ಬೆಂಗಳೂರು: ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗುರುವಾರವೇ ಲಾಲ್‌ಬಾಗ್‌ನ ಮುಖ್ಯದ್ವಾರದ ಸಮೀಪದ ಪ್ರದೇಶ ಸೇರಿದಂತೆ ನಗರದ ಹಲವೆಡೆ ಹೂವು ಮತ್ತು ಹಣ್ಣಿನ ಅಂಗಡಿಗಳು ತಲೆ ಎತ್ತಿವೆ.
ಕೋವಿಡ್ -19 ಹಿನ್ನೆಲೆಯಲ್ಲಿ ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಇನ್ನೂ ಹೂವಿನ ವ್ಯಾಪಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಅವಕಾಶ ನೀಡಿಲ್ಲ. ಈ ದೃಷ್ಟಿಯಿಂದ ನಗರದ ಹಲವು ರಸ್ತೆಗಳಲ್ಲಿ, ಜನಸಂದಣಿ ಸ್ಥಳಗಳಲ್ಲಿ ಹೂವು, ಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ಜತೆಗೆ ತಳ್ಳುವ ಗಾಡಿಗಳಲ್ಲೂ ವ್ಯಾಪಾರ ಸಾಗಿದೆ.
ಲಾಲ್‌ಬಾಗ್ ಮುಖ್ಯ ಪ್ರವೇಶ ದ್ವಾರದ ಬಳಿ ಇರುವ ಎಂಟಿಆರ್ ಸಮೀಪ ತಾತ್ಕಾಲಿಕವಾಗಿ ತೆರೆದಿದ್ದ ಸಗಟು ಹೂವಿನ ಮಂಡಿ ಸೇರಿದಂತೆ ಕೆಲವೆಡೆ ಹೂವಿನ ಅಂಗಡಿಗಳನ್ನು ತೆರೆಯಲಾಗಿದ್ದು ಗ್ರಾಹಕರ ಖರೀದಿಯೂ ಕಂಡು ಬಂತು. ಜತೆಗೆ ಪತ್ರೆಗಳು (ಬಿಲ್ವಪತ್ರೆ, ದವನ) 5 ರೂಪಾಯಿ ಮತ್ತು ಗರಿಕೆ ಕಂತೆಗೆ 5 ರೂ.ಗೆ ಖರೀದಿಯಾಯಿತು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಗಣೇಶ ಆಚರಣೆಗೆ ಕೆಲವು ನಿರ್ಬಂಧ ಹೇರಿದೆ. ಆ ಹಿನ್ನೆಲೆಯಲ್ಲಿ ಗಣೇಶನ ಅಲಂಕಾರಕ್ಕೆ ಖರೀದಿಸುವ ಹೂವಿನ ಪ್ರಮಾಣ ಕೂಡ ಕಡಿಮೆ ಆಗಿದೆ ಎಂದು ಹೂವಿನ ವ್ಯಾಪಾರಿ ಮೋಹನ್ ಹೇಳಿದರು. ಸೇವಂತಿಗೆ ಸೇರಿದಂತೆ ಇನ್ನಿತರ ಹೂಗಳು ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿ ಇನ್ನಿತರ ಕಡೆಯಿಂದ ಮಾರುಕಟ್ಟೆಗೆ ಬರಲಿವೆ. ಇನ್ನೂ ಕೆಲವು ಜಾತಿಯ ಹೂವುಗಳು ತಮಿಳುನಾಡಿನಿಂದ ಬರಲಿವೆ. ಆದರೆ, ಈ ಬಾರಿ ಆವಕದ ಪ್ರಮಾಣವೂ ಕಡಿಮೆ ಆಗಿದೆ. ಕೆಲವೆಡೆ ಮಳೆಯಿಂದ
ಹೂವಿನ ಫಸಲಿಗೂ ಹೊಡೆತ ಬಿದ್ದಿದೆ. ಜತೆಗೆ ಹಿನ್ನೆಲೆಯಲ್ಲಿ ಹೂವಿನ ಮಾರುಕಟ್ಟೆ ಗಳು ಬಂದ್ ಆಗಿವೆ. ಹೀಗಾಗಿ ಬೆಲೆಯಲ್ಲಿ ಒಂದಿಷ್ಟು ಏರಿಕೆ ಆಗಿದೆ ಎಂದಿದ್ದಾರೆ.
ನಾಳೆ ಮಾಂಸ ಮಾರಾಟಕ್ಕೆ ನಿಷೇಧ : ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಆ.22ರ ಶನಿವಾರ ನಗರದ ಎಲ್ಲಾ ಕಸಾಯಿಖಾನೆಗಳಲ್ಲಿಯೂ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಮೀರಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ಮಾಡುವುದು ಕಂಡು ಬಂದರೆ, ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಪಶು ಪಾಲನೆ ವಿಭಾಗದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.