Advertisement

“ಗೌರಿ’ಸಿಸ್ಟಂ: ಗೌರಿಯನ್ನು ಅಲಂಕರಿಸುವ 3 ಹೊಸ ವಿಧಾನಗಳು

10:28 AM Aug 23, 2017 | |

ನಾಳೆಯೇ ಗೌರಿ ಹಬ್ಬ. ಪ್ರತಿ ಬಾರಿಯೂ ಒಂದೇ ರೀತಿಯಾಗಿ ಗೌರಿಯನ್ನು ಅಲಂಕರಿಸುವುದಕ್ಕಿಂತ, ಈ ಸಲ ವಿಭಿನ್ನವಾಗಿ ಮೂರ್ತಿಯ ಅಲಂಕಾರವನ್ನು ಮಾಡಿ ನೋಡಿ…

Advertisement

1. ಅರಿಶಿನ ಗೌರಿ
ಪೂಜೆಗೆ ಬಲು ಶ್ರೇಷ್ಠ. ತೆಂಗಿನಕಾಯಿಯನ್ನು ಬಳಸಿ ಅರಿಶಿನದ ಗೌರಿಯನ್ನು ಪೂಜೆಗೆ ಸಿದ್ಧಗೊಳಿಸುವ ವಿಧಾನ ಹೀಗಿದೆ. ಮೊದಲು ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಅಂಟು ಹಾಗೂ ಅರಿಶಿನ ಹಾಕಿ ಚೆನ್ನಾಗಿ ಕಲೆಸಬೇಕು. ನಂತರ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಒಂದು ಭಾಗಕ್ಕೆ ಮೈದಾಹಿಟ್ಟಿನ ಮಿಶ್ರಣವನ್ನು ಚೆನ್ನಾಗಿ ಲೇಪಿಸಬೇಕು. ಅನಂತರ ಈ ಹಿಟ್ಟಿನಲ್ಲಿಯೇ ಕಿವಿ, ಕಣ್ಣು, ಮೂಗು, ತುಟಿ ಹಾಗೂ ಹುಬ್ಬುಗಳನ್ನು ಮಾಡಿ ಕುಂಕುಮ ಹಾಗೂ ಕಾಡಿಗೆಯಿಂದ ಅಲಂಕರಿಸಬೇಕು. ನಂತರ ತೆಂಗಿನಕಾಯಿಯ ಜುಟ್ಟಿನ ಭಾಗಕ್ಕೆ ಕಪ್ಪು ಬಟ್ಟೆ ಸುತ್ತಿದರೆ ತಲೆ ಕೂದಲಿನಂತೆ ಕಾಣಿಸುತ್ತದೆ. ನಂತರ ಇದಕ್ಕೆ ಹೂವು ಅಥವಾ ಜರಿಯಿಂದ ಅಲಂಕರಿಸಬೇಕು. ಹೀಗೆ ಶೃಂಗರಿಸಿದ ಕಾಯಿಯನ್ನು ತಾಮ್ರ ಅಥವಾ ಬೆಳ್ಳಿಯ ತಂಬಿಗೆಯ ಮೇಲಿಟ್ಟು ಎತ್ತರದ ಸ್ಥಳದಲ್ಲಿಟ್ಟು, ಸೀರೆ ಉಡಿಸಿದರೆ ಸಾûಾತ್‌ ಪಾರ್ವತಿ ದೇವಿಯೇ ಕಂಗೊಳಿಸುವಂತೆ ಭಾಸವಾಗುತ್ತದೆ.

2. ಸ್ಟೀಲ್‌ ಡಬ್ಬಿಗಳ ಅಲಂಕಾರ
ಮೊದಲು ಮೂರು ಸ್ಟೀಲ್‌ ಡಬ್ಬಿಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಗಮ್‌ ಟೇಪ್‌ ಸಹಾಯದಿಂದ ಅಂಟಿಸಿ. ಇದರ ಮೇಲೆ ಒಂದು ತಾಮ್ರದ ತಂಬಿಗೆಯನ್ನು ಜೋಡಿಸಿ. ಅದರ ಅಂಚಿಗೆ ಉದ್ದವಾದ ಮರದ ಸ್ಕೇಲ್‌ ಅನ್ನು ಕಟ್ಟಿಕೊಳ್ಳಿ. ನಂತರ ಬಾರ್ಡರ್‌ ಹಾಗೂ ಪಲ್ಲು ಇರುವ ಸೀರೆಯನ್ನು ಆಯ್ಕೆ ಮಾಡಿಕೊಂಡು, ನೆರಿಗೆಯನ್ನು ಹಿಡಿದುಕೊಳ್ಳಿ. ನೆರಿಗೆಯ ತುದಿಗೆ ದಾರದಿಂದ ಕಟ್ಟಿಕೊಳ್ಳಿ. ಸೀರೆಯ ಮಧ್ಯಭಾಗಕ್ಕೆ ಮತ್ತೂಂದು ದಾರದಿಂದ ಕಟ್ಟಬೇಕು. ನಂತರ ಸೀರೆಯ ತುದಿಯ ಭಾಗವನ್ನು ತಂಬಿಗೆಯ ಕಂಠದ ಭಾಗಕ್ಕೂ, ಮಧ್ಯ ಹಾಕಿದ ದಾರದ ಭಾಗವನ್ನು ಸೊಂಟದ ಭಾಗಕ್ಕೂ ಕಟ್ಟಬೇಕು. ನಂತರ ಪಲ್ಲು ಭಾಗವನ್ನು ತೆಗೆದುಕೊಂಡು ನೆರಿಗೆ ಹಿಡಿದು ಸ್ಕೇಲ್‌ನ ಮೇಲೆ ಬರುವಂತೆ ಹಾಕಿ, ಪಲ್ಲುವಿನ ಕುಚ್ಚು ಮುಂಭಾಗದಲ್ಲಿ ಬರುವ ರೀತಿ ಜೋಡಿಸಬೇಕು. ನಂತರ ಸೊಂಟದ ಪಟ್ಟಿಯನ್ನು ಮಧ್ಯಭಾಗದಲ್ಲಿ ಹಾಗೂ ಕಂಠದ ಭಾಗಕ್ಕೆ ಸರಗಳಿಂದ ಅಲಂಕರಿಸಿ ಗೌರಿಯ ಮುಖವಾಡವನ್ನು ತಂಬಿಗೆಯ ಮೇಲ್ಭಾಗದಲ್ಲಿ ಸೇರಿಸಿದರೆ, ಅಲಂಕೃತವಾದ ಗೌರಿದೇವಿ ಪೂಜೆಗೆ ಸಿದ್ಧ. (ಸ್ಟೀಲ್‌ ಡಬ್ಬಿಗಳನ್ನು ಆಧಾರಕ್ಕಾಗಿ ಸ್ಟೂಲ್‌ನ ಮೇಲಿಟ್ಟುಕೊಳ್ಳಬಹುದು)

3. ಬಿಂದಿಗೆಯಿಂದ ಗೌರಿ
ಒಂದು ತಾಮ್ರದ ಬಿಂದಿಗೆಯನ್ನು ಸ್ಟೂಲಿನ ಮೇಲಿಡಬೇಕು. ಇದರ ಕಂಠಕ್ಕೆ ಸ್ಕೇಲ್‌ ಅನ್ನು ಕಟ್ಟಬೇಕು. ಆನಂತರ ಒಂದು ಸೀರೆಯನ್ನು ತೆಗೆದುಕೊಂಡು ಕೆಳಗಿನ ಹಾಗೂ ಮೇಲಿನ ಬಾರ್ಡರ್‌  ಒಂದರ ಮೇಲೊಂದು ಬರುವಂತೆ ಸೀರೆಯನ್ನು ಮಡಿಸಿಕೊಂಡು, ಅಗಲವಾಗಿ ನೆರಿಗೆಯನ್ನು ಹಿಡಿದು ತುದಿಯ ಭಾಗದಲ್ಲಿ ದಾರದಿಂದ ಕಟ್ಟಬೇಕು. ಆನಂತರ ಇದನ್ನು ಬಿಂದಿಗೆಯ ಕಂಠಕ್ಕೆ ಕಟ್ಟಿ ಸೀರೆಯ ನೆರಿಗೆಯನ್ನು ಅಗಲವಾಗಿ ಬಿಂದಿಗೆಯ ಸುತ್ತಲೂ ಬರುವಂತೆ ಹರಡಬೇಕು. ಇನ್ನೊಂದು ರವಿಕೆ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ನೆರಿಗೆ ಹಿಡಿದು ಅದನ್ನು ಸೆರಗಿನಂತೆ ಮುಂಭಾಗದಿಂದ ಬರುವಂತೆ ಸ್ಕೇಲಿಗೆ ಹಾಕಬೇಕು. ಆನಂತರ ಕುತ್ತಿಗೆ ಭಾಗಕ್ಕೆ ಅಗಲವಾದ ನೆಕ್ಲೇಸ್‌, ಲಾಂಗ್‌ ಚೈನ್‌ಗಳಿಂದ ಅಲಂಕರಿಸಿ ಇನ್ನೊಂದು ಭಾಗದ ಸ್ಕೇಲ್‌ ಮುಚ್ಚುವಂತೆ ದಪ್ಪನಾಗಿರುವ ಹಾರದಿಂದ ಅಲಂಕರಿಸಿ ದೇವಿಯ ಮುಖವಾಡವನ್ನು ಬಿಂದಿಗೆಯ ಮೇಲೆ ಫಿಕ್ಸ್‌ ಮಾಡಿದರೆ ಅನುರೂಪವಾದ ಗೌರಿದೇವಿ ಪೂಜೆಗೆ ಸಿದ್ಧ.

ಭಾಗ್ಯ ನಂಜುಂಡಸ್ವಾಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next