Advertisement

ಗೌರಿ ಸಂಭ್ರಮ: ಪ್ರೀತಿ, ಸೌಜನ್ಯ, ದಯೆ ಹೊತ್ತು ತರಲಿ ಗೌರಿ

12:33 AM Aug 30, 2022 | Team Udayavani |

“ಗೌರಿ’ ಎಂದರೆ ಒಂದು ಸೌಜನ್ಯದ ಮೂರ್ತಿ ಎಂಬ ಚಿತ್ರಣ ಕಣ್ಮುಂದೆ ಕಟ್ಟುತ್ತದೆ. ಮನೆಯಲ್ಲಿ ಆಕಳು ಇದ್ದರೆ ಅದರ ಹೆಸರು ನಿರ್ವಿವಾದವಾಗಿ ಗೌರಿ, ಮನೆಗೆ ಸಣ್ಣ ಹುಡುಗಿಯರು ಮುಸ್ಸಂಜೆ ಹೊತ್ತು ಮನೆಗೆ ಬಂದರೆ “ಬಾಲ ಗೌರಿ ಬಂದಿದ್ದಾಳೆ. ತುಸು ಸಿಹಿ ತಿನ್ನಿಸಿ ಹಣೆಗೆ ಕುಂಕುಮವಿಟ್ಟು ಕಳುಹಿಸು’ ಎಂಬ ಹಿರಿಯರ ಮೆಲುನುಡಿ, ಮನೆ ಮಗಳು ಗೌರಿ, ಮನೆ ಬೆಳಗಲು ಬರುವ ಸೊಸೆ ಗೌರಿ- ಹೀಗೆ ಹೆಣ್ಣುಮಕ್ಕಳನ್ನು ಹಿರಿಯರು ಸಂಬೋಧಿಸುವುದು ಗೌರಿ ಎಂದೇ.

Advertisement

ಶ್ರಾವಣದ ಜಿಟಿ ಜಿಟಿ ಮಳೆ ಹೊರಗೆ ಹದವಾಗಿ ಸುರಿಯುತ್ತಿರುವಾಗಲೇ ದೇವರ ಮನೆತುಂಬ ಮಂಗಳಗೌರಿ, ಶುಕ್ರಗೌರಿಯರ ಕಲರವ. ಮಳೆ ತುಸು ಬಿಟ್ಟು ಆಡುವಾಗ ಭಾದ್ರಪದ ಮಾಸದ ಆಗಮನ. ಭಾದ್ರಪದ ಹೊತ್ತು ತರುವ ಮೊದಲ ಸಡಗರವೇ ಗೌರಿಹಬ್ಬ.

ಹಬ್ಬಗಳೆಂದರೆ ಹಣ್ಣುಮಕ್ಕಳ ಮನಸ್ಸಿನಲ್ಲಿ ಸಾವಿರ ನವಿಲುಗಳ ಕುಣಿತ. ಅದರಲ್ಲೂ ಗೌರಿ ಹಬ್ಬವೆಂದರಂತೂ ಹೆಂಗಳೆಯರು ಸ್ವತಃ ಗೌರಿಯಂತೆ ಸಿಂಗರಿಸಿಕೊಂಡು ಹಬ್ಬದ ತಯಾರಿಗೆ ನಿಂತು ಬಿಡುತ್ತಾರೆ. ಒಂದು ವಾರ ಮುಂಚೆಯೇ ಗೌರಿಯ ಆಗಮನಕ್ಕೆ ತಯಾರಿ ಶುರು ವಿಟ್ಟುಕೊಳ್ಳುವ ಇವರಿಗೆ ಮಾರನೆ ದಿನ ತಾಯಿಯನ್ನು ಕರೆದೊಯ್ಯಲು ಭೂಮಿಗೆ ಬರುವ ಗೌರಿಯ ತನುಜ ಗಣಪನ ಆತಿಥ್ಯಕ್ಕೂ ಅಣಿ ಮಾಡುವ ಉಲ್ಲಾಸ ತುಂಬಿರುತ್ತದೆ. ಇವರಿಬ್ಬರನ್ನು ಬರಮಾಡಿಕೊಂಡು ಪೂಜಿಸಿ, ಉಣಿಸಿ, ತಣಿಸಿ ಸತ್ಕರಿಸಬೇಕಲ್ಲವೇ!

ಗೌರಿಯನ್ನು ಸ್ವರ್ಣಗೌರಿ ಎಂದೂ ಕರೆಯುವುದುಂಟು. ತಾಮ್ರದ ಕಳಶದ ಮೇಲೆ ಕಾಯಿಯಿಟ್ಟು ಅದಕ್ಕೆ ಗೌರಿಯ ಮುಖವನ್ನು ಬರೆದು ಇಲ್ಲವೇ ಮಾರುಕಟ್ಟೆಯಲ್ಲಿ ಸಿಗುವ ಮುಖವನ್ನು ಇರಿಸುತ್ತಾರೆ. ಇಲ್ಲವೇ ಅರಿಷಿಣದ ಗೌರಿ ಮಾಡಿ ಅಕ್ಕಿಯ ತಟ್ಟೆಯಲ್ಲಿಟ್ಟು ಪೂಜೆಗೆ ಕೂಡಿಸುತ್ತಾರೆ. ಈ ನಮ್ಮ ಸ್ವರ್ಣಗೌರಿಗೆ ಹದಿನಾರು ತರದ ಹೂಗಳು, ಹದಿನಾರು ಎಳೆಯ ದಾರ ಬಂಧನ. ಆ ದಾರಕ್ಕೆ ಹದಿನಾರು ಗಂಟುಗಳು, ಹದಿನಾರೆಳೆ ಗೆಜ್ಜೆ ವಸ್ತ್ರ, ಎರಡು ಗೆಜ್ಜೆ ವಸ್ತ್ರದ ಕುಪ್ಪಸ, ಹದಿನಾರು ಬಿಲ್ವ ಪತ್ರೆ, ಶಕ್ಯಾನುಸಾರ ಸೀರೆಯೋ, ಕುಪ್ಪಸದ ಉಡುಗೆಯನ್ನೋ ಉಡಿಸಿ, ಸರ್ವಾ ಲಂಕಾರ ಭೂಷಿತೆಯಾಗಿ ಸಿಂಗರಿಸಿ, ಅತ್ತಿಗೆಗೆ, ನಾದಿನಿಗೆ, ಮಗಳಿಗೆ, ಸ್ನೇಹಿತೆಗೆ ಬಾಗಿನ ಕೊಡುವ ಸಂಪ್ರದಾಯ. ಈ ಬಾಗಿನವನ್ನಂತೂ ಎರಡು ಕಣ್ಣಿಂದ ನೋಡಿ ಮನ ತುಂಬಿ ಕೊಳ್ಳಬೇಕು. ಇದರೊಳಗಿನ ಪುಟ್ಟ ಕನ್ನಡಿ, ಪುಟ್ಟ ಕಾಡಿಗೆ ಡಬ್ಬ, ಸಣ್ಣ ಹಣಿಗೆ, ವಾಲೆ ದೌಡು, ಬಳೆ ಅರಿಷಿಣ ಕುಂಕುಮ -ಹೀಗೆ ಹದಿನಾರು ಬಗೆಯ ಮಂಗಲ ದ್ರವ್ಯಗಳಿಂದ ಕೂಡಿದ ಮೊರದ ಬಾಗಿನವಿದು. ಕೆಲವರು ವರ್ಷಕ್ಕೆ ಮೂರು ಬಾಗಿನ ಕೊಟ್ಟರೆ ಹೊಸದಾಗಿ ಮದುವೆಯಾದ ಮಗಳಿದ್ದರೆ 16 ಬಾಗಿನ ಕೊಡಲು ಹಚ್ಚುತ್ತಾರೆ. ಅಂದಿನಿಂದ ಅವಳು ಹದಿ ನಾರು ವರ್ಷ ಗೌರಿ ಪೂಜೆ ಮಾಡಲು ಅಣಿಯಾದಂತೆ.

ಬಾಗಿನ ಕೊಟ್ಟು ಬಾಗಿನ ಪಡೆದ ಗೌರಿಯರಿಂದ ಆಶೀ ರ್ವಾದ ಪಡೆಯುವುದು, ಈ ಬಾಗಿನ ತಯಾರಿಸು ವು ದಂತೂ ಬಿಡುವಿಲ್ಲದ ಕೆಲಸದ ನಡುವೆ ತುಂಬ ಖುಷಿ ಕೊಡುವ ಕೆಲಸ. ಇನ್ನೊಬ್ಬರಿಗೆ ಏನೋ ಎತ್ತಿಕೊಡುವಾಗ ಇರುವ ಸಂತೃಪ್ತಿ ಈ ಬಾಗಿನದ ತುಂಬ ತುಂಬಿ ತುಳುಕುತ್ತಿರುತ್ತದೆ.

Advertisement

ಗೌರಿಯ ಪಕ್ಕದಲ್ಲಿ ಸ್ಥಾಪಿತಳಾಗುವ ಯಮುನಾ ಕೂಡ ಗೌರಿಯಷ್ಟೇ ಮುಖ್ಯಳು. ಯಮುನೆಗೂ ಒಂದು ಕಳಶ ಸಿದ್ಧ ಮಾಡಬೇಕು. ಆಕೆಗೆ ಏಳು ಗೆಜ್ಜೆ ವಸ್ತ್ರ, ವಿವಿಧ ಹೂವುಗಳ ಅಲಂಕಾರ. ಇವರಿಬ್ಬರ ಪೂಜೆಗೂ ಮುನ್ನ ಪೂಜೆಗೊಳ್ಳುವ ವಿಘ್ನೇಶ್ವರ ಪುಟ್ಟ ಅಡಿಕೆ ಬೆಟ್ಟದ ರೂಪದಲ್ಲಿ ಅಲ್ಲೇ ಗೌರಿ, ಯಮುನೆಯರ ನಡುವೆ ಸ್ಥಾಪಿತನಾಗುತ್ತಾನೆ. ಪೂಜೆ, ನೈವೇದ್ಯ, ಬಾಗಿನ, ಹದಿನಾರೆಳೆಯ ಧೋರ ಬಂಧನವನ್ನು ಹದಿನಾರು ದಿನ ಕೊರಳಲ್ಲಿ ಧರಿಸಿ ಅನಂತರ ಹಾಲಿನಲ್ಲಿ ನೆನೆಸಿ ಗಿಡದ ಕೆಳಗೆ ಹಾಕುವ ಸಂಪ್ರದಾಯ. ಸ್ವರ್ಣ ಗೌರಿ ಮಗ ಬಂದ ಮಾರನೇ ದಿನ ಹೋಗುತ್ತಾಳೆ. ಅಂದರೆ ಒಟ್ಟು ಮೂರು ದಿನ ಇರುತ್ತಾಳೆ.

ಎಲ್ಲರ ಮನೆಗೂ ಸ್ವರ್ಣಗೌರಿಯೇ ಬರುತ್ತಾಳೆ ಎಂಬ ನಿಯಮವಿಲ್ಲ. ಕೆಲವರ ಮನೆಗೆ ಹರಿತಾಲಿಕಾ ಕೂಡ ಬರು ತ್ತಾಳೆ. ಹರಿತಾಲಿಕಾ ಮದುವೆಗೆ ಮುಂಚಿನ ಗೌರಿಯ ರೂಪ. ಇವಳು ಉತ್ತರ ಭಾರತದಿಂದ ಬಂದವಳೆಂಬ ಪ್ರತೀತಿ ಇದೆ. ಈಕೆ ತುಂಬು ಯೌವನದ ಗೌರಿ. ಸಾಮಾನ್ಯವಾಗಿ ಈ ಗೌರಿಯನ್ನು ಮದುವೆಯಾಗದ ಕನ್ಯೆಯರು ಉತ್ತಮ ವರನಿಗಾಗಿ ಬೇಡಿ ಪೂಜಿಸುತ್ತಾರೆಂಬ ನಂಬಿಕೆ ಇದೆ.

ದಾಕ್ಷಾಯಿಣಿಯನ್ನು ಕಳೆದುಕೊಂದ ರುದ್ರ, ವೀರ ಭದ್ರನಾಗಿ ಅಬ್ಬರಿಸಿ ಅವಳನ್ನು ಕಳೆದುಕೊಂಡ ನೋವಿನಲ್ಲಿ ಕೈಲಾಸ ಪರ್ವತ ಸೇರಿದನೆಂಬ ಪೌರಾಣಿಕ ಕಥೆಯ ಭಾಗ ದಲ್ಲಿ ದಾಕ್ಷಾಯಿಣಿಯು ಗಿರಿಜೆಯಾಗಿ ಮರುಜನ್ಮವೆತ್ತಿ ಗಿರಿ ಪರ್ವತಗಳಲ್ಲಿ ಸಖೀಯರೊಂದಿಗೆ ವಿಹರಿಸುವ ಕೌಮಾ ರ್ಯದ ಹಂತದಲ್ಲೇ ಗಿರಿಜೆಯನ್ನು ಶಿವನಿಗೆ ಮದುವೆ ಮಾಡುವಂತೆ ನಾರದ ಮುನಿಗಳು ಗಿರಿರಾಜನಿಗೆ ಹೇಳು ತ್ತಾರೆ. ಆ ಕುಮಾರಿ ಗಿರಿಜೆಯೇ ಈ ಹರಿತಾಲಿಕಾ ಎಂದು ಪೂಜಿಸುವವರ ನಂಬಿಕೆ. ಈ ಪೂಜೆಗೆ ಕಾಡು ಮೇಡಿನ ಹೂ ಬಿಲ್ವ ಪತ್ರೆ. ಉಪವಾಸವಿದ್ದು ಪೂಜೆಗೈದು ಹಣ್ಣು, ಕಾಯಿ, ಎಲೆ, ಅಡಿಕೆ ನೈವೇದ್ಯ ಅರ್ಪಿಸುವು ದುಂಟು. ಉಳಿದಂತೆ ಸ್ವರ್ಣಗೌರಿಗೆ ಮಾಡುವಂತೆ ಅಲಂಕಾರ, ಆರತಿ, ಹದಿನಾರೆಳೆ ದಾರ, ಭಕ್ತಿ ಎಲ್ಲ ಸಮರ್ಪಣೆ. ಈ ಗೌರಿ ಚತುರ್ಥಿಯ ದಿನ ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆಯೇ ಮತ್ತೂಂದು ಪೂಜೆ ಮಾಡಿಸಿಕೊಂಡು ಹೊಳೆಗೆ ಹೋಗುತ್ತಾಳೆ. ಆಗಲೂ ನೈವೇದ್ಯಕ್ಕೆ ಅಡುಗೆ ಇಲ್ಲ.

ಆದರೆ ಸ್ವರ್ಣ ಗೌರಿಯ ನೈವೇದ್ಯಕ್ಕೆ ವಿಧ ವಿಧದ ಖಾದ್ಯಗಳನ್ನು ಮಾಡಿ ನೈವೇದ್ಯ ಮಾಡುವ ರೂಢಿ. ಈ ಗೌರಮ್ಮಳಿಗೆ ಉಪವಾಸ ಮಾಡಬೇಕೆಂದಿಲ್ಲ.

ಗೌರಿ ಪೂಜೆ ದಿನ ಹದಿನಾರು ಆಟಿಕೆ (ಸಣ್ಣ ಸಣ್ಣ ತಂಬಿ ಟ್ಟಿನ ಉಂಡೆ) ಮೇಲೆ ತುಪ್ಪದಾರತಿ ಇಟ್ಟು ಬೆಳಗಿದರೆ ಒಂದೊಮ್ಮೆ ಮನದ ಕತ್ತಲೆ ಕೂಡ ಅಳೆದು ಹೋಗಬೇಕು- ಅಷ್ಟು ಚೆಂದನೆಯ ಆರತಿಯ ಬೆಳಕು ಪ್ರಜ್ವಲಿಸುವುದು.
ಹಾಗೆ ನೋಡಿದರೆ ಗೌರಿ ಹಬ್ಬ ಒಂದೊಂದು ಪ್ರದೇಶ   ದಲ್ಲಿ ಒಂದೊಂದು ರೀತಿ ನಡೆದುಕೊಂಡು ಬಂದಿದೆ. ಎಲ್ಲ ಕ್ಕಿಂತ ವಿಶೇಷ ಸಂಗತಿಯೆಂದರೆ ಗೌರಿ ಹಬ್ಬಕ್ಕೆ ಅಂಥ ಕಟ್ಟು  ನಿಟ್ಟುಗಳಿಲ್ಲ. ಈಕೆ ಶಕ್ತಿ ದೇವಿ ಪಾರ್ವತಿ ಅಲ್ಲ, ರೌದ್ರ ಅವತಾರದ ದುರ್ಗಿಯಂತೆಯೂ ಅಲ್ಲ, ಸುಂದರ ಸೌಮ್ಯ ಗೌರಿ.

ಸ್ನೇಹಮಯಿ ದೇವಿ ತವರಿಗೆ ಬಾಗಿನ ಒಯ್ಯಲು ಪರಶಿವನಿಂದ ಅಪ್ಪಣೆ ಪಡೆದು ಬಂದ ಮನೆಮಗಳು. ಅಪ್ಪನ ಮನೆಯಲ್ಲಿನ ಅನುಕೂಲಗಳಿಗೆ ಹೊಂದಿಕೊಂಡು ಹೋಗುತ್ತಾಳೆ.

ಮೂಲತಃ ಕೃಷಿ ದೇಶವಾದ ಭಾರತ ಮುಂಗಾರಿನ ಮಳೆಯ ಅಬ್ಬರಕ್ಕೆ ಹೊಲ ಗದ್ದೆಗಳಲ್ಲಿ ಕಾಲಿಡಲಾಗದೆ, ಮನೆಯಲ್ಲಿರುವಾಗ, ಸಣ್ಣಗೆ ಶ್ರಾವಣದ ಗಾಳಿ ಬೀಸಿ ಒಂದೊಂದೇ ಹಬ್ಬದ ನೆಪ ಒಡ್ಡಿ ಬಂಧುಬಳಗ ಸ್ನೇಹಿತ ವೃಂದ ಸೇರಿ ಬಗೆಬಗೆಯ ಅಡುಗೆ ಮಾಡಿ ವಿವಿಧ ಹಬ್ಬಗಳ ಹೆಸರಿಟ್ಟು ಆರೋಗ್ಯಕರ ಊಟ ಮಾಡಿ ದೈಹಿಕ ಆರೋಗ್ಯ ವೃದ್ಧಿಸಿಕೊಂಡು, ಅದರ ಜತೆ ಅರಿಷಿಣ, ಕುಂಕುಮ, ಬಾಗಿನದ ಹೆಸರಲ್ಲಿ ಒಬ್ಬರ ಮನೆಗೆ ಮತ್ತೂಬ್ಬರು ಬಂದು ಆತಿಥ್ಯ ಸ್ವೀಕರಿಸಿ ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಹಬ್ಬಗಳಿಗೆ ಪ್ರತೀ ಮನೆಯೂ ತನ್ನದೇ ಆದ ಪದ್ಧತಿ ರೂಢಿಸಿಕೊಂಡು ಬಂದಿರುವುದು ಸೌಖ್ಯವಲ್ಲವೇ!

ಉದ್ದೇಶ, ಕಾರಣ ಏನೇ ಇದ್ದರೂ ಸಂತಸ ಸಂತೃಪ್ತಿಯಿಂದ ಇರಲು ಹಿರಿಯರು ಬರಮಾಡಿಕೊಂಡ ಗೌರಿ-ಗಣೇಶ ಮನೆಯ ಹೆಣ್ಣುಮಕ್ಕಳ ಹರುಷಕ್ಕೆ, ಚೈತನ್ಯಕ್ಕೆ ಮೂಲವಾಗುವುದು ಚೆಂದವಲ್ಲವೇ?
ಮನೆಗೆ ಬರುವ ಗೌರಿ ಪ್ರೀತಿ, ಸೌಜನ್ಯ, ವಾತ್ಸಲ್ಯ, ಕರುಣೆ, ದಯೆ, ಧರ್ಮ ಹೊತ್ತು ತರಲಿ.

-ದೀಪಾ ಗೋನಾಳ

Advertisement

Udayavani is now on Telegram. Click here to join our channel and stay updated with the latest news.

Next