Advertisement
ಮೈಸೂರು ವಿಶ್ವವಿದ್ಯಾಲಯ ಕಾನೂನು ಶಾಲೆ ಹಾಗೂ ಮೈಸೂರು ವಿಶ್ವವಿದ್ಯಾಲಯ ಶೈಕ್ಷಿಕ ಸಂಘದ ಸಹಯೋಗದೊಂದಿಗೆ ಮಾನಸಗಂಗೋತ್ರಿಯ ಕಾನೂನು ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ – 2019: ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಭಾರತದಲ್ಲಿ ಸ್ವಾತಂತ್ರ್ಯ ನಂತರ ಅನೇಕ ಶಿಕ್ಷಣ ನೀತಿಗಳನ್ನು ರೂಪಿಸಲಾಗಿದ್ದು, ಸಾಕಷ್ಟು ಬದಲಾವಣೆಗಳು ಆಗಿವೆ. 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಎಲ್ಲಾ ಅಂಶಗಳು ಅದ್ಭುತವಾಗಿದ್ದು, ಸಮರ್ಪಕವಾಗಿ ಜಾರಿಗೆ ತರುವ ಕೆಲಸ ಆಗಬೇಕಿದೆ. ಒಂದು ವೇಳೆ ಪೂರ್ಣಪ್ರಮಾಣದಲ್ಲಿ ಈ ಶಿಕ್ಷಣ ನೀತಿ ಜಾರಿಯಾದರೆ, ದೇಶದ ಸರ್ವತೋಮುಖ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮೆಕಾಲೆ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಈ ಪರಿಸ್ಥಿತಿ ಬಂದಿದೆ ಎಂಬ ಮಾತುಗಳು ಭಾಷಣದಲ್ಲಿ ಕೇಳಿಬರುತ್ತಿದ್ದವು. ಆದರೆ, ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ.
ಆದರೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಅಡಗಿರುವುದನ್ನು ಕಾಣಬಹುದಾಗಿದೆ. ಇದು ಅತ್ಯುತ್ತಮ ನೀತಿಯಾಗಿದ್ದು, ಪೂರ್ಣಪ್ರಮಾಣದಲ್ಲಿ ಜಾರಿಮಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಕಾನೂನು ಶಾಲೆಯ ನಿರ್ದೇಶಕ ಪ್ರೊ.ಸಿ. ಬಸವರಾಜು, ಪ್ರೊ. ವಿಶ್ವನಾಥ್, ಪ್ರೊ.ಜಿ.ಸಿ. ರಾಜಣ್ಣ ಇತರರಿದ್ದರು.
ರಾಜಕೀಯ ವಿಪ್ಲವದಿಂದ ಶಿಕ್ಷಣ ನೀತಿ ಚರ್ಚೆಯೇ ಇಲ್ಲ: ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿ ಬಂದು ಒಂದೂವರೆ ತಿಂಗಳಾದರು ಈ ಬಗ್ಗೆ ಯಾರೂ ಹೆಚ್ಚು ಚರ್ಚೆ, ಸಂವಾದ ಮಾಡುತ್ತಿಲ್ಲ. ಇಂದು ಚಿಂತನೆಯ ದಾರಿದ್ರ ಕಾಡುತ್ತಿದೆ. ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ನಾವೆಲ್ಲ ಹಿಂದೆ ಬಿದ್ದಿದ್ದೇವೆ. ಒಂದು ಕಡೆ ರಾಜಕೀಯ ವಿಪ್ಲವದಿಂದಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗೆಗೆ ನಡೆಯಬೇಕಾದ ಚರ್ಚೆ, ಸಂವಾದಗಳು ತೆರೆಮರೆಗೆ ಸರಿದಿವೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಬೇಸರ ವ್ಯಕ್ತಪಡಿಸಿದರು.
ಈ ನೀತಿಯಲ್ಲಿ 3 ವರ್ಷದ ಮಗುವಿನಿಂದಲೇ ಶಿಕ್ಷಣ ನೀಡುವ ಬಗ್ಗೆ ಹೇಳಲಾಗಿದ್ದು, 6ನೇ ವರ್ಷದ ವರೆಗೆ ಆ ಮಗು ಅಕ್ಷರಾಭ್ಯಾಸ ಮತ್ತು ಸಂಖ್ಯೆಗಳನ್ನು ಗುರುತಿಸುವ ವಿಧಾನವನ್ನು ಕಲಿಯಬೇಕಿದೆ. ಇದರಿಂದ ಮಗು ಅಕ್ಷರ ಮತ್ತು ಸಂಖ್ಯೆಗಳ ಪರಿಪೂರ್ಣ ಜ್ಞಾನವನ್ನು ಪಡೆಯಲು ಸಹಾಯವಾಗುತ್ತದೆ. ಒಟ್ಟಾರೆ ಹೊಸ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಒಳ್ಳೆಯ ಅಂಶಗಳಿದ್ದು, ಈ ಬಗ್ಗೆ ಹೆಚ್ಚು ಚರ್ಚೆ, ಸಂವಾದಗಳು ನಡೆಯಬೇಕಿದೆ ಎಂದು ತಿಳಿಸಿದರು.
ಖಾಸಗಿ ವಿವಿಯಂತೆ ಸರ್ಕಾರಿ ವಿವಿಗಳಿಗೂ ವ್ಯಾಪ್ತಿ ವಿಸ್ತರಿಸಲಿ: ಮೈಸೂರು ವಿವಿಯಲ್ಲಿ ಕಳೆದ 10 ವರ್ಷಗಳಿಂದ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ನೇಮಕಾತಿಯಾಗಿಲ್ಲ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ?, ಈ ನಿಟ್ಟಿನಲ್ಲಿ ಕೆಲವು ವಿಚಾರದಲ್ಲಿ ರಾಜ್ಯ ವಿವಿಗಳಿಗೂ ಸ್ವಾಯತ್ತೆ ನೀಡಬೇಕು.
ರಾಜ್ಯ ವಿವಿಗಳಿಗೆ ಭೌಗೋಳಿಕ ಚೌಕಟ್ಟನ್ನು ಹಾಕಿರುವುದನ್ನು ಸಡಿಲಿಸಿ, ಖಾಸಗಿ ವಿವಿಗಳಂತೆ ಎಲ್ಲಾ ಕಡೆ ಸ್ನಾತಕೋತ್ತರ ಕೇಂದ್ರ ತೆರೆಯಲು ಅವಕಾಶ ಮಾಡಿಕೊಡುವ ಅಂಶಗಳನ್ನು 2019ರ ಶಿಕ್ಷಣ ನೀತಿಯಲ್ಲಿ ಸೇರಿಸಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ತಿಳಿಸಿದರು.
ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕೇಂದ್ರೀಯ ವಿವಿ, ರಾಜ್ಯ ವಿವಿ ಹಾಗೂ ಖಾಸಗಿ ವಿವಿ ಎಂಬ ಮೂರು ವಿಧದ ವಿಶ್ವವಿದ್ಯಾಲಯಗಳಿವೆ. ಕೇಂದ್ರೀಯ ವಿವಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುವುದಲ್ಲದೇ, ಸಾಕಷ್ಟು ಸೌಲಭ್ಯಗಳು ಇವೆ. ಖಾಸಗಿ ವಿವಿಗಳಲ್ಲಿ ಬಂಡವಾಳ ಸಾಕಷ್ಟಿದ್ದು, ಸಂಪನ್ಮೂಲ ಕೊರತೆ ಇರುವುದಿಲ್ಲ.
ಆದರೆ ಇವೆರೆಡರ ಮಧ್ಯೆ ರಾಜ್ಯ ವಿವಿಗಳು ತಬ್ಬಲಿಯಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಮರ್ಪಕ ಅನುದಾನ ಹಾಗೂ ಸೌಲಭ್ಯಗಳಿಲ್ಲದೇ ಸಮಸ್ಯೆ ಎದುರಿಸುತ್ತಿದ್ದು, ಕೇಂದ್ರೀಯ ಮತ್ತು ಖಾಸಗಿ ವಿವಿಗಳ ಜೊತೆ ಸಮನಾಗಿ ಸ್ಪರ್ಧೆಗೆ ಇಳಿಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.