ಬೆಂಗಳೂರು : ರಾಜ್ಯದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ 10 ಸಾವಿರ ಶಿಕ್ಷಕರ ಹುದ್ದೆಗೆ ಬಿ.ಇಡಿ ಪದವೀಧರರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ನಡೆಸಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ಫಲಿತಾಂಶಕ್ಕೆ ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯಬೇಕಾಗಿದೆ.
ರಾಜ್ಯದ ಸರ್ಕಾರಿ ಶಾಲೆಗಳ 6 ಮತ್ತು 8ನೇ ತರಗತಿಯಲ್ಲಿ ಖಾಲಿ ಇರುವ ಗಣಿತ ಮತ್ತು ವಿಜ್ಞಾನದ 4,233, ಆಂಗ್ಲ ಭಾಷೆಯ 4,531 ಹಾಗೂ ಸಮಾಜ ಪಾಠದ 1,236 ಹುದ್ದೆ ಸೇರಿ 10 ಸಾವಿರ ಪದವೀಧರ ಶಿಕ್ಷಕ ಹುದ್ದೆಗಳಿಗೆ ಪದವಿ ಜತೆಗೆ ಬಿ.ಇಡಿ ಪೂರೈಸಿದ ಅಭ್ಯರ್ಥಿಗಳಿಂದ 2017ರ ಸೆಪ್ಟೆಂಬರ್ ಅಂತ್ಯದವರೆಗೆ ಅರ್ಜಿ ಆಹ್ವಾನಿಸಲಾಗಿತ್ತು.
ಕೇಂದ್ರೀಕೃತ ದಾಖಲಾತಿ ಘಟಕದ (ಸಿಎಸಿ) ಮೂಲಕ ಜಿಲ್ಲಾ ಮಟ್ಟದಲ್ಲೇ ಸ್ಪರ್ಧಾತ್ಮಕ ಪರೀಕ್ಷೆನಡೆಸಲಾಗಿತ್ತು. ಜಿಲ್ಲಾ ಉಪನಿರ್ದೇಶಕರು ಪರೀಕ್ಷೆ ನಡೆಸಿ, ಜಿಲ್ಲಾಮಟ್ಟದಲ್ಲೇ ಉತ್ತರ ಪತ್ರಿಕೆಯ ಮೌಲ್ಯಮಾಪನ ನಡೆಸಿದ್ದಾರೆ. ಪರೀಕ್ಷೆಯ ಕೀ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಬಿಡಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಬಹುದು ಎಂಬ ಉದ್ದೇಶದಿಂದ ಫಲಿತಾಂಶ ಪ್ರಕಟಿಸಿಲ್ಲ.
ಚುನಾವಣಾ ಆಯೋಗಕ್ಕೆ ಪತ್ರ:
ಪದವೀಧರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ನೀಡಲು ಅವಕಾಶ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಆಯೋಗ ಅವಕಾಶ ನೀಡದೆ ಮೇ 15ರ ನಂತರ ಫಲಿತಾಂಶ ಪ್ರಕಟಿಸುವಂತೆ ತಿಳಿಸಿದೆ. ಹೀಗಾಗಿ ಫಲಿತಾಂಶ ಪ್ರಕಟಿಸಿಲ್ಲ ಎಂದು ಇಲಾಖೆಯ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 6 ಮತ್ತು 8ನೇ ತರಗತಿಯ ಪದವೀಧರ ಶಿಕ್ಷಕರ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಚುನಾವಣಾ ಫಲಿತಾಂಶದ ನಂತರ ಪ್ರಕಟಿಸಲಾಗುವುದು.
– ಫಿಲೋಮಿನಾ ಲೋಬೊ, ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕಿ
– ರಾಜು ಖಾರ್ವಿ ಕೊಡೇರಿ