ವಿಜಯಪುರ: ಡೋಣಿ ನದಿ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೃಷ್ಣಾ ಮೇಲ್ದಂಡೆ ಯೋಜನೆ ಮಾದರಿಯಲ್ಲಿ ಜನರಿಗೆ ಪುನರ್ವಸತಿ ಹಾಗೂ ಬಿಹಾರದ ಕೋಶಿನದಿ ಪುನರುಜ್ಜೀವನ ಮಾದರಿಯಲ್ಲಿ ಹೂಳೆತ್ತುವ ಯೋಜನೆ ಅನುಷ್ಠಾನಕ್ಕೆ ಬರಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ, ಪ್ರವಾಹ ಪೀಡಿತ ಜಿಲ್ಲೆಗಳಿಗೆ ಪರಿಹಾರ ವಿತರಣೆಗೆ ಪಿಡಿಎ ಅಕೌಂಟ್ ನಲ್ಲಿ ಹಣವಿಲ್ಲದ ಜಿಲ್ಲೆಗಳಿಗೆ ಪರಿಹಾರ ಘೋಷಣೆ ಮಾಡಿದೆ. ಸರ್ಕಾರ ಪಾರದರ್ಶಕ ಸಮೀಕ್ಷೆ ಮಾಡಿ, ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಳೆ ಹಾಗೂ ಡೋಣಿ ನದಿ ಸೇರಿದಂತೆ ಪ್ರವಾಹಕ್ಕೆ ಜಮೀನುಗಳಲ್ಲಿ ಬೆಳೆಹಾನಿಗೆ, ಮನೆ ಇತರೆ ಆಸ್ತಿ ಕಳೆದುಕೊಂಡವರಿಗೆ ಅಗತ್ಯ ವಸ್ತುಗಳ ಹಾನಿಗೂ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಡೋಣಿನದಿ ಪ್ರವಾಹ ಶಾಶ್ವತ ಪರಿಹಾರ ನೀಡಬೇಕು. ಪ್ರವಾಹ ಸೃಷ್ಟಿಸುವ ಗರಿಷ್ಠ ವ್ಯಾಪ್ತಿ ಸರ್ಕಾರದ ಮಟ್ಟದಲ್ಲಿ ಸ್ಪಷ್ಟ ಮಾಹಿತಿ ಇದೆ. ಬಾಧಿತವಾಗುವ ಗ್ರಾಮ, ಮನೆ, ಕಟ್ಟಡಗಳನ್ನು ಗುರುತಿಸಿ, ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ನೀಡಿದ ಮಾದರಿಯಲ್ಲಿ ಪರಿಹಾರ ಹಾಗೂ ಶಾಶ್ವತ ಸ್ಥಳಾಂತರ ಮಾಡಬೇಕು. ಡೋಣಿ ನದಿ ತೀರದ ಪ್ರವಾಹ ಸಂಭವನೀಯ ಗ್ರಾಮಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರ ಮಾಡಿದರೆ ಜನರಿಗೆ ಅನಕೂಲವಾಗಲಿದೆ. ಕಾಟಾಚಾರಕ್ಕೆ ಕಟ್ಟುವ ಮನೆಗಳಲ್ಲಿ ಜನ ವಾಸಿಸಲಾರರು ಎಂಬುದು ದಶಕ ಹಿಂದಿನ ಧನ್ಯಾಳ, ದಾಶ್ಯಾಳ, ಕೋಟ್ಯಾಳ ಪುನರ್ವಸತಿ ಗ್ರಾಮಗಳ ಸ್ಥಿತಿಯೇ ಇದಕ್ಕೆ ಸಾಕ್ಷಿ. ಹೀಗಾಗಿ ಅಗತ್ಯ ಸೌಲಭ್ಯ ಸಹಿತ ಅಗತ್ಯ ಪ್ರಮಾಣದ ನಿವೇಶನ, ಮನೆ ಹಾಗೂ ಇತರೆ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇದಕ್ಕಾಗಿ ಬಿಹಾರದ ಕೋಶಿನದಿ ಪುನರುಜ್ಜೀವನ ಹಾಗೂ ಪುನರ್ವಸತಿಗೆ ಕೇಂದ್ರ ಸರ್ಕಾರ ಕೈಗೊಂಡಂತೆ ವ್ಯಾಕ್ವೋಸ್ ಮೂಲಕ ಡೋಣಿನದಿ ಹೂಳು ಎತ್ತಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ರಾಮನಗರ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಸಚಿವ ಅಶ್ವತ್ಥ ನಾರಾಯಣ ಭೇಟಿ
ಡೋಣಿ ನದಿ ಪ್ರವಾಹ ತಡೆಗೆ 2400 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ ಕೇಂದ್ರ-ರಾಜ್ಯ ಸರ್ಕಾರ ಸಹಯೋಗದಲ್ಲಿ ಶಾಶ್ವತ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಕೃಷ್ಣಾ, ಭೀಮಾ ನದಿಗಳಲ್ಲಿ ತಲೆದೋರಿದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಪರಿಹಾರ ನೀಡುವಲ್ಲಿ ಆಧಿಕಾರಿಗಳೇ ಕೊಕ್ಕೆ ಹಾಕಿದ್ದಾರೆ. ಎನ್ ಡಿ ಆರ್ ಎಫ್ ನಿಯಮ ಅನುಸರಿಸಿದರೆ ಬಾಧಿತರು ಪರಿಹಾರ ಪಡೆಯಲು ಎಡತಾಕಬೇಕು. ಹೀಗಾಗಿ ಈ ವಿಷಯದಲ್ಲಿ ಸರ್ಕಾರ ಬದ್ಧತೆ ತೋರಬೇಕು ಎಂದು ಆಗ್ರಹಿಸಿದರು.