ದೋಟಿಹಾಳ: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಅವರನ್ನು ಶಾಲಾ ಮುಖ್ಯವಾಹಿನಿಗೆ ಕರೆ ತರುವ ಹೊಣೆಗಾರಿಕೆಯನ್ನು ಪಂಚಾಯತ್‌ಗಳಿಗೆ ನೀಡಿರುವುದರಿಂದ ಗ್ರಾಪಂ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಪಂ ಸಿಬ್ಬಂದಿ ಅಳಲು ತೋಡಿಕೊಂಡರು.
ಗ್ರಾಪಂ ಮಾಟೂರು, ಹೆಸರೂರ ಮತ್ತು ದೋಟಿಹಾಳ ಸೇರಿ ಸುಮಾರು 1178 ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಬೇಕು. ಗ್ರಾಪಂ ಸಿಬ್ಬಂದಿ 8-10 ದಿನಗಳಿಂದ ಪ್ರತಿದಿನ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಹಾಗೂ ಜಿಪಿಆರ್‌ಎಸ್ ಮಾಡಬೇಕು. ಒಂದೊಂದು ಮನೆಗೆ ಕನಿಷ್ಟ ಅರ್ಧ ಗಂಟೆ ಬೇಕಾಗುತ್ತದೆ. ಇದರಿಂದ ಗ್ರಾಪಂ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿರುವುದರಿಂದ ಹೈಕೋರ್ಟ್ ನಿರ್ದೇಶನದ ಬಳಿಕ ಶಿಕ್ಷಣ ಇಲಾಖೆ ಮನವಿ ಮೇರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯು ಈ ಬಗ್ಗೆ ಪಂಚಾಯತ್‌ಗಳಿಗೆ ಮಾರ್ಗಸೂಚಿ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ 2019ರ ನ. 7ರಂದು ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಗ್ರಾಮೀಣ ಭಾಗದಲ್ಲಿ ಕಾರ್ಮಿಕರೊಡನೆ ವಲಸೆ ಬಂದ ಮಕ್ಕಳ ಗಣತಿ ನಡೆಸಿ ಅವರು ಶಾಲೆಗೆ ದಾಖಲಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಹ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವಹಿಸಲಾಗಿದೆ.
ಈ ಮಧ್ಯೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರುವ ಜವಾಬ್ದಾರಿ ನಿರ್ವಹಿಸುವ ಕುರಿತಂತೆ ಪಂಚಾಯತ್‌ಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಶಿಕ್ಷಣ ಇಲಾಖೆ ಡಿ. 10ರಂದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು. ಅದನ್ನು ಉಲ್ಲೇಖೀಸಿ ಗ್ರಾಮೀಣಾಭಿವೃದ್ಧಿ ಇಲಾಖೆಯು ಡಿ. 11ರಂದು ಎಲ್ಲ ಪಂಚಾಯತ್ ಗಳಿಗೆ ಸುತ್ತೂಲೆ ಕಳಿಸಿದ ಕಾರಣ ಸದ್ಯ ಎಲ್ಲ ಗ್ರಾಪಂ ಸಿಬ್ಬಂದಿ ಹಳ್ಳಿಗಳಲ್ಲಿ ಶಾಲಾ ಬಿಟ್ಟ ಮಕ್ಕಳ ಸಮೀಕ್ಷೆ ಮಾಡಿ ವರದಿ ನೀಡಬೇಕಿದೆ.