Advertisement

Waste Management: ಗ್ರಾ.ಪಂ. ತ್ಯಾಜ್ಯ ನಿರ್ವಹಣೆಗೆ ಸ್ತ್ರೀಶಕ್ತಿ ಸಂಘಗಳ ಹಿಂದೇಟು

11:00 PM Oct 29, 2023 | Team Udayavani |

ದಾವಣಗೆರೆ: ರಾಜ್ಯದ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಸ್ವತ್ಛ ಗ್ರಾಮಕ್ಕೆ ಸ್ತ್ರೀ ಶಕ್ತಿಯ ಬಲ ಸಿಕ್ಕಿದೆ. ಆದರೆ ಕಸ ಸಂಗ್ರಹಿಸುವ ಮಹಿಳೆಯರಿಗೆ ಹಾಗೂ ಸ್ವತ್ಛವಾಹಿನಿ ವಾಹನದ ಇಂಧನಕ್ಕೆ ಹಣ ಯಾರು ಕೊಡಬೇಕು ಎಂಬ ಜಿಜ್ಞಾಸೆ ಆರಂಭವಾಗಿದ್ದರಿಂದ ತ್ಯಾಜ್ಯ ನಿರ್ವಹಣೆಯಿಂದ ಸ್ತ್ರೀ ಶಕ್ತಿ ಸಂಘಗಳು ಹೊರಗುಳಿಯಲು ಚಿಂತನೆ ನಡೆಸಿವೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಗ್ರಾಮೀಣ ಭಾಗದಲ್ಲಿ ಸ್ವತ್ಛತೆ, ನೈರ್ಮಲ್ಯಕ್ಕಾಗಿ ತ್ಯಾಜ್ಯ ನಿರ್ವಹಣೆ ಜವಾಬ್ದಾರಿಯನ್ನು ಒಪ್ಪಂದದ ಮೇಲೆ ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿದ್ದು, ಇಲ್ಲಿ ಮಹಿಳೆಯರೇ ಕಸ ತುಂಬುವ ವಾಹನ ಚಲಾಯಿಸುವುದು, ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವುದು ಹಾಗೂ ಸ್ವತ್ಛ ಸಂಕೀರ್ಣಗಳಲ್ಲಿ ಕಸ ವಿಂಗಡಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವಸಹಾಯ ಸಂಘಗಳ ಮಹಿಳೆಯರೇ ವಾಹನ ಓಡಿಸಿ ಗಮನ ಸೆಳೆಯುತ್ತಿದ್ದಾರೆ. ಮಹಿಳಾ ಸಂಘಟನೆಗಳ ಈ ಕಾರ್ಯಕ್ಕೆ ಹಲವೆಡೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ರಾಜ್ಯದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಗ್ರಾ.ಪಂ.ಗಳಲ್ಲಿ ಮಹಿಳಾ ಕಾರ್ಮಿಕರ ವೇತನದ ಸಮಸ್ಯೆ ಎದುರಾಗಿಲ್ಲ. ಆದರೆ ಆರ್ಥಿಕವಾಗಿ ಸದೃಢವಾಗಿರುವ ಪಂಚಾಯತ್‌ಗಳ ಸಂಖ್ಯೆ ರಾಜ್ಯದಲ್ಲಿ ಬಹಳ ವಿರಳವಾಗಿದ್ದು, ಬಹುತೇಕ ಪಂಚಾಯತ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುವ ಮಹಿಳಾ ಕಾರ್ಮಿಕರಿಗೆ ವೇತನ ಪಾವತಿಸುವುದು ಹೊರೆಯಾಗಿದೆ. ಹೀಗಾಗಿ ಮಹಿಳಾ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಘನತ್ಯಾಜ್ಯ ನಿರ್ವಹಣೆ ಗ್ರಾ.ಪಂ.ಗಳಿಗೆ ಕಷ್ಟವಾಗಿದೆ.

ಏನಿದು ಸಮಸ್ಯೆ?
ಹಳ್ಳಿಗಳಲ್ಲಿನ ತ್ಯಾಜ್ಯ ನಿರ್ವಹಣೆ ಜವಾಬ್ದಾರಿಯನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ಒಪ್ಪಂದದೊಂದಿಗೆ ನೀಡಲಾಗುತ್ತಿದೆ. ಕಸ ಸಂಗ್ರಹಿಸುವ ಸ್ವತ್ಛ ವಾಹಿನಿ ವಾಹನದ ಇಂಧನ, ಕಸ ಸಂಗ್ರಹ ಹಾಗೂ ವಿಂಗಡಣೆ ಮಾಡುವ ಮೂರ್‍ನಾಲ್ಕು ಮಹಿಳೆಯರಿಗೆ ಒಟ್ಟು ಮಾಸಿಕ ಸರಾಸರಿ 20-25 ಸಾವಿರ ರೂ. ನೀಡಲಾಗುತ್ತಿದೆ. ಮನೆಗಳ ಸಂಖ್ಯೆ ಹೆಚ್ಚಿದ್ದಲ್ಲಿ ಈ ಮೊತ್ತ ತುಸು ಹೆಚ್ಚಾಗಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಘನತ್ಯಾಜ್ಯ ನಿರ್ವಹಣೆ ಮಾಡುವ ಮಹಿಳಾ ಒಕ್ಕೂಟಗಳಿಗೆ ಗ್ರಾ.ಪಂ.ಗಳು 15ನೇ ಹಣಕಾಸು ಯೋಜನೆ ಬಳಸಿಕೊಂಡು ಹಣ ಪಾವತಿಸಬೇಕು ಎಂದು ಸೂಚಿಸಿದೆ. ಕಳೆದ ಒಂದು ವರ್ಷದಿಂದ ಗ್ರಾ.ಪಂ.ಗಳು ಮಹಿಳಾ ಸಂಘಗಳಿಗೆ ಮಾಸಿಕ ಹಣ ಸಂದಾಯ ಮಾಡುತ್ತ ಬಂದಿವೆ. ಆದರೆ 15ನೇ ಹಣಕಾಸು ನಿಧಿಯಲ್ಲಿಯೇ ಗ್ರಾ.ಪಂ.ನ ಎಲ್ಲ ಅಭಿವೃದ್ಧಿ ಚಟುವಟಿಕೆ ಅವಲಂಬಿಸಿರುವುದರಿಂದ ತ್ಯಾಜ್ಯ ನಿರ್ವಹಣೆಗೆ ಹಣ ಹೊಂದಿಸುವುದು ಕಷ್ಟ ಎನ್ನುತ್ತಿರುವುದರಿಂದ ಸಮಸ್ಯೆ ಉಲ್ಬಣಿಸಿದೆ.

Advertisement

ಈ ನಡುವೆ ಕೆಲವು ಗ್ರಾ.ಪಂ.ಗಳು ಮನೆ ಮನೆಯಿಂದ ಕಸ ಸಂಗ್ರಹಣೆಯ ಶುಲ್ಕ ವಸೂಲಿ ಮಾಡಲು ತ್ಯಾಜ್ಯ ನಿರ್ವಹಣೆ ಮಾಡುವ ಮಹಿಳೆಯರಿಗೇ ಸೂಚಿಸುತ್ತಿದ್ದು, ಮಹಿಳೆಯರು ಶುಲ್ಕ ವಸೂಲಿಗೆ ಮನಸ್ಸು ಮಾಡುತ್ತಿಲ್ಲ. ಕಸ ಸಂಗ್ರಹದ ಜತೆಗೆ ಶುಲ್ಕ ವಸೂಲಿ ಮಾಡಬೇಕು. ಶುಲ್ಕ ವಸೂಲಿ ಆದ ಮೇಲೆಯೇ ತಮಗೆ ಸಂಭಾವನೆ ಆಗಲಿದೆ ಎಂಬ ಕಾರಣಕ್ಕಾಗಿ ಮಹಿಳಾ ಒಕ್ಕೂಟಗಳು ಈ ಜವಾಬ್ದಾರಿಯಿಂದ ಹಿಂದೆ ಸರಿಯಲು ಮುಂದಾಗಿವೆ.

ಹಣ ಹೊಂದಿಕೆ ಜಿಜ್ಞಾಸೆ
ಕೆಲವು ಗ್ರಾ.ಪಂ.ಗಳು ತ್ಯಾಜ್ಯ ನಿರ್ವಹಣೆ ಮಾಡುವ ಮಹಿಳಾ ಸಂಘಗಳಿಗೆ ಸ್ವತ್ಛ ಭಾರತ್‌ ಮಿಷನ್‌ ಮೂಲಕ ವೇತನ ಹಾಗೂ ವಾಹನದ ಇಂಧನ ಭರಿಸುವ ವ್ಯವಸ್ಥೆಯಾಗಬೇಕು ಎಂಬ ಬೇಡಿಕೆ ಇಟ್ಟರೆ, ಗ್ರಾಮಾಭಿವೃದ್ಧಿ ಇಲಾಖೆಯು 15ನೇ ಹಣಕಾಸು ನಿಧಿಯಲ್ಲಿ ಇದರ ನಿರ್ವಹಣೆ ಮಾಡಲು ಗ್ರಾ.ಪಂ.ಗಳಿಗೆ ಸೂಚಿಸುತ್ತಿದೆ. ಆದರೆ ಗ್ರಾ.ಪಂ.ಗಳು 15ನೇ ಹಣಕಾಸು ನಿಧಿಯಲ್ಲಿಯೇ ಗ್ರಾ.ಪಂ.ನ ಎಲ್ಲ ಅಭಿವೃದ್ಧಿ ಚಟುವಟಿಕೆ ಅವಲಂಬಿಸಿರುವುದರಿಂದ ಇದರ ನಿರ್ವಹಣೆ ಕಷ್ಟ ಎನ್ನುತ್ತಿವೆ. ಹೀಗಾಗಿ ತ್ಯಾಜ್ಯ ನಿರ್ವಹಣೆಗೆ ಜವಾಬ್ದಾರಿ ಹೊತ್ತ ಮಹಿಳಾ ಸಂಘಗಳು ಈ ಕೆಲಸ ಮುಂದುವರಿಸಬೇಕೋ ಬೇಡವೋ ಎಂದು ತೀರ್ಮಾನ ಕೈಗೊಳ್ಳುವ ಹಂತಕ್ಕೆ ಬಂದಿವೆ.

ಆರ್ಥಿಕವಾಗಿ ಸಶಕ್ತವಲ್ಲದ ಗ್ರಾ.ಪಂ.ಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹ ಶುಲ್ಕ ಪಡೆದು ತಮ್ಮ ವೇತನ ಪಡೆಯಲು ಸೂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಆದರೆ, ಇಲಾಖೆಯು 15ನೇ ಹಣಕಾಸು ಯೋಜನೆಯಡಿ ಇದನ್ನು ಪಾವತಿಸಲು ಗ್ರಾ.ಪಂ.ಗಳಿಗೆ ನಿರ್ದೇಶನ ನೀಡಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
– ರೂಪಾ ಜಿ., ಜಿಲ್ಲಾ ಸಮಾಲೋಚಕರು, ಸ್ವತ್ಛ ಭಾರತ್‌ ಮಿಷನ್‌

 ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next