Advertisement

ಗಲಭೆಕೋರರಿಂದ ಆಸ್ತಿ ಮುಟ್ಟುಗೋಲು ವಿಚಾರ: ಕೋರ್ಟ್ ಗೆ ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

02:53 PM Aug 17, 2020 | keerthan |

ಬೆಂಗಳೂರು: ಕಾಡುಗೊಂಡನ ಹಳ್ಳಿ ಮತ್ತು ದೇವರ ಜೀವನ ಹಳ್ಳಿ ಗಲಭೆಯ ವಿಚಾರದ ಬಗ್ಗೆ ಇಂದು ಸಭೆ ನಡೆಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳಿಗೆ ಉಂಟಾಗಿರುವ ಹಾನಿಯನ್ನು ಗಲಭೆಕೋರರಿಂದ ವಸೂಲು ಮಾಡುವ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

Advertisement

ಇಂದು ಕಾವೇರಿ ನಿವಾಸದಲ್ಲಿ ಗೃಹ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಉಂಟಾಗಿರುವ ಹಾನಿಯನ್ನು ಗಲಭೆಕೋರರಿಂದ ವಸೂಲು ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ನೀಡಿರುವ ಆದೇಶದಂತೆ ಕ್ಲೇಮ್ ಕಮಿಷನರ್ ನೇಮಿಸಲು ಹೈಕೋರ್ಟ್ ಗೆ ಮನವಿ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಈ ಗಲಭೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದರು. ಅಲ್ಲದೇ ಈ ಪ್ರಕರಣಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ)ಯನ್ನು ಸಹ ಅಳವಡಿಸಿರುವುದರ ಬಗ್ಗೆ ತಿಳಿಸಲಾಯಿತು.

ಈಗಾಗಲೇ ದಾಖಲಾಗಿರುವ ಅಪರಾಧ ಪ್ರಕರಣಗಳ ತ್ವರಿತ ಹಾಗೂ ಪರಿಣಾಮಕಾರಿ ವಿಚಾರಣೆಗೆ ಅನುವಾಗುವಂತೆ ಮೂರು ಸದಸ್ಯರನ್ನು ಒಳಗೊಂಡ ವಿಶೇಷ ಅಭಿಯೋಜಕರ ತಂಡವನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಅಪರಾಧ ಪ್ರಕರಣಗಳಲ್ಲಿ ಬಂಧಿತ ಅಪರಾಧಿಗಳಿಗೆ ಸಂಬಂಧಪಟ್ಟಂತೆ ಅವಶ್ಯ ಕಂಡವರನ್ನು ಗುಂಡಾ ಕಾಯ್ದೆಯಡಿಯಲ್ಲಿ ಸಹ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಡಿಜಿಐಜಿಪಿ ಪ್ರವೀಣ್ ಸೂದ್,‌ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next