ಹುಣಸೂರು: ತಾಲೂಕಿನಾದ್ಯಂತ ಕಳೆದ ಎರಡು ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾಗಿರುವ ಶಾಲೆ-ಅಂಗನವಾಡಿ ಹಾಗೂ ಕೆರೆ ಕಟ್ಟೆಗಳಿಗೆ ಜಿಲ್ಲಾ ಪಂಚಾಯ್ತಿ ಸಿಇಓ ಯೋಗೀಶ್‌ರವರು ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿಯಾಗಿ ಪರಿಶೀಲನೆ ನಡೆಸಿದರು.
ಬುಧವಾರ ತಾ.ಪಂ. ಇಓ ಗಿರೀಶ್ ಮತ್ತಿತರ ಅಧಿಕಾರಿಗಳೊಂದಿಗೆ ತಾಲೂಕಿನ ಬಿಳಿಕೆರೆ ಹೋಬಳಿಯ ಹಳೇಬೀಡು ಅಂಗನವಾಡಿ, ಹುಸೇನಪುರ ಗ್ರಾ.ಪಂ.ನ ತೆಂಕಲಕೊಪ್ಪಲು ಗ್ರಾಮದ ಪ್ರೌಢಶಾಲೆ, ಹೊಸರಾಮೇನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆ, ಕೃಷ್ಟಾಪುರ ಸರಕಾರಿ ಪ್ರಾಥಮಿಕ ಶಾಲೆ, ಗಾವಡಗೆರೆ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ಇತ್ತು ಹಾನಿಯನ್ನು ಪರಿಶೀಲಿಸಿದರು.
ಇದೇ ವೇಳೆ ಮೈದನಹಳ್ಳಿ ಗ್ರಾಮದ ಗೌಡನಕಟ್ಟೆ ಕೆರೆ ಏರಿ ರಸ್ತೆ ಮಳೆಯಿಂದ ಸಂಪೂರ್ಣ ಹಾನಿಯಾಗಿರುವುದನ್ನು ಪರಿಶೀಲಿಸಿ, ನರೇಗಾ ಮತ್ತು ವಿಪತ್ತು ನಿರ್ವಹಣೆ ಯೋಜನೆಯಡಿ ದುರಸ್ತಿ ಮಾಡುವಂತೆ, ದೊಡ್ಡ ಶಾಲಾ ಆವರಣವಿರುವೆಡೆಗಳಲ್ಲಿ ನರೇಗಾ ಯೋಜನೆ ಬಳಸಿ ತರಕಾರಿ ಬೆಳೆಯುವಂತೆ ಸಿ.ಇ.ಓ.ಯೋಗೀಶ್ ಸೂಚಿಸಿದರು.
98 ಶಾಲಾ ಕೊಠಡಿಗೆ ಹಾನಿ
ತಾಲೂಕಿನಲ್ಲಿ ಈವರೆಗೆ ಒಟ್ಟು 98 ಶಾಲಾ ಕೊಠಡಿಗಳಿಗೆ ಹಾನಿಯಾಗಿದ್ದು, ಬಹುತೇಕ ಕಡೆಗಳಲ್ಲಿ ತರಗತಿಗಳನ್ನು ನಡೆಸಲಾಗದ ಸ್ಥಿತಿ ಇದೆ ಎಂದು ಬಿಇಓ ನಾಗರಾಜ್ ಸಿಇಓಗೆ ಮಾಹಿತಿ ನೀಡಿದರೆ, ಸಿಡಿಪಿಓ ರಶ್ಮಿ ತಾಲೂಕಿನಲ್ಲಿ ಒಟ್ಟು 26 ಅಂಗನವಾಡಿಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ರಾಷ್ಟ್ರದಲ್ಲಿ ದೇವರನ್ನು ಕಾಣುತ್ತಿದ್ದ ಪೇಜಾವರ ಶ್ರೀ
ಪ್ರಸ್ತಾವನೆಗೆ ಸೂಚನೆ
ತಾಲೂಕಿನಲ್ಲಿ ಅತಿಯಾದ ಮಳೆಯಿಂದಾಗಿ ಹಾನಿಗೊಂಡಿರುವ ಶಾಲಾ-ಅಂಗನವಾಡಿ ಕಟ್ಟಡಗಳನ್ನು ಪರಿವೀಕ್ಷಣೆ ನಡೆಸಿ, ವಾಸ್ತವ ಸ್ಥಿತಿಯನ್ನು ವಿಡಿಯೋ ಚಿತ್ರೀಕರಿಸಿ, ಛಾಯಾ ಚಿತ್ರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಬಿಇಓ ನಾಗರಾಜ್, ಸಿಡಿಪಿಓ ರಶ್ಮಿ ಹಾಗೂ ಎಇಇ ಪ್ರಭಾಕರ್‌ಗೆ ಸೂಚಿಸಿದರು. ಕೆಲವೆಡೆ ಶಾಲಾ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿರುವುದನ್ನು ಕಂಡು ತರಗತಿ ನಡೆಸದಂತೆ ಸಲಹೆ ನೀಡಿದರು.
ಬಿಸಿಯೂಟ ಸವಿದ ಸಿಇಓ
ಗಾವಡಗೆರೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮದ್ಯಾಹ್ನ ಮಕ್ಕಳೊಂದಿಗೆ ಬಿಸಿಯೂಟ ಮಾಡಿದ ಸಿಇಓ ಯೋಗಿಶ್‌ರವರು ಇಲ್ಲಿನ ಶಾಲಾ ಆವರಣ ವಿಸ್ತಾರವಾಗಿದ್ದು, ನರಗಾ ಯೋಜನೆಯಡಿ ಕಿಚನ್ ಗಾರ್ಡನ್ ಮಾಡುವ ಮೂಲಕ ತರಕಾರಿ ಬೆಳೆಯಲು ಸೂಚಿಸಿದರು.