Advertisement

ಬಿಎಸ್‌ವೈ ಒಳ್ಳೆಯ ಕೆಲಸಕ್ಕೆ ಗೌಡರ ಹೊಗಳಿಕೆ

11:16 PM Nov 06, 2019 | Lakshmi GovindaRaju |

ಬಾಗಲಕೋಟೆ: ಶತಮಾನದಲ್ಲೇ ಕಂಡರಿಯದ ಭೀಕರ ಪ್ರವಾಹ ನಿಭಾಯಿಸುವಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಸಿಎಂ ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿರುವುದನ್ನು ಕಂಡು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲ ಕೊಡುತ್ತೇವೆ ಎಂದು ಬೆನ್ನು ತಟ್ಟಿ ಹೇಳಿದರೆ ನಾವು ಸ್ವಾಗತ ಮಾಡುತ್ತೇವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

Advertisement

ಕಮತಗಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ದೇವೇಗೌಡರು ಈ ರಾಜ್ಯದ ಹಿರಿಯ ರಾಜಕಾರಣಿ. ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿ, ಕುಮಾರಸ್ವಾಮಿ ಕೂಡ ಎರಡು ಬಾರಿ ಸಿಎಂ ಆಗಿದ್ದವರು. ಉತ್ತಮ ಕೆಲಸ ಮಾಡುತ್ತಿರುವ ಯಡಿಯೂರಪ್ಪ ಅವರಿಗೆ ಬೆನ್ನು ತಟ್ಟಿ ಮುನ್ನಡೆಯಿರಿ ಎಂದು ಹೇಳಿರುವುದರಲ್ಲಿ ತಪ್ಪೇನಿಲ್ಲ. ಸಿಎಂ ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿರುವುದನ್ನು ಅವರು ಶ್ಲಾಘನೆ ಮಾಡಿದ್ದಾರೆ ಎಂದರು.

ಜೆಡಿಎಸ್‌ ಬೆಂಬಲಕ್ಕೆ ಸ್ವಾಗತ: ಸಿ.ಪಿ.ಯೋಗೇಶ್ವರ್‌
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದರೆ ಸ್ವಾಗತ. ಆದರೆ, ಅವರು ತಮ್ಮ ಮಾತಿಗೆ ಎಲ್ಲಿಯವರೆಗೆ ಬದ್ಧರಾಗಿರುತ್ತಾರೋ ನೋಡೋಣ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಹೇಳಿದ್ದಾರೆ. ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ, ಜೆಡಿಎಸ್‌ನಿಂದ ಬೆಂಬಲ ಕೇಳಿಲ್ಲ. ಆದರೆ, ಅವರಾಗಿಯೇ ಬೆಂಬಲಿಸುವುದಾಗಿ ಹೇಳಿದ್ದಾರೆ. ಇದರ ಹಿಂದೆ ಯಾವ ಲೆಕ್ಕಾಚಾರ ಇದೆಯೋ ಗೊತ್ತಿಲ್ಲ. ಅವರ ಈ ಮಾತು ಎಲ್ಲಿಯ ವರೆಗೆ ಮುಂದುವರಿಯುತ್ತದೆಯೋ ನೋಡಬೇಕು ಎಂದರು.

ಹುಣಸೂರಲ್ಲಿ ಸ್ಪರ್ಧೆಗೆ ಸಿದ್ಧ: ಇದೇ ವೇಳೆ, ತಾವು ಹುಣಸೂರಿನಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದವಿರುವುದಾಗಿ ಅವರು ತಿಳಿಸಿದರು. ಚುನಾವಣೆಗೆ ಸ್ಪರ್ಧಿಸಲು ಚನ್ನ ಪಟ್ಟಣವಾದರೇನು?, ಹುಣಸೂರಾದರೇನು? ಸ್ಪರ್ಧಿ ಸಲು ನಾನು ಸಿದ್ಧನಿದ್ದೇನೆ. ಸೋಲು, ಗೆಲುವು ಆ ಮೇಲಿನ ಮಾತು. ಎಚ್‌.ವಿಶ್ವನಾಥ್‌ ಅವರೇ ಹುಣಸೂರಿನಲ್ಲಿ ಸ್ಪರ್ಧಿಸಲು ಕರೆದುಕೊಂಡು ಹೋಗಬೇಕು. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟಿಸಿರುವ ಬಗ್ಗೆ ಮಾಹಿತಿ ಇಲ್ಲ. ಅವರೇ ಪಕ್ಷದಿಂದ ಹೊರ ಹೋಗುವುದಾಗಿ ಹೇಳಿದ್ದರು ಎಂದು ಅವರು ಹೇಳಿದರು.

ಬಾಹ್ಯ ಬೆಂಬಲ ಬೇಡ ಎನ್ನಲ್ಲ
ದಾವಣಗೆರೆ: ಬಿಜೆಪಿಗೆ ಬಹುಮತ ಇದೆ. ಆದರೂ, ಜೆಡಿಎಸ್‌ ಬಾಹ್ಯ ಬೆಂಬಲ ನೀಡಿದರೆ ಬೇಡ ಎನ್ನಲಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಬುಧವಾರ ಹೊನ್ನಾಳಿ ತಾಲೂಕಿನ ಸರಟೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗೆ ಸಂಪೂರ್ಣ ಬಹುಮತ ಇದೆ. ಅದೇ ರೀತಿ ಶಾಸಕರ ಬೆಂಬಲವೂ ಇದೆ. ಕೇಂದ್ರದಲ್ಲಿ ಬಿಜೆಪಿಗೆ ಬಹುಮತವಿದ್ದರೂ ಅನೇಕ ಪಕ್ಷಗಳು ಬೆಂಬಲ ನೀಡಿವೆ. ಹಾಗೆಯೇ ಇಲ್ಲಿಯೂ ಬೆಂಬಲ ನೀಡಿದರೆ ಬೇಡ ಎನ್ನಲಾಗದು ಎಂದರು.

Advertisement

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂಬುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ಹೀಗಾಗಿ, ಬೆಂಬಲದ ಮಾತು ಬಂದರೆ ಬೇಡ ಎನ್ನಲಾಗದು. ಕಾಂಗ್ರೆಸ್‌-ಜೆಡಿಎಸ್‌ ಮಿತ್ರತ್ವ ಉಳಿಯಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅದರ ಫಲ ಅನುಭವಿಸಿದರು. ಪೂರ್ಣ ಬಹುಮತ ಬರದಿದ್ದರೂ ಬಿಜೆಪಿಯೇ ಆಡಳಿತ ನಡೆಸಬೇಕು ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಚುನಾವಣೆ ಬರುತ್ತದೆ ಎಂಬುದಾಗಿ ಕಾಯುತ್ತಿದ್ದಾರೆ. ಚುನಾವಣೆ ನಡೆದರೆ ಸದೃಢವಾಗಿರುವ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ ಎಂದರು.

ಉಪ್ಪು-ಹುಳಿ- ಖಾರ ಹಾಕಬೇಡಿ
ಬಾಗಲಕೋಟೆ: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ಯಡಿಯೂರಪ್ಪ ಅನುಭವಿ ರಾಜಕಾರಣಿ. ದೂರದೃಷ್ಟಿಯ ಚಿಂತಕ. ವಿರೋಧಿಗಳನ್ನೂ ಸ್ವೀಕಾರ ಮಾಡುವ ದೊಡ್ಡತನ ಬೆಳೆಸಿಕೊಂಡಿದ್ದಾರೆ. ಹೀಗಾಗಿಯೇ ದೇವೇಗೌಡರು, ಯಡಿಯೂರಪ್ಪ ಕುರಿತು ಮೃದು ಧೋರಣೆಯಿಂದ ಮಾತನಾಡಿದ್ದಾರೆ. ಇದಕ್ಕೆ ಉಪ್ಪು-ಹುಳಿ-ಖಾರ ಹಾಕುವುದು ಬೇಡ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಕಮತಗಿಯಲ್ಲಿ ಪ್ರವಾಹ ಪೀಡಿದ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪ ನಿಭಾಯಿಸುವ ಶಕ್ತಿ ಯಡಿಯೂರಪ್ಪ ಅವರಿಗೆ ಮಾತ್ರವಿದೆ. ನಾನು, ಗೋವಿಂದ ಕಾರಜೊಳ, ಸಿದ್ದರಾಮಯ್ಯ ಒಟ್ಟಿಗೆ ಸಚಿವರಾಗಿದ್ದೆವು. ಅಂದಿನ ಸಿದ್ದರಾಮಯ್ಯ ಈಗ ಕಳೆದು ಹೋಗಿದ್ದಾರೆ. ಅವರ ಕ್ಷೇತ್ರ ಬಾದಾಮಿಗೆ ಹೋಗದೇ ಇರಲು ಬೇರೆ ಕಾರಣಗಳಿಲ್ಲ. ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಸಿದ್ದರಾಮಯ್ಯ ನನಗೆ ಹೊಸಬರೇನಲ್ಲ. ಮೊನ್ನೆ ವರುಣಾ ಕ್ಷೇತ್ರಕ್ಕೆ ಹೋಗಿದ್ದೆ. ಮತ್ತೆ ಹೋಗುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next