Advertisement
ಅಲಹಾಬಾದ್ ಹೈಕೋರ್ಟ್‌ನ 150ನೇ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ದೇಶದ ಇತ್ತೀಚಿನ ಪ್ರಗತಿಯಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿದ್ದು, ನ್ಯಾಯಾಂಗದಲ್ಲೂ ತಂತ್ರಜ್ಞಾನದ ಅಳವಡಿಕೆಗೆ ಸಾಕಷ್ಟು ಅವಕಾಶಗಳಿರುವುದನ್ನು ಮನಗಂಡಿದ್ದೇನೆ. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಪ್ರಕ್ರಿಯೆಗಳನ್ನು ಸರಳೀಕರಿಸಲು ನೆರವಾಗುವ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಸ್ಟಾರ್ಟಪ್ ಕ್ಷೇತ್ರದ ತಂತ್ರಜ್ಞರು ಶ್ರಮಿಸಬೇಕು,” ಎಂದು ಕೋರಿದರು.ಅನವಶ್ಯಕ ಕಾನೂನುಗಳ ‘ಜಂಜಾಲ’ವನ್ನು ತೆರವುಗೊಳಿಸುವುದಕ್ಕೆ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟ ಮೋದಿ, ‘ನ್ಯಾಯಾಂಗದ ಮೇಲಿನ ಎಲ್ಲ ರೀತಿಯ ಒತ್ತಡಗಳನ್ನು ನಿವಾರಿಸುವ ಜತೆಗೆ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರಕಾರ ಕೈಗೊಳ್ಳಲಿದೆ,” ಎಂದು ಮುಖ್ಯನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರಿಗೆ ಭರವಸೆ ನೀಡಿದರು. ಇದರೊಂದಿಗೆ ‘ನ್ಯಾಯಾಂಗ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಮತ್ತು ಸಮಯ, ಹಣ ಪೋಲಾಗುವುದನ್ನು ತಡೆಯಲು ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ಗಳನ್ನು ನಡೆಸುವುದು ಸೂಕ್ತ,” ಎಂದರು.