ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಭೀತಿಯ ನಡುವೆಯೂ ರಾಜ್ಯದ ಎಸ್ಎಸ್ಎಲ್ ಸಿ ಪರೀಕ್ಷೆ ಸುರಕ್ಷಿತವಾಗಿ ಮುಗಿದಿದೆ. ಜೂನ್ 25ರಂದು ಆರಂಭವಾದ ಪರೀಕ್ಷೆ ಇಂದಿಗೆ ಅಂತ್ಯವಾಗಿದೆ. ಅಲ್ಲಿಗೆ ಸೋಂಕು ಸಂಕಟದ ಮಧ್ಯೆ ಪರೀಕ್ಷೆ ನಡೆಸುವ ಸರಕಾರ ದೊಡ್ಡ ಹೊಣೆಯೊಂದು ಯಶಸ್ವಿಯಾದಂತಾಗಿದೆ.
ಮಾರ್ಚ್ ನಲ್ಲಿ ನಡೆಯಬೇಕಾಗಿದ್ದ ಪರೀಕ್ಷೆ ಕೋವಿಡ್-19 ಲಾಕ್ ಡೌನ್ ಕಾರಣದಿಂದ ಮುಂದೂಡಿಕೆಯಾಗಿತ್ತು. ನಂತರ ತಜ್ಞರ ಸಲಹೆಯಂತೆ ಸರಕಾರ ಜೂನ್ 25ರಿಂದ ಪರೀಕ್ಷೆ ನಡೆಸಲು ಯೋಜನೆ ನಡೆಸಿತ್ತು. ಅದರಂತೆ ವೇಳಾಪಟ್ಟಿ ಸಿದ್ದಪಡಿಸಿ ಜೂನ್ 5ರಂದು ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿತ್ತು.
ಪರ ವಿರೋಧ ಚರ್ಚೆ: ಕೋವಿಡ್ ಭೀತಿಯ ಕಾರಣದಿಂದ ತಮಿಳು ನಾಡು, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳು ಪರೀಕ್ಷೆಯನ್ನು ರದ್ದು ಮಾಡಿ, ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ತೇರ್ಗಡೆಗೊಳಿಸಲು ತೀರ್ಮಾನಿಸಿದ್ದವು. ರಾಜ್ಯದಲ್ಲೂ ಹೀಗೆಯೇ ಕೋವಿಡ್ ಭೀತಿಯ ನಡುವೆ ಪರೀಕ್ಷೆ ನಡೆಸಬಾರದು, ರದ್ದುಗೊಳಿಸಬೇಕು ಎಂದು ಆಗ್ರಹಗಳು ಕೇಳಿಬಂದಿದ್ದವು. ಹಲವೆಡೆ ಪ್ರತಿಭಟನೆಯೂ ನಡೆದಿತ್ತು.
ಮುಂಜಾಗೃತ ಕ್ರಮಗಳು: ಪರೀಕ್ಷೆ ನಡೆಸಲು ತೀರ್ಮಾನ ಕೈಗೊಂಡಿದ್ದ ಸರಕಾರ ಬಹಳಷ್ಟು ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿತ್ತು. ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್, ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ಕೊಠಡಿ ಪ್ರವೇಶಕ್ಕೆ ಮೊದಲು ಥರ್ಮಲ್ ಟೆಸ್ಟ್, ಸ್ಯಾನಿಟೈಸರ್ ವಿತರಣೆ ಮುಂತಾದ ಕ್ರಮಗಳನ್ನು ಕೈಗೊಂಡಿತ್ತು. ಪ್ರತೀ ಪರೀಕ್ಷಾ ಕೇಂದ್ರದಲ್ಲೂ ನರ್ಸ್ ಗಳು ಇರುವಂತೆ ವ್ಯವಸ್ಥೆ ಮಾಡಲಾಗಿತ್ತು. ಪ್ರತೀ ವಿದ್ಯಾರ್ಥಿಗೂ ಮಾಸ್ಕ್ ವಿತರಣೆ ಮಾಡಲಾಗಿತ್ತು. ಅನಾರೋಗ್ಯ ಕಂಡು ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಜೂನ್ 25ರಿಂದ ಆರಂಭವಾದ ಪರೀಕ್ಷೆ ಇಂದಿಗೆ ಅಂತ್ಯವಾಗಿದೆ. ಸಚಿವ ಸುರೇಶ್ ಕುಮಾರ್ ಮಂದಾಳತ್ವದಲ್ಲಿ ಪರೀಕ್ಷೆಯನ್ನು ಸರಕಾರ ಯಶಸ್ವಿಯನ್ನಾಗಿದೆ.
ಕೆಲವು ಕಡೆ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿಗಳು, ಒಂದೆರೆಡು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೂ ಸೋಂಕು ಕಾಣಿಸಿಕೊಂಡಿತ್ತು. ಆದರೆ ಸೂಕ್ತ ವ್ಯವಸ್ಥೆ ಮಾಡಿದ್ದರಿಂದ ಸರ್ಕಾರ ಪರೀಕ್ಷೆ ಪಾಸಾಗಿದೆ.
ಕ್ವಾರಂಟೈನ್ ನಲ್ಲಿರುವ ಅಥವಾ ಸೋಂಕಿತರಾಗಿರುವ, ಸೀಲ್ ಡೌನ್ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲು ಸರಕಾರ ತೀರ್ಮಾನಿಸಿದೆ.
ಜುಲೈ ತಿಂಗಳ ಅಂತ್ಯದಲ್ಲಿ ಪಿಯುಸಿ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಹೊರಬೀಳಲಿದೆ ಎಂದು ಸಚಿವ ಸುರೇಶ್ ಕುಮಾರ್ ಈಗಾಗಲೇ ಹೇಳಿದ್ದಾರೆ.