Advertisement
ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ತೀರಾ ಹಳೆಯದ್ದಾಗಿದ್ದು, ತರಗತಿ ಕೋಣೆಗಳು ಸಂಪೂರ್ಣ ಶಿಥಿಲಗೊಂಡಿವೆ. ಕಟ್ಟಡದ ತಳಪಾಯ ದಿನೇದಿನೆ ಕುಸಿಯಲು ಶುರು ಮಾಡಿದೆ. ಬಿಸಿಯೂಟ ಕೋಣೆ ಸೇರಿದಂತೆ ಶಾಲೆಯ ಒಟ್ಟು ಹನ್ನೆರಡು ತರಗತಿ ಕೋಣೆಗಳ ನಾಲ್ಕೂ ದಿಕ್ಕಿನ ಗೋಡೆಗಳಲ್ಲಿ ಬಿರುಕು ಮೂಡಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೆಳಗಡೆ ಕುಳಿತು ಪಾಠ ಕೇಳುವ ಮಕ್ಕಳ ತಲೆಯ ಮೇಲೆ ಕಾಂಕ್ರೀಟ್ ಮಾಳಿಗೆಯ ತುಣುಕುಗಳು ಆಗಾಗ ಕಳಚಿ ಬೀಳುತ್ತಿವೆ. ಈಗಲೋ ಆಗಲೋ ಕಟ್ಟಡ ಕುಸಿದು ಬೀಳುವ ಭಾರಿ ಆತಂಕ ಎದುರಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲಾ ಶಿಕ್ಷಕರು ಲಿಖೀತ ರೂಪದಲ್ಲಿ ವಿಷಯವನ್ನು ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದ್ದು, ಪ್ರಾಣಾಪಾಯದಂತಹ ಸಮಸ್ಯೆಗೆ ಶಿಕ್ಷಣ ಇಲಾಖೆ ತಕ್ಷಣ ಪರಿಹಾರ ಒದಗಿಸದಿರುವುದು ವಿಷಾದದ ಸಂಗತಿ.
Related Articles
Advertisement
ನಮ್ಮೂರ ಶಾಲೆಗೆ ಮಕ್ಕಳ ಸಂಖ್ಯೆ ಅಥವಾ ಶಿಕ್ಷಕರ ಕೊರತೆ ಎದುರಾಗಿಲ್ಲ. ಅಗತ್ಯಕ್ಕೆ ತಕ್ಕಷ್ಟು ತರಗತಿ ಕೋಣೆಗಳಿದ್ದರೂ ಅವು ಬಳಕೆಗೆ ಯೋಗ್ಯವಾಗಿಲ್ಲ. ಬಹಳ ಹಳೆಯ ಕಟ್ಟಡವಾದ್ದರಿಂದ ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಛಾವಣಿ ಕೊಳೆತು ಸೋರುತ್ತಿದೆ. ಸಿಮೆಂಟ್ ಕಳಚಿ ಬೀಳುತ್ತಿದೆ. ರಾಡುಗಳು ಹೊರ ಕಾಣುತ್ತಿವೆ. ಎಲ್ಲಾ ತರಗತಿ ಕೋಣೆಗಳಲ್ಲಿ ಮಳೆ ನೀರು ಹರಿದಾಡುತ್ತದೆ. ಪಾಠ ಮಾಡುವುದೇ ದುಸ್ತರವಾಗಿದೆ. ಕಟ್ಟಡದಿಂದ ಮಕ್ಕಳಿಗೆ ಜೀವ ಭಯ ಕಾಡುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿ ಕಾರಿಗಳಿಗೆ ಲಿಖೀತ ಮಾಹಿತಿ ನೀಡಿ ಹೊಸ ಕಟ್ಟಡದ ಬೇಡಿಕೆ ಇಟ್ಟಿದ್ದೇನೆ. ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. –ಕನಕಪ್ಪ ಮ್ಯಾಗೇರಿ, ಮುಖ್ಯಶಿಕ್ಷಕ, ಸ.ಹಿ.ಪ್ರಾಥಮಿಕ ಶಾಲೆ ಹಳಕರ್ಟಿ
ಬೀಳುವ ಹಂತಕ್ಕೆ ತಲುಪಿರುವ ಹಳೆಯ ಶಿಥಿಲ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಪಾಠ-ಪ್ರವಚನಗಳಿಗೆ ಅರ್ಹವಲ್ಲದ ಕೋಣೆಗಳಲ್ಲಿ ಅಕ್ಷರ ಬೋಧನೆ ಸಾಗಿದೆ. ವಿದ್ಯಾರ್ಥಿಗಳು ಆತಂಕದಲ್ಲಿ ಪಾಠ ಕೇಳುವಂತಾಗಿದ್ದರೆ, ಶಿಕ್ಷಕರು ಏಕಾಗ್ರತೆಯಿಂದ ಅಕ್ಷರ ಕಲಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ನೋಡಿದರೆ ಇಡೀ ಕಟ್ಟಡ ಧರೆಗುರುಳುವ ಅಪಾಯವಿದೆ. ಅವಘಡ ಸಂಭವಿಸುವ ಮುಂಚೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಹಳೆಯ ಕಟ್ಟಡ ತೆರವುಗೊಳಿಸಿ ಹೊಸತನ್ನು ನಿರ್ಮಿಸಲು ಮುಂದಾಗಬೇಕು. ಕ್ಷೇತ್ರದ ಶಾಸಕರು ಬಡ ಮಕ್ಕಳಿಗಾಗಿ ಹೆಚ್ಚಿನ ಕಾಳಜಿ ವಹಿಸಬೇಕು. ನಿರ್ಲಕ್ಷé ವಹಿಸಿದರೆ ಹೋರಾಟ ಹಮ್ಮಿಕೊಳ್ಳುತ್ತೇವೆ? –ಸಿದ್ದು ಮದ್ರಿ, ಕಾರ್ಯದರ್ಶಿ, ಅಖೀಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ)
-ಮಡಿವಾಳಪ್ಪ ಹೇರೂರ