ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಜೆಡಿಎಸ್‌ಗೆ ದೊರೆಯುವ ಒಂದು ವಿಧಾನಪರಿಷತ್ ಸ್ಥಾನವನ್ನು ಬಿಟ್ಟುಕೊಡುವಂತೆ ಮನವಿ ಮಾಡಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ವರಿಷ್ಠ ದೇವೇಗೌಡರು ಸ್ಥಾನ ಬಿಟ್ಟುಕೊಡಲು ನಿರಾಕರಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಚ್.ಡಿ.ದೇವೇಗೌಡರಿಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದ್ದರಿಂದ ಅದಕ್ಕೆ ಪರ್ಯಾಯವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ಗೆ ದೊರೆಯುವ ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ರಾಜ್ಯ ಕಾಂಗ್ರೆಸ್ ನಾಯಕರು ದೇವೇಗೌಡರಿಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಆದರೆ, ದೇವೇಗೌಡರು, ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮನವರಿಕೆ ಮಾಡಿದ್ದು, ಯಾವುದೇ ಸ್ಥಾನ ಬಿಟ್ಟುಕೊಡುವ ಪ್ರಸ್ತಾಪಇಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಪಡಿಸಿದ್ದಾರೆಂದು ತಿಳಿದು ಬಂದಿದೆ.
ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಜೆಡಿಎಸ್ ನಿಂದ ಬರುವ ಒಂದು ಸ್ಥಾನ ದೊರೆಯದಿರುವುದರಿಂದ ಒಕ್ಕಲಿಗ ಅಥವಾ ಲಿಂಗಾಯತ ಸಮುದಾಯದವರಿಗೆ ಯಾರಿಗಾದರೂ ಅವಕಾಶ ದೊರಕಿಸಿಕೊಡಬೇಕೆಂಬ ಲೆಕ್ಕಾಚಾರ ತಲೆಕೆಳಗಾಗಿದೆ ಎಂಬ ಮಾತು ಕೇಳಿ ಬರು ತ್ತಿವೆ. ರಾಜ್ಯ ಕಾಂಗ್ರೆಸ್ ನಾಯಕರು ಮಹಿಳಾ ಟಿಕೆಟ್ ಆಕಾಂಕ್ಷಿ ಗಳಿಗೂ ಅದೇ ಭರವಸೆ ನೀಡಿದ್ದರು ಎನ್ನಲಾ ಗಿದ್ದು, ಈಗ ದೇವೇಗೌಡರು 1 ಸ್ಥಾನ ಬಿಟ್ಟುಕೊಡಲು ನಿರಾಕರಿಸಿದ್ದರಿಂದ ಈ ಬಾರಿ ಮಹಿಳೆಯರಿಗೆ ಅವಕಾಶ ದೊರೆಯುವುದು ಅನುಮಾನ ಎನ್ನಲಾಗಿದೆ.
ಇಂದು ಹೈಕಮಾಂಡ್‌ಗೆ ಪಟ್ಟಿ: ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಹಿರಿಯ ನಾಯಕರು ಸೋಮವಾರ ಸಂಜೆ ಮಾತುಕತೆ ನಡೆಸಿದ್ದು, ಮಂಗಳವಾರ ಹೈಕಮಾಂಡ್‌ಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರವಾನೆ ಮಾಡುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣು ಗೋಪಾಲ್ ದೂರವಾಣಿ ಮೂಲಕ ಕೆಪಿಸಿಸಿ ಅಧ್ಯಕ್ಷರನ್ನು ಸಂಪರ್ಕಿಸಿ ಆದಷ್ಟು ಬೇಗ ಪಟ್ಟಿ ರವಾನಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಹೀಗಾಗಿ ರಾಜ್ಯ ನಾಯಕರು ಸೋಮವಾರ ತಡ ರಾತ್ರಿಯೇ ದೂರವಾಣಿ ಮುಖಾಂತರ ಆಕಾಂಕ್ಷಿಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಮಂಗಳವಾರ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಹೈಕಮಾಂಡ್‌ಗೆ ರವಾನಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಪ ಸಂಖ್ಯಾತರು, ಹಿಂದುಳಿದ ವರ್ದವರಿಗೆ ಆದ್ಯತೆ ನೀಡಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಲ್ಪ ಸಂಖ್ಯಾತರಲ್ಲಿ ಹಾಲಿ ಸದಸ್ಯ ನಜೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಪ್ರಧಾನ ಕಾರ್ದರ್ಶಿಗಳಾದ ಷಫೀವುಲ್ಲಾ, ಶಾಕೀರ್ ಸನದಿ ಹೆಸರು ಪ್ರಸ್ತಾಪವಾಗಿವೆ ಎನ್ನಲಾಗಿದೆ.
ಅಲ್ಪ ಸಂಖ್ಯಾತರಲ್ಲಿಯೇ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವ ನಿವೇದಿತ್ ಆಳ್ವಾ ಹೆಸರೂ ಅಂತಿಮ ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಹಿಂದುಳಿದ ವರ್ಗಕ್ಕೆ ಸೇರಿದವರಲ್ಲಿ ಪ್ರಮುಖವಾಗಿ ಮಾಜಿ ಸಚಿವರಾದ ಎಚ್. ಎಂ.ರೇವಣ್ಣ, ಎಂ.ಆರ್.ಸೀತಾರಾಮ್, ಹಾಲಿ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್ ಹೆಸರೂ ಅಂತಿಮ ಪಟ್ಟಿಯಲ್ಲಿ ಸೇರಿಸುವ ಸಾಧ್ಯತೆ ಇದೆ.
ಇವರ ಹೊರತಾಗಿ ಮಾಜಿ ಸಂಸದ ಮುದ್ದಹನುಮೇಗೌಡ, ರಾಜೀವ್‌ಗೌಡ, ರಾಣಿ ಸತೀಶ್ ಅವರೂ ಆಕಾಂಕ್ಷಿಗಳಾಗಿದ್ದು, ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಸೇರಿಸಿದರೂ ಆಶ್ಚರ್ಯವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಮೊದಲು ರಮೇಶ್ ಕುಮಾರ್, ಜಮೀರ್ ಅಹಮದ್ ಸೇರಿ ಕೆಲವು ನಾಯಕರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಭೆ ಸೇರಿ ತಮ್ಮ ಅಭ್ಯರ್ಥಿಗೆ ಅವಕಾಶ ಕಲ್ಪಿಸಬೇಕೆಂದು ಕೊನೆ ಹಂತದ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ.