ವರದಿ: ಶಶಿಧರ್ ಬುದ್ನಿ
ಧಾರವಾಡ: ಕೋವಿಡ್-19 ಹೊಡೆತದಿಂದ ವರ್ಷಪೂರ್ತಿ ಬಾಗಿಲು ಮುಚ್ಚಿದ್ದ ಶಾಲೆಗಳು ಇದೀಗ ಕೋವಿಡ್ ತಗ್ಗಿದ ಪರಿಣಾಮ ಮತ್ತೆ ಬಾಗಿಲು ತೆರೆದಿದ್ದು, ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿದೆ. ಆದರೆ ಸರಕಾರಿ ಶಾಲೆಗಳಲ್ಲಿ ಸುಸಜ್ಜಿತ ಸೂರಿನ ಜತೆಗೆ ಮೂಲಸೌಕರ್ಯಗಳ ಕೊರತೆ ಎದುರಾಗಿದೆ.
ಕೋವಿಡ್ ಅಬ್ಬರ ಕಡಿಮೆ ಆಗುತ್ತಲೇ ಸರಕಾರ ಎರಡು ಹಂತದಲ್ಲಿ ಶಾಲೆಗಳ ಪುನರ್ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಹೊಡೆತಕ್ಕೆ ಖಾಸಗಿ ಶಾಲೆಗಳ ಕೆಲ ಮಕ್ಕಳೂ ಸರಕಾರಿ ಶಾಲೆಗಳತ್ತ ಮುಖ ಮಾಡಿದ್ದು, ಇದರ ಜತೆಗೆ ಸರಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ ಏರಿಕೆ ಕಂಡಿದೆ. ಇದೀಗ ತರಗತಿಗಳಿಗೂ ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಆದರೆ ಸರಕಾರಿ ಶಾಲೆಗಳಲ್ಲಿ ಸುಸಜ್ಜಿತ ಸೂರಿನ ಕೊರತೆ ಜತೆಗೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುವಂತಾಗಿದೆ.
ಮೂಲಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ಮಾನ್ಯತೆ ರದ್ದುಗೊಳಿಸಲು ಮುಂದಾಗುವ ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯಲ್ಲೇ ಇರುವ ಸರಕಾರಿ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಒದಗಿಸಲು ಈವರೆಗೂ ಸಾಧ್ಯವಾಗಿಲ್ಲ ಎಂಬುದು ಕಟು ಸತ್ಯ.
ಜಿಲ್ಲೆಯಲ್ಲಿ ಒಟ್ಟು 1251 ಪ್ರಾಥಮಿಕ ಶಾಲೆಗಳು ಹಾಗೂ 442 ಪ್ರೌಢಶಾಲೆಗಳಿದ್ದು, ಈ ಪೈಕಿ 763 ಸರಕಾರಿ ಶಾಲೆಗಳಿದ್ದರೆ 108 ಸರಕಾರಿ ಪ್ರೌಢಶಾಲೆಗಳಿವೆ. ಇದರಲ್ಲಿ ಕೆಲವೊಂದಿಷ್ಟು ಶಾಲೆಗಳ ಕೊಠಡಿ ಶಿಥಿಲಾವಸ್ಥೆ ತಲುಪಿದ್ದರೆ ಇನ್ನೂ ಕೆಲವೊಂದಿಷ್ಟು ಶಾಲೆಗಳಿಗೆ ಈವರೆಗೂ ಸ್ವಂತ ಕಟ್ಟಡಗಳೇ ಇಲ್ಲ. 52 ಶಾಲೆಗಳಿಗೆ ಸ್ವಂತ ಕಟ್ಟಡ ಕೊರತೆಯಿದ್ದರೆ 532 ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಇದಲ್ಲದೇ ಬೋಧನಾ ಕಾರ್ಯಕ್ಕೆ ಬೇಕಿರುವ 110 ವಿಷಯ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಹೊಡೆತ ಬೀಳುವಂತಾಗಿದೆ.
ಸ್ವಂತ ಕಟ್ಟಡ ಕೊರತೆ: ಶಿಕ್ಷಣ ಇಲಾಖೆಯೇ ನೀಡಿರುವ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ 763 ಸರಕಾರಿ ಶಾಲೆಗಳ ಪೈಕಿ 18 ಶಾಲೆಗಳಿಗೆ ಇಂದಿಗೂ ಸ್ವಂತ ಕಟ್ಟಡ ಇಲ್ಲದ ಕಾರಣ ಬಾಡಿಗೆ ರೂಪದಲ್ಲಿ ಶಾಲೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಇದಲ್ಲದೇ 13 ಶಾಲೆಗಳಿಗೂ ಸ್ವಂತ ಕಟ್ಟಡ ಇಲ್ಲದೇ ಬಾಡಿಗೆ ರಹಿತವಾಗಿ ಶಾಲೆಗಳು ನಡೆಯುತ್ತಾ ಸಾಗಿವೆ.
ಇನ್ನೂ ಜಿಲ್ಲೆಯಲ್ಲಿ ಇರುವ 108 ಸರಕಾರಿ ಪ್ರೌಢ ಶಾಲೆಗಳ ಪೈಕಿ 88 ಶಾಲೆಗಳಿಗೆ ಅಷ್ಟೇ ಸ್ವಂತ ಕಟ್ಟಡವಿದ್ದು, 21 ಶಾಲೆಗಳಿಗೆ ಈವರೆಗೂ ಸ್ವಂತ ಕಟ್ಟಡವೇ ಲಭ್ಯವಾಗಿಲ್ಲ. ಈ ಪೈಕಿ ಅವಳಿನಗರದಲ್ಲಿಯೇ ಜಾಗ ಕೊರತೆಯಿಂದಲೇ ಬಹುತೇಕ ಸರಕಾರಿ ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ.