ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯಿಂದ ಜೆಡಿಎಸ್ ಗೆ ಮಾತ್ರ ಲಾಭವಾಗಲಿದೆ. ಮೈತ್ರಿ ಧರ್ಮವೆಂದರೆ ಇಬ್ಬರೂ ಪಾಲನೆ ಮಾಡಬೇಕು. ಆದರೆ, ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಗೊಳಿಸಲು ಜೆಡಿಎಸ್ ವ್ಯವಸ್ಥಿತ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಎ. ಮಂಜು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಹಾಗೂ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಕೇವಲ ಜೆಡಿಎಸ್ ಕುಟುಂಬಕ್ಕೆ ಮಾತ್ರ ಲಾಭವಾಗಲಿದೆ. ಜೆಡಿಎಸ್ ಕಾರ್ಯಕರ್ತರಿಗೂ ಇದರಿಂದ ಲಾಭವಿಲ್ಲ. ಮೊಮ್ಮ ಕ್ಕಳನ್ನು ದಡ ಸೇರಿಸಲು ದೇವೇಗೌಡರು ಈ ಪ್ರಯತ್ನ ಮಾಡು ತ್ತಿದ್ದಾರೆ ಎಂದು ಟೀಕಿಸಿದರು.
ತುಮಕೂರು, ಮೈಸೂರು ಕ್ಷೇತ್ರಗಳನ್ನು ಬಿಟ್ಟು ಕೊಡಿ ಎಂದು ಕೇಳುವುದು ಮೈತ್ರಿ ಧರ್ಮವಲ್ಲ. ನಾವು ಜೆಡಿಎಸ್ ಜೊತೆಗೆ ಫ್ರೆಂಡ್ಲಿ ಫೈಟ್ ಅಲ್ಲ, ನೇರವಾಗಿಯೇ ಪೈಪೋಟಿ ನಡೆಸಲು ಕೇಳುತ್ತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕು ಎಂಬ ಭಾವನೆ ಇಲ್ಲ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡಬೇಕು. ಜನರ ವಿರುದ್ದ ಯಾರೂ ನಡೆಯಲು ಸಾಧ್ಯವಿಲ್ಲ. ನಮಗೂ ಚುನಾವಣೆ ರಾಜಕೀಯ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ. ದೇವೇಗೌಡರು 1991ರಲ್ಲಿ ಚುನಾವಣೆ ಯಲ್ಲಿ ಸೋತಾಗ ರಾಜಕೀಯ ವಾಗಿ ಪುನರ್ಜನ್ಮ ಪಡೆಯಲು ನಾವೂ ಸಾಕಷ್ಟು ಕೆಲಸ ಮಾಡಿದ್ದೆವು. ನಾವು ಆಗ ಸಹಾಯ ಮಾಡಿದ್ದನ್ನು ದೇವೇಗೌಡರು ಸ್ಮರಿಸಿ,ನಮಗೆ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಬೇಕು. ಅವರ ಮೊಮ್ಮಕ್ಕಳಿಗೆ ಇನ್ನೂ ವಯಸ್ಸಿದೆ. ಮುಂದೆ ಗೆಲ್ಲಿಸಿಕೊಳ್ಳಬಹುದು ಎಂದು ದೇವೇಗೌಡರಿಗೆ ಮನವಿ ಮಾಡಿದರು.
ರಾಮಕೃಷ್ಣ ಹೆಗಡೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ದೇವೇಗೌಡರು ರಾಚಯ್ಯರನ್ನು ಎತ್ತಿ ಕಟ್ಟಿದ್ದರು. ದಲಿತರ ಮತಗಳನ್ನು ಹಂಚಿಕೊಂಡರೆ ನಮಗೇ ಲಾಭ ಎಂದು ಲೆಕ್ಕ ಹಾಕಿದ್ದರು. ಉಪ ಚುನಾವಣೆಯಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಹೇಳುತ್ತಾರೆ. ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಾರೆ. ಈಗ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಲು ಒಳ್ಳೆಯ ಸಮಯ. ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಆಗ್ರಹಿಸಿದರು. ಎಲ್ಲವನ್ನೂ ಹೇಳಿ, ರಾಜಕೀಯವಾಗಿ ಅರಗಿಸಿಕೊಳ್ಳುವುದು ದೇವೇಗೌಡರಿಗೆ ಮಾತ್ರ ಗೊತ್ತು ಎಂದು ಹೇಳಿದರು.
ಕುಮಾರಸ್ವಾಮಿದು ಬರೇ ನಾಟಕ
ದಿ. ಅಂಬರೀಶ್ ಅವರಿಂದ ಜೆಡಿಎಸ್ ಕುಟುಂಬಕ್ಕೆ ಹೆಚ್ಚಿನ ಲಾಭವಾಗಿದೆ. ಅಂಬರೀಶ್ ಅವರಿಂದ ಲಾಭ ಪಡೆದುಕೊಂಡು ಈಗ ಅವರ ಪತ್ನಿಗೆ ಬೈಯ್ಯುವುದು ಸರಿಯಲ್ಲ. ಸುಮಲತಾ ಬಗ್ಗೆ ಮಾತನಾಡಿರುವುದಕ್ಕೆ ಎಲ್ಲರೂ ಕ್ಷಮೆ ಕೇಳುತ್ತಿದ್ದಾರೆ. ಆದರೆ, ಬೈದವರು ಮಾತ್ರ ಕ್ಷಮೆ ಕೇಳುತ್ತಿಲ್ಲ. ಸಿದ್ದರಾಜು ಪತ್ನಿ ಹಾಗೂ ಜಯರಾಂ ಪತ್ನಿಗೆ ಜೆಡಿಎಸ್‌ನವರೇ ಟಿಕೆಟ್ ನೀಡಿದ್ದರು. ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಿದ್ದು ಕೇವಲ ನಾಟಕ. ಸಾವಿನಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಎ.ಮಂಜು ಆರೋಪಿಸಿದರು.