ಟು ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ. ಉಳಿದ ಶೇ.80ರಷ್ಟು ಅಭ್ಯರ್ಥಿಗಳು ಉದ್ಯೋಗ ಪಡೆಯಲು ಸಾಕಷ್ಟು ಒದ್ದಾಡುತ್ತಿರುತ್ತಾರೆ.
ಇಂತಹ ಅಭ್ಯರ್ಥಿಗಳ ಮೇಲೆ ಸರ್ಕಾರ ಹಾಗೂ ಖಾಸಗಿ ವಲಯ ವಿಶೇಷ ಗಮನ ನೀಡುವ ಅಗತ್ಯವಿದೆ ಎಂದರು. ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಜತೆಯಾಗಿ ತಾಂತ್ರಿಕ ಶಿಕ್ಷಣ ಪಠ್ಯಕ್ರಮ ಸಿದ್ಧಪಡಿಸುವ ಮೂಲಕ ತಾಂತ್ರಿಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಕೌಶಲ್ಯಕ್ಕೆ ವೇದಿಕೆ ಸೃಷ್ಟಿಸಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ಕೋಶದ ಉನ್ನತೀಕರಿಸಲಾಗಿದೆ. ಎಲ್ಲಾ ಕಾಲೇಜುಗಳಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಇದರ ಮಾಹಿತಿಯನ್ನು ಸಮರ್ಪಕವಾಗಿ ನೀಡುವ ಕೆಲಸ ಮಾಡಬೇಕು. ಪದವಿ ಮತ್ತು ಸ್ನಾತಕೋತ್ತರ ಪದವಿ ಬಳಿಕ ಲಭ್ಯವಿರುವ ಉದ್ಯೋಗವಕಾಶದ ಮಾಹಿತಿ ಈ ಕೇಂದ್ರದಿಂದಲೇ ಲಭ್ಯವಾಗಲಿದೆ ಎಂದು ಹೇಳಿದರು.
ಹೈರ್‌ಮಿ ಸಂಸ್ಥಾಪಕ ಚೊಕ್ಕಲಿಂಗಂ ವಲ್ಲಿಯಪ್ಪಮಾತನಾಡಿ, ಕಾಲೇಜುಗಳಲ್ಲಿ ನಡೆಯುವ ಕ್ಯಾಂಪಸ್ ಸಂದರ್ಶನಲ್ಲಿ 10ರಲ್ಲಿ ಒಬ್ಬ ವಿದ್ಯಾರ್ಥಿಗೆ ಉದ್ಯೋಗ ದೊರೆತರೆ, ಕ್ಯಾಂಪಸ್ ಹೊರಗೆ ನಡೆಯುವ ಸಂದರ್ಶನಗಳಲ್ಲಿ 5 ಸಾವಿರಕ್ಕೆ ಒಬ್ಬ ವಿದ್ಯಾರ್ಥಿ ಉದ್ಯೋಗ ಪಡೆಯುತ್ತಿದ್ದಾನೆ.
ಅಭ್ಯರ್ಥಿಯೊಬ್ಬ ಉದ್ಯೋಗ ಪಡೆಯಲು ಕನಿಷ್ಠ 25 ರಿಂದ 30 ಕಂಪನಿಗಳ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕಾದ ಸ್ಥಿತಿ ಇದೆ. ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 1 ಲಕ್ಷಕ್ಕೂ ಹೆಚ್ಚು ಪಾಲಿಟೆಕ್ನಿಕ್ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲಿದ್ದೇವೆ.
ಇದಕ್ಕಾಗಿ 1 ಸಾವಿರ ಜನರ ತಂಡ ಸಿದ್ಧಗೊಂಡಿದೆ ಎಂದು ಮಾಹಿತಿ ನೀಡಿದರು. ಟೊಯೊಟೊ ಸಂಸ್ಥೆಯ ಉಪ ವ್ಯವಸ್ಥಾಪಕ ಪರಶುರಾಮನ್, ಎಫ್ಕೆಸಿಸಿಐ ಅಧ್ಯಕ್ಷ ಕೆ. ರಘು, ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಭೋಜೆದರ್ ಮೊದಲಾದವರು ಇದ್ದರು.