Advertisement

ಇರಿಗೆ ಸರಕಾರಿ ಹಿ.ಪ್ರಾ. ಶಾಲೆ: ಖಾಯಂ ಶಿಕ್ಷಕರ ಕೊರತೆ

10:06 AM Nov 01, 2019 | Team Udayavani |

ಹಳ್ಳಿಹೊಳೆ: ಗ್ರಾಮೀಣ ಭಾಗದ ಈ ಶಾಲೆಯಲ್ಲಿ ಎಲ್ಲ ಸೌಕರ್ಯಗಳಿದ್ದರೂ, ಖಾಯಂ ಶಿಕ್ಷಕರದ್ದೆ ಸಮಸ್ಯೆ. ಬೈಂದೂರು ವಲಯದ ಹಳ್ಳಿಹೊಳೆ ಗ್ರಾಮದ ಇರಿಗೆ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಇದ್ದರೂ, ಖಾಯಂ ಶಿಕ್ಷಕರಿರುವುದು ಒಬ್ಬರು ಮಾತ್ರ.

Advertisement

ಐವತ್ತು ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಇರಿಗೆ ಹಿ. ಪ್ರಾ. ಶಾಲೆಯಲ್ಲಿ ಶಿಕ್ಷಕರದ್ದೆ ಸಮಸ್ಯೆ ಬಿಡಿಸಲಾಗದ ಕಗ್ಗಂಟಾಗಿದೆ. ಇಲ್ಲಿಗೆ ಶಿಕ್ಷಕರಾಗಿ ನಿಯೋಜನೆಗೊಂಡರೂ, ಗ್ರಾಮೀಣ ಭಾಗವಾಗಿರುವುದರಿಂದ ಇಲ್ಲಿಗೆ ಶಿಕ್ಷಕರಾಗಿ ಬರಲು ಯಾರೂ ಕೂಡ ಒಪ್ಪದ ಕಾರಣ, ಹಲವು ವರ್ಷಗಳಿಂದ ಇಲ್ಲಿ ಒಬ್ಬರೇ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಲ್ಲಿ ಪ್ರಸ್ತುತ 19 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 10 ವರ್ಷಗಳ ಹಿಂದೆ ಇಲ್ಲಿ 100 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪ್ರತಿ ವರ್ಷ ಕಲಿಯುತ್ತಿದ್ದರು. ಆದರೆ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎನ್ನುವುದು ಇಲ್ಲಿನ ಊರವರೊಬ್ಬರ ಅಭಿಪ್ರಾಯ.

54 ವರ್ಷಗಳ ಇತಿಹಾಸ
ಈ ಶಾಲೆ ಆರಂಭಗೊಂಡಿರುವುದು 1965 ರಲ್ಲಿ. ಅಂದರೆ ಈಗ ಈ ಶಾಲೆಗೆ 54 ವರ್ಷಗಳ ಇತಿಹಾಸವಿದೆ. ಸಾವಿರಾರು ಮಂದಿ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹೆಸರುಗಳಿಸಿದ್ದಾರೆ. ಆದರೂ ಈಗ ಶಿಕ್ಷಕರಿಲ್ಲದೆ ಶಾಲೆಗೆ ಬರಲು ವಿದ್ಯಾರ್ಥಿಗಳು ಕೂಡ ಹಿಂದೇಟು ಹಾಕುತ್ತಿದ್ದಾರೆ. ಈಗ ಇಲ್ಲಿ ಒಬ್ಬರು ಖಾಯಂ ಶಿಕ್ಷಕರಿದ್ದು, ಇನ್ನಿಬ್ಬರು ಗೌರವ ಶಿಕ್ಷಕರಿದ್ದಾರೆ. ಇಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಇರುವುದರಿಂದ ಖಾಯಂ ಶಿಕ್ಷಕರಿಲ್ಲದ ಕಾರಣ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ.

ಮಕ್ಕಳ ಸಂಖ್ಯೆಗೆ ತಕ್ಕಂತೆ ನಿಯೋಜನೆ

Advertisement

ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿಯೇ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಮಕ್ಕಳು ಹೆಚ್ಚಿದ್ದರೆ, ಖಂಡಿತವಾಗಿಯೂ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಲಾಗುವುದು. ಆದರೆ ಈಗಿರುವ ಅಲ್ಲಿನ ಮಕ್ಕಳ ಸಂಖ್ಯೆಯನ್ನು ಆಧಾರಿಸಿ, ಶಿಕ್ಷಕರನ್ನು ನೀಡಲಾಗಿದೆ
– ಜ್ಯೋತಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ

ಹೆಚ್ಚುವರಿ ಶಿಕ್ಷಕರ ಅಗತ್ಯ

ಈ ಶಾಲೆಗೆ ಹೆಚ್ಚುವರಿ ಶಿಕ್ಷಕರ ತೀರಾ ಅಗತ್ಯವಿದೆ. ಗ್ರಾಮೀಣ ಭಾಗದ ಹತ್ತಾರು ಮಂದಿ ವಿದ್ಯಾರ್ಥಿಗಳಿಗೆ ಈ ಶಾಲೆಯೇ ವರದಾನವಾಗಿದೆ. ಆದರೆ ಶಿಕ್ಷಕರ ಕೊರತೆಯಿರುವುದರಿಂದಲೇ ವಿದ್ಯಾರ್ಥಿಗಳು ಅಕ್ಕ – ಪಕ್ಕದ ಬೇರೆ ಶಾಲೆಗೆ ಹೋಗುವ ಅನಿವಾರ್ಯ ಪರಿಸ್ಥಿತಿ ಬಂದಿದೆ. ಈಗಿರುವ ಶಿಕ್ಷಕರ ಜತೆಗೆ ಮತ್ತೂಬ್ಬರು ಖಾಯಂ ಶಿಕ್ಷಕರನ್ನು ನಿಯೋಜಿಸಿದರೆ ಶಾಲೆ ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಯೋಜನವಾಗುತ್ತದೆ ಎನ್ನುವುದು ಇಲ್ಲಿನ ಹಳೆ ವಿದ್ಯಾರ್ಥಿಗಳ ಅಭಿಪ್ರಾಯ.
-ಹಳೆ ವಿದ್ಯಾರ್ಥಿಗಳು,

Advertisement

Udayavani is now on Telegram. Click here to join our channel and stay updated with the latest news.

Next