Advertisement

ಡಿಇಡಿಯೊಂದಿಗೆ ಪದವಿ ಕಡ್ಡಾಯ: ಗೊಂದಲದಲ್ಲಿ ಪಾಸಾದ ಅಭ್ಯರ್ಥಿಗಳು

07:00 AM Sep 05, 2017 | Harsha Rao |

ಮಂಗಳೂರು: ಡಿಇಡಿ ಶಿಕ್ಷಣದೊಂದಿಗೆ ಟಿಇಟಿ ಪಾಸಾಗಿ ಪ್ರಾಥಮಿಕ ಶಾಲಾ ಶಿಕ್ಷಕರಾಗುವ ಕನಸು ಹೊತ್ತ ಸಾವಿರಾರು ಮಂದಿ ಆಕಾಂಕ್ಷಿಗಳ ಆಸೆಗೆ ಸರಕಾರ ತಣ್ಣೀರೆರಚಿದೆ. ಪ್ರಸಕ್ತ ವರ್ಷದಿಂದ 6ರಿಂದ 8ನೇ ತರಗತಿಗೆ ಶಿಕ್ಷಕರ ನೇಮಕಾತಿಗಾಗಿ ಡಿಇಡಿ ಜತೆಗೆ ಪದವಿ ಶಿಕ್ಷಣ ಕಡ್ಡಾಯ ಮಾಡಿರುವುದೇ ಇದಕ್ಕೆ ಕಾರಣವಾಗಿದೆ. 

Advertisement

ಸುಮಾರು 3 ವರ್ಷಗಳ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದು, ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಿದೆ. ಹೈದರಾಬಾದ್‌ ಕರ್ನಾಟಕ ಭಾಗದಿಂದ 5,000 ಮತ್ತು ಉಳಿದ 26 ಜಿಲ್ಲೆಗಳಿಂದ 5,000 ಮಂದಿ ಸಹಿತ ಸುಮಾರು 10,000 ಮಂದಿ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಈ ಆದೇಶ ಹೊರಡಿಸಲಾಗಿದೆ. ಇದರಲ್ಲಿ 6ರಿಂದ 8ನೇ ತರಗತಿವರೆಗೆ ಬೋಧಿಸಲು ಶಿಕ್ಷಕರ ನೇಮಕಾತಿ ಬಗ್ಗೆ ತಿಳಿಸಲಾಗಿದೆ.

ಆದರೆ ಈವರೆಗೆ 1ರಿಂದ 7ನೇ ತರಗತಿವರೆಗೂ ಡಿಇಡಿ ಬಳಿಕ ಟಿಇಟಿ ಪಾಸಾದವರಿಗೆ ನೇಮಕಾತಿಯಲ್ಲಿ ಭಾಗವಹಿಸಲು ಅವಕಾಶವಿತ್ತು. ಪ್ರಸಕ್ತ ವರ್ಷದಿಂದ ಮಾತ್ರ ಡಿಇಡಿಯೊಂದಿಗೆ ಸರಕಾರವು ಪದವಿ ಕಡ್ಡಾಯ ಗೊಳಿಸಿದೆ. ಅಲ್ಲದೇ 1ರಿಂದ 5ನೇ ವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನೂ ಆದೇಶ ದಲ್ಲಿ ಕೈಬಿಡಲಾಗಿದೆ. ಸರಕಾರದ ಈ ಕ್ರಮದಿಂದ ಡಿಇಡಿ ಬಳಿಕ ಟಿಇಟಿ ಪಾಸಾದರೂ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಾಗದೇ ಅಭ್ಯರ್ಥಿಗಳು ಅತಂತ್ರದಲ್ಲಿದ್ದಾರೆ. 

ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಯೋರ್ವರು, “ಪ್ರಸಕ್ತ ವರ್ಷದಿಂದ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ನಡೆಯಲಿದೆ. ಈ ಆದೇಶಾನುಸಾರ ಶಿಕ್ಷಕರ ನೇಮಕಾತಿಗೆ ಪದವಿ ಕಡ್ಡಾಯವಾಗಿದೆ. ಆದರೆ ಇದು 6ರಿಂದ 8ನೇ ತರಗತಿವರೆಗಿನ ಶಿಕ್ಷಕರ ಆಯ್ಕೆಗೆ ಮಾತ್ರವಾಗಿದ್ದು, 1ರಿಂದ 5ನೇ ತರಗತಿವರೆಗಿನ ಶಿಕ್ಷಕರ ನೇಮಕಾತಿಗೆ ಪ್ರತ್ಯೇಕ ಅರ್ಜಿ ಕರೆಯಲಾಗುತ್ತದೆ’ ಎಂದು ತಿಳಿಸಿದ್ದಾರೆ.

“ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಡಿಇಡಿಯೊಂದಿಗೆ ಪದವಿ ಪೂರೈಸಿರಬೇಕು ಎಂಬ ಮಾಹಿತಿಯನ್ನು ಕೆಲವು ವರ್ಷಗಳ ಹಿಂದೆಯೇ ರವಾನಿಸಲಾಗಿದೆ. ಆದರೆ ಈ ವರ್ಷದಿಂದ ಅದನ್ನು ಕಡ್ಡಾಯಗೊಳಿಸಲಾಗಿದ್ದು, ಈ ಸಂಬಂಧ ಕಳೆದ ಮೇ 23ರಂದು ಸಾರ್ವಜನಿಕರಿಂದ ಆಕ್ಷೇಪಣೆಯನ್ನೂ ಕೋರಲಾಗಿತ್ತು. ಬಳಿಕವಷ್ಟೇ ಆಗಸ್ಟ್‌ 7ರಂದು ಅಂತಿಮ ಸುತ್ತೋಲೆಯನ್ನು ಹೊರಡಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

Advertisement

ವಿವರಣಾತ್ಮಕ ಪರೀಕ್ಷಾ ಗೊಂದಲ
ಇಲ್ಲಿಯವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ಬಹು ಆಯ್ಕೆಯ ಪ್ರಶ್ನೆಗಳನ್ನೇ ಕೇಳಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ವಿವರಣಾತ್ಮಕ ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದೆ. ಬಹು ಆಯ್ಕೆ ಮಾದರಿಯ ಪರೀಕ್ಷೆಯಲ್ಲಿ ಪಾರದರ್ಶಕ ವಿಧಾನ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ವಿವರಣಾತ್ಮಕ ಪರೀಕ್ಷೆಯಲ್ಲಿ ಒಂದೊಂದು ಉತ್ತರ ಒಂದೊಂದು ರೀತಿ ಇರುವುದರಿಂದ ಅಂಕಗಳನ್ನು ನಿರ್ಧರಿಸುವ ಮಾನದಂಡದಲ್ಲಿ ಪಾರದರ್ಶಕತೆ ಸಾಧ್ಯವಿಲ್ಲ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ. 

“ಪದವಿ ಕಾಲೇಜು ಉಪನ್ಯಾಸಕರ ಹುದ್ದೆ ನೇಮಕಾತಿಗೆ ಬಹು ಆಯ್ಕೆ ಮಾದರಿ ಪ್ರಶ್ನೆಗಳಿರುತ್ತವೆ. ಆದರೆ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಇದ್ದ ಇದೇ ಮಾದರಿಯ ಪರೀಕ್ಷೆಯನ್ನು  ತೆಗೆದುಹಾಕಿ ಈಗ ವಿವರಣಾತ್ಮಕ ಪರೀಕ್ಷೆಗೆ ಇಲಾಖೆ ಮುಂದಾಗಿದೆ. ಪರೀಕ್ಷೆಗಳ ಮೇಲೆ ಪರೀಕ್ಷೆ ಮಾಡುವುದರಿಂದ ಹೆಚ್ಚು ಗೊಂದಲ  ಏರ್ಪಡುತ್ತವೆ. ಬಹು ಆಯ್ಕೆ ಮಾದರಿ ಪರೀಕ್ಷೆಯನ್ನೇ ಮುಂದುವರಿಸಬೇಕು ಎನ್ನುತ್ತಾರೆ ಮಂಗಳೂರಿನ ಅಭ್ಯರ್ಥಿ ಅಮಿತಾ.

ಈ ಹಿಂದೆ 1ರಿಂದ 7ನೇ ತರಗತಿ ತನಕ ಡಿಇಡಿ ಮತ್ತು ಟಿಇಟಿ ಪಾಸಾದವರನ್ನು ಪರಿಗಣಿಸಲಾಗುತ್ತಿತ್ತು. ಆದರೆ ಹೊಸ ಆದೇಶದ ಪ್ರಕಾರ ಡಿಇಡಿಯೊಂದಿಗೆ ಪದವಿಯನ್ನು ಪರಿಗಣಿಸುವುದರಿಂದ ಈಗಾಗಲೇ ಡಿಇಡಿ-ಟಿಇಟಿ ಮುಗಿಸಿದವರು ಅವಕಾಶ ವಂಚಿತರಾಗಲಿದ್ದಾರೆ. ಅಲ್ಲದೆ 1ರಿಂದ 5ನೇ ತರಗತಿವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ಆದೇಶದಲ್ಲಿ ಕೈ ಬಿಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ನಿಯಮಗಳಿಂದಾಗಿ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.
– ಮಲ್ಲಿಕಾ ಕಾವೂರು, ಅಭ್ಯರ್ಥಿ

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next