Advertisement

Government School: ವರ್ಷ ಕಳೆದರೂ ಪ್ರಗತಿ ಕಾಣದ ಸರಕಾರಿ ಶಾಲೆ ಆಸ್ತಿ ದಾಖಲೀಕರಣ

11:53 AM Aug 27, 2023 | Team Udayavani |

ಉಡುಪಿ: ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲು ವೇಗ ಪಡೆದುಕೊಂಡಿದ್ದ ಸರಕಾರಿ ಶಾಲೆಗಳ ಆಸ್ತಿ ದಾಖಲೀಕರಣ ಪ್ರಕ್ರಿಯೆ ಸದ್ಯ ಬಹುಪಾಲು ಸ್ಥಗಿತವಾದಂತಿದೆ.

Advertisement

ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಡತದ ಬೆನ್ನುಹತ್ತಿ ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡುವುದರಲ್ಲೇ ನಿಂತು ಬಿಟ್ಟಿದೆ. ಅಲ್ಲಿದಾಂಚೆಗೆ ಕಡತಗಳು ಕಂದಾಯ ಅಥವಾ ಅರಣ್ಯ ಇಲಾಖೆಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಅಧೀನಕ್ಕೆ ವರ್ಗಾವಣೆಯೇ ಆಗುತ್ತಿಲ್ಲ.

2022ರ ಆಗಸ್ಟ್‌ನಿಂದ 2022ರ ಅಕ್ಟೋಬರ್‌ ವರೆಗೆ ರಾಜ್ಯಾದ್ಯಂತ ಸರಕಾರಿ ಶಾಲೆ ಮತ್ತು ಕಾಲೇಜು ಆಸ್ತಿ ಸಂರಕ್ಷಣ ಅಭಿಯಾನ/ ಆಂದೋಲನ ನಡೆದಿತ್ತು. 2022ರ ಅಕ್ಟೋಬರ್‌ ಅಂತ್ಯಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯು ಆಸ್ತಿ ನೋಂದಣಿಯ ಮಾಹಿತಿಯನ್ನು ಬಿಡುಗಡೆ ಮಾಡಿತ್ತು. ಅದರಂತೆ ರಾಜ್ಯದ 43,564 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 25,205 ಶಾಲೆಗಳು ಆಸ್ತಿ ನೋಂದಣಿ ಮಾಡಿದ್ದವು. 17,490 ಶಾಲೆಗಳ ಆಸ್ತಿ ನೋಂದಣಿಗೆ ಬಾಕಿಯಿದ್ದವು. ಪ್ರೌಢಶಾಲಾ ವಿಭಾಗದ 4,729 ಶಾಲೆಗಳಲ್ಲಿ 3,283ರ ಆಸ್ತಿ ನೋಂದಣಿ ಪೂರ್ಣಗೊಂಡಿದ್ದು, 1,446 ಶಾಲೆಗಳ ನೋಂದಣಿಗೆ ಬಾಕಿಯಿತ್ತು. ಈಗಲೂ ರಾಜ್ಯಾದ್ಯಂತ 10 ಸಾವಿರಕ್ಕೂ ಅಧಿಕ ಪ್ರಾಥಮಿಕ ಹಾಗೂ 800ಕ್ಕೂ ಅಧಿಕ ಪ್ರೌಢಶಾಲೆ ಆಸ್ತಿ ನೋಂದಣಿಗೆ ಬಾಕಿಯಿದೆ.

ಬಾಕಿ ಎಲ್ಲಿ ಹೆಚ್ಚು ?
ದಶಕಗಳ ಹಿಂದೆ ದಾನಿಗಳು ದಾನವಾಗಿ ನೀಡಿರುವ ಜಾಗಕ್ಕೆ ಸಂಬಂಧಿಸಿದಂತೆ ದಾನಿಗಳನ್ನು ಅಥವಾ ಅವರ ಕುಟುಂಬಕ್ಕೆ ಹತ್ತಿರ ಇರುವವರನ್ನು ಹುಡುಕಿ ದಾಖಲೀಕರಣ ಮಾಡುವ ಪ್ರಕ್ರಿಯೆ ಬಹುತೇಕ ಚೆನ್ನಾಗಿಯೇ ಆಗಿದೆ. ಖಾಸಗಿ ಸ್ವತ್ತುಗಳು (ಮಾಲಕರು ಯಾರು ಎಂಬುದರ ಸ್ಪಷ್ಟತೆ ಇಲ್ಲದೇ ಇರುವುದು) ಕೂಡ ದಾಖಲೀಕರಣ ಆಗಿದೆ. ಆದರೆ ಸರಕಾರಿ ಜಾಗದಲ್ಲಿರುವ ಶಾಲೆಯ ಆಸ್ತಿಯ ದಾಖಲೀಕರಣ ಅಧಿಕಾರಿಗಳಿಗೆ ಹಾಗೂ ಶಾಲಾ ಶಿಕ್ಷಕರಿಗೆ ಜಟಿಲವಾಗಿದೆ. ದಾನಿಗಳು ನೀಡಿರುವ ಜಾಗದ ಸುಮಾರು 5 ಸಾವಿರ ಶಾಲೆ, ಖಾಸಗಿ ಸ್ವತ್ತಿನ ಸುಮಾರು 2 ಸಾವಿರ ಶಾಲೆ ಹಾಗೂ ಸರಕಾರಿ ಸ್ವತ್ತಿನ ಸುಮಾರು 10 ಸಾವಿರಕ್ಕೂ ಅಧಿಕ ಶಾಲೆಗಳು ದಾಖಲಿಸಿಕೊಳ್ಳುವುದು ಕಠಿನಾತೀಕರಣವಾಗಿದೆ.

ಸಮಸ್ಯೆ ಏನು?
ಸರಕಾರಿ ಜಾಗದಲ್ಲಿ ಸರಕಾರಿ ಶಾಲೆಯಿದ್ದರೆ ಆ ಆಸ್ತಿಯನ್ನು ಸುಲಭವಾಗಿ ದಾಖಲು ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯ ವ್ಯಾಪ್ತಿಯ ಜಮೀನಿನಲ್ಲಿ ಶಾಲೆಯಿದ್ದರೆ ಅರಣ್ಯ ಇಲಾಖೆಯವರು ಶಿಕ್ಷಣ ಇಲಾಖೆಗೆ ಆಸ್ತಿ ವರ್ಗಾವಣೆಗೆ ಹತ್ತಾರು ತಕರಾರು ಎತ್ತುತ್ತಿದ್ದಾರೆ. ಕಂದಾಯ ಇಲಾಖೆಯವರು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದೇವೆ, ಅವರ ಬಳಿಕೆ ಕಡತವಿದೆ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ. ಹೀಗಾಗಿ ಸರಕಾರಿ ಸ್ವತ್ತು ಇರುವ ಕಡೆ ದಾಖಲೀಕರಣ ಸಾಧ್ಯವಾಗುತ್ತಿಲ್ಲ. ಹತ್ತಾರು ತಾಂತ್ರಿಕ ಸಮಸ್ಯೆ ಎದುರಾಗುತ್ತಿವು. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇವೆ
ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಪರವಾಗಿಲ್ಲ
ಉಡುಪಿ ಜಿಲ್ಲೆಯ 578 ಪ್ರಾಥಮಿಕ ಹಾಗೂ 106 ಪ್ರೌಢಶಾಲೆಗಳಲ್ಲಿ 550ಕ್ಕೂ ಅಧಿಕ ಶಾಲೆಗಳ ಆಸ್ತಿ ದಾಖಲೀಕರಣವಾಗಿದೆ. ಹಾಗೆಯೇ ದ.ಕ. ಜಿಲ್ಲೆಯ 914 ಪ್ರಾಥಮಿಕ ಹಾಗೂ 170 ಪ್ರೌಢಶಾಲೆಗಳಲ್ಲಿ 1,000ಕ್ಕೂ ಅಧಿಕ ಶಾಲೆಗಳ ಆಸ್ತಿ ನೋಂದಣಿ ಪೂರ್ಣಗೊಂಡಿದೆ. ಡೀಮ್ಡ್ ಫಾರೆಸ್ಟ್‌ ಪ್ರದೇಶ/ ಸರಕಾರಿ ಸ್ವತ್ತಿನಲ್ಲಿರುವ ಶಾಲೆಯ ದಾಖಲೀಕರಣವೇ ಬಾಕಿಯಿದೆ. ದಾನಿಗಳು ನೀಡಿರುವ ಮತ್ತು ಖಾಸಗಿ ಸ್ವತ್ತಿನ ದಾಖಲೀಕರಣ ಬಹುಪಾಲು ಪೂರ್ಣಗೊಂಡಿದೆ.

ದಾಖಲೀಕರಣ ಏಕೆ?
ಸರಕಾರಿ ಶಾಲೆಗಳನ್ನು ಮತ್ತು ಆಸ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಮತ್ತು ಭವಿಷ್ಯದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ, ಒತ್ತುವರಿ ಇತ್ಯಾದಿ ಆಗಬಾರದು ಅಥವಾ ಈಗಾಗಲೇ ಒತ್ತುವರಿ ಆಗಿದ್ದರೆ ತೆರವುಗೊಳಿಸಲು ಅನುಕೂಲವಾಗುವಂತೆ ಆಸ್ತಿ ದಾಖಲೀಕರಣ ಪ್ರಕ್ರಿಯೆಯನ್ನು 2022ರಲ್ಲಿ ಸರಕಾರ ಚುರುಕುಗೊಳಿಸಿತ್ತು.

ಅರಣ್ಯ ಮತ್ತು ಕಂದಾಯ ಇಲಾಖೆ ಯಿಂದ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಕಡತ ವರ್ಗಾವಣೆ ಮಾಡಲು ವಿಳಂಬ ಮಾಡುವುದರಿಂದ ಶೇ. 100ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಕಚೇರಿಗೂ ಮಾಹಿತಿ ತಲುಪಿಸಿದ್ದೇವೆ.
– ಕೆ.ಗಣಪತಿ, ದಯಾನಂದ ರಾಮಚಂದ್ರ ನಾಯಕ್‌, ಡಿಡಿಪಿಐಗಳು, ಉಡುಪಿ, ದ.ಕ. ಜಿಲ್ಲೆ

ಇದನ್ನೂ ಓದಿ: Eshwar khandre: ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ: ಈಶ್ವರ ಖಂಡ್ರೆ

Advertisement

Udayavani is now on Telegram. Click here to join our channel and stay updated with the latest news.

Next