Advertisement

ಗೋ ದೌರ್ಜನ್ಯ ಹೆಚ್ಚಿರುವುದು ಬಿಜೆಪಿಯೇತರ ರಾಜ್ಯಗಳಲ್ಲಿ!

08:10 AM Jul 20, 2017 | Team Udayavani |

ಹೊಸದಿಲ್ಲಿ: “ಗೋ ರಕ್ಷಣೆ, ಕೋಮು ಸಂಬಂಧಿ ಅಪರಾಧಗಳು ಹೆಚ್ಚು ನಡೆಯುತ್ತಿರುವುದು ಬಿಜೆಪಿಯೇತರ ಸರಕಾರವಿರುವ ರಾಜ್ಯಗಳಲ್ಲಿ,’ ಎಂದು ಗೃಹ ವ್ಯವಹಾರಗಳ ಸಹಾಯಕ ಸಚಿವ ಹಂಸರಾಜ್‌ ಗಂಗಾರಾಮ್‌ ಆಹಿರ್‌ ರಾಜ್ಯಸಭೆಗೆ ತಿಳಿಸಿದ್ದಾರೆ.

Advertisement

ಗೋ ರಕ್ಷಕರ ಹೆಸರಿನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳ ಹಿಂದೆ ಬಿಜೆಪಿ ಕೈವಾಡವಿದೆ ಎಂಬ ಸಮಾಜವಾದಿ ಪಕ್ಷದ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿ ದ ಸಚಿವರು, “ನ್ಯಾಷನಲ್‌ ಕ್ರೈಮ್‌ ರೆಕಾರ್ಡ್‌ ಬ್ಯೂರೊ’ (ಎನ್‌ಸಿಆರ್‌ಬಿ) ನೀಡಿದ ಮಾಹಿತಿಯನ್ನು ಉಲ್ಲೇಖೀಸಿ, ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ, 2014ರಲ್ಲಿ “ಕೇರಳ, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಹಾಗೂ 2015ರಲ್ಲಿ ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಗೋ ರಕ್ಷಣೆ ಅಥವಾ ಕೋಮು ಸಂಬಂಧಿ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆದಿರುವುದು ವರದಿಯಾಗಿದೆ. ಹಾಗೇ 2016ರಲ್ಲಿ ಇಂಥ ಅಪರಾಧಕೃತ್ಯಗಳು ಹೆಚ್ಚು ದಾಖಲಾಗಿರುವುದು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ. ಈ ಪೈಕಿ ಕೇವಲ ಎರಡು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆ ಪಿಯೇತರ ಸರಕಾರಗಳಿವೆ. ಹೀಗಾಗಿ “ಗೋ ದೌರ್ಜನ್ಯ’ ಹಾಗೂ ಕೋಮು ಸೌಹಾರ್ದ ಕದಡುವ ಕೃತ್ಯಗಳಲ್ಲಿ ಬಿಜೆಪಿ ಕೈವಾಡವಿದೆ ಎಂಬ ಆರೋಪ ಶುದ್ಧ ಸುಳ್ಳು,’ ಎಂದು ಸಚಿವ ಆಹಿರ್‌ ಹೇಳಿದರು.
ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು, ಗೋ ರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ತಡೆಗೆ ಸರಕಾರ ಏನೆಲ್ಲ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು. 
ವಿಪ‌ಕ್ಷಗಳ ಪ್ರಶ್ನೆಗೆ ಉತ್ತರಿಸಿದ ಗೃಹ ವ್ಯವಹಾರಗಳ ಸಹಾಯಕ ಸಚಿವ ಹಂಸರಾಜ್‌ ಗಂಗಾರಾಮ್‌ ಆಹಿರ್‌, “ಗೋ ರಕ್ಷಣೆ ನೆಪದಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸುವವರನ್ನು ಹಿಡಿದು ಶಿಕ್ಷಿಸುವ ಸಂಪೂರ್ಣ ಅಧಿಕಾರ ಆಯಾ ರಾಜ್ಯ ಸರಕಾರಗಳಿಗಿದ್ದು, ಗೋ ರಕ್ಷಣೆ ಹೆಸರಲ್ಲಿ ಕಾನೂನು ಬಾಹಿರ ಕೃತ್ಯಗಳು ನಡೆದಾಗ ತಕ್ಷಣ ಎಫ್ಐಆರ್‌ ದಾಖಲಿಸಿ, ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತಂತೆ ಕೇಂದ್ರ ಸರಕಾರ ಈಗಾಗಲೆ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ. ಹೀಗಿರುವಾಗ ಈ ಕುರಿತಾದ ಕಾನೂನುಗಳಿಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅನಿಸುತ್ತಿಲ್ಲ,’ ಎಂದು ಹೇಳಿದರು.

ಅನ್ಯ ಧರ್ಮದ ದೇವರ ಬಗ್ಗೆ ಮಾತಾಡುವ ಧೈರ್ಯವಿದೆಯೇ?
ಆಡಳಿತ ಪಕ್ಷದ ಮೇಲೆ ಹರಿಹಾಯುವ ಭರದಲ್ಲಿ ಸಮಾಜವಾದಿ ಪಕ್ಷದ ಸದಸ್ಯ ನರೇಶ್‌ ಅಗರ್ವಾಲ್‌, ಹಿಂದೂ ದೇವತೆಯರನ್ನು ಆಲ್ಕೋಹಾಲ್‌ ಬ್ರಾಂಡ್‌ಗಳಿಗೆ ಹೋಲಿಸಿ ನೀಡಿದ ಹೇಳಿಕೆ ರಾಜ್ಯ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿ, ನರೇಶ್‌  ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ರಾಜ್ಯಸಭೆ ಸದಸ್ಯರು ಒತ್ತಾಯಿಸಿದ ಘಟನೆ ಬುಧವಾರ ನಡೆಯಿತು. ಶ್ರೀರಾಮನನ್ನು  ಅವಮಾನಿಸಿ ಎಸ್‌ಪಿ ಸದಸ್ಯ ನೀಡಿದ ಹೇಳಿಕೆ ನೀಡಿದ್ದರು. ಇದಕ್ಕೆ ರಾಜ್ಯಸಭೆಯ ಬಹುತೇಕ ಸದಸ್ಯರರಿಂದ ವಿರೋಧ ವ್ಯಕ್ತವಾಯಿತು. ವಿತ್ತ ಸಚಿವ ಅರುಣ್‌ ಜೇಟಿÉ ಪ್ರತಿಕ್ರಿಯಿಸಿ, “ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ನರೇಶ್‌ಗೆ, ಅನ್ಯ ಧರ್ಮಗಳ ದೇವರ ಬಗ್ಗೆ ಹಾಗೆ ಮಾತನಾಡುವ ಧೈರ್ಯವಿದೆಯೇ,’ ಎಂದು ಪ್ರಶ್ನಿಸಿದರು. ನರೇಶ್‌  ಬಳಸಿದ ಪದಗಳನ್ನು ಕೂಡಲೆ ಕಡತಗಳಿಂದ ತೆಗೆಯುವುದಾಗಿ ರಾಜ್ಯಸಭೆ ಉಪಾಧ್ಯಕ್ಷ ಕುರಿಯನ್‌ ಅವರು ಹೇಳಿದರು. 

ರಾಜೀನಾಮೆ ಹಿಂಪಡೆಯಲಿ
“ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಬಗ್ಗೆ ನನಗೆ ಅತೀವ ಗೌರವವಿದ್ದು, ಅವರು ರಾಜ್ಯಸಭಾ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆ ಹಿಂಪಡೆಯಬೇಕು,’ ಎಂದು ರಾಜ್ಯಸಭೆ ಉಪಾಧ್ಯಕ್ಷ ಪಿ.ಜೆ.ಕುರಿಯನ್‌ ಕೋರಿದರು. “ತಪ್ಪು ಕಲ್ಪನೆಯಿಂದಾಗಿ ಈ ಬೆಳವಣಿಗೆ ನಡೆದಿದ್ದು, ಮಾಯಾವತಿ ಅವರು ನಿರ್ಧಾರದಿಂದ ಹಿಂದೆ ಸರಿಯಬೇಕು,’ ಎಂದರು. ತಾವು ದಲಿತ ಸಂಬಂಧಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುತ್ತಿಲ್ಲ ಎಂದು ಕುರಿಯನ್‌ ವಿರುದ್ಧ ಮುನಿಸಿಕೊಂಡು, ಮಾಯಾವತಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next