ನವದೆಹಲಿ: ಭಾರತದ ಹಲವು ರಾಜ್ಯಗಳಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು ಹೆಚ್ಚಳವಾಗತೊಡಗಿದ್ದು, ಕಳೆದ 24 ಗಂಟೆಯಲ್ಲಿ 2,541 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಅಲ್ಲದೇ ಕೋವಿಡ್ ಪಾಸಿಟಿವಿಟಿ ದರ, ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗತೊಡಗಿದ್ದು, ಇದು ನಾಲ್ಕನೇ ಅಲೆಯ ಮುನ್ಸೂಚನೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ (ಏಪ್ರಿಲ್ 25) ತಿಳಿಸಿದೆ.
ಇದನ್ನೂ ಓದಿ:ಸಮುದ್ರದಿಂದ ಹೈಡ್ರೋಜನ್ ವಿದ್ಯುತ್ ಉತ್ಪಾದನೆಗೆ ಎನ್‌ಐಟಿಕೆ ಮುಂದು
ದೇಶಾದ್ಯಂತ ಕೋವಿಡ್ 19 ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 4,30,57,545ಕ್ಕೆ ಹೆಚ್ಚಳವಾಗಿದೆ. ಭಾರತದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 15,873ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯದ ಅಂಕಿಅಂಶ ವಿವರಿಸಿದೆ.
ಕಳೆದ 24ಗಂಟೆಯಲ್ಲಿ ಕೋವಿಡ್ 19 ಸೋಂಕಿನಿಂದ 44 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,22,193ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ದೆಹಲಿಯಲ್ಲಿ ಭಾನುವಾರ 1,083 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.4.48ರಷ್ಟಿತ್ತು. ಇದೇ ರೀತಿ ಕೇರಳ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ತಮಿಳುನಾಡು, ರಾಜಸ್ಥಾನ್, ಪಂಜಾಬ್ ಮತ್ತು ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿದೆ ಎಂದು ಸಚಿವಾಲಯ ತಿಳಿಸಿದೆ.