Advertisement

ಅನ್ನದಾತರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ

12:38 PM Nov 23, 2022 | Team Udayavani |

ಆಲಮಟ್ಟಿ: 2022-23ನೇ ಸಾಲಿನಲ್ಲಿ ಮುಂಗಾರು ಬೆಳೆಗಳು ತೇವಾಂಶ ಹೆಚ್ಚಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಹಿಂಗಾರು ಬೆಳೆಬೆಳೆಯಲಾದರೂ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಅಪಾರ ತ್ಯಾಗ ಮಾಡಿದ ವಿಜಯಪುರ ಜಿಲ್ಲೆಗೆ ಏಪ್ರಿಲ್‌ 15ರವರೆಗಾದರೂ ನೀರು ಬಿಡುವಂತಾಗಬೇಕು ಎನ್ನುವುದು ರೈತರ ಬೇಡಿಕೆ.

Advertisement

ಬರದನಾಡು ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ರೈತರು ಬಿತ್ತನೆ ಮಾಡಿದ್ದ ಮುಂಗಾರು ಹಂಗಾಮಿನ ಬೆಳೆಗಳು ತೃಪ್ತಿಕರವಾಗಲಿಲ್ಲ. ನಿರಂತರವಾಗಿ ಧೋ ಎಂದು ಸುರಿದ ಮಳೆಯಿಂದ ಬಿತ್ತನೆ ಮಾಡಲು ರೈತರಿಗೆ ಅವಕಾಶ ಸಿಗದಂತಾಗಿತ್ತು. ಪರಿಣಾಮ ಉತ್ತಮವಾಗಿ ಬೆಳೆದ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಬೆಳೆಗಳು ಹಾಳಾಗುವ ಸ್ಥಿತಿ ನಿರ್ಮಾಣವಾಗಿತ್ತು.

ಆಲಮಟ್ಟಿಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣದ ಮಧ್ಯೆ ತುಂತುರು ಮಳೆಯಾಗುತ್ತಿದೆ. ಇದರಿಂದ ರೈತರ ಜಮೀನುಗಳಲ್ಲಿ ಕಳೆ ಬೆಳೆದು ಮೂಲ ಬೆಳೆಗಳು ಕುಂಠಿತವಾಗುವಂತಾಗಿದೆ. ಅಷ್ಟೇ ಅಲ್ಲದೇ ಕೆಲ ಜಮೀನುಗಳಲ್ಲಿ ನೀರು ಜಿನುಗಲಾರಂಭಿಸಿದೆ. ಈಗಾಗಲೇ ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಿರುವ ಬಿಳಿಜೋಳ, ಕಡಲೇ. ಗೋಧಿ, ಉಳ್ಳಾಗಡ್ಡಿ, ಮೆಕ್ಕೆಜೋಳ ಸೇರಿದಂತೆ ಎಲ್ಲ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಕೆಂಪಗಾಗಿದ್ದವು. ಮಳೆಯ ಬಿಡುವಿನ ನಂತರ ಬೆಳೆಗಳು ಹಸಿರು ಬಣ್ಣಕ್ಕೆ ತಿರುಗುತ್ತಿರುವದು ರೈತರ ಮೊಗದಲ್ಲಿ ಸಂತಸ ಮೂಡುವಂತಾಗಿದೆ.

ಉತ್ತರಕರ್ನಾಟಕದಲ್ಲಿ ಈ ಹಿಂದೆ ಹಲವಾರು ವರ್ಷಗಳು ಮಳೆಯಾದರೆ ಬೆಳೆ ಮಳೆಯಾಗದಿದ್ದರೆ ಗುಳೆ ಎನ್ನು ಮಾತು ಕೇಳಿ ಬರುತ್ತಿದ್ದವು. ಕಳೆದ ವರ್ಷ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೂ ಕೃಷ್ಣಾ ಹಾಗೂ ಅದರ ಉಪ ನದಿಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಸಮರ್ಪಕವಾಗಿ ಮುಂಗಾರು ಮಳೆಯಾಗದಿದ್ದರೂ ಕೃಷ್ಣೆಯ ದಡದಲ್ಲಿರುವ ಹಲವಾರು ಗ್ರಾಮಗಳು ಹಾಗೂ ಗ್ರಾಮಗಳ ರೈತರ ಜಮೀನುಗಳು ಜಲಾವೃತವಾಗುವಂತಾಗಿತ್ತು.

ಅಪಾರ ನೀರು: ಕೃಷ್ಣಾ ನದಿ ಉಗಮಸ್ಥಾನ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿದ ಪರಿಣಾಮ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಆರಂಭವಾಗಿರುವದು ಶುಭ ಸೂಚಕವೆಂದು ಕೃಷ್ಣೆಯ ಒಡಲ ಮಕ್ಕಳು ಸಂತಸಪಟ್ಟಿದ್ದರು.

Advertisement

ನಂತರ ಕೃಷ್ಣೆಯ ಉಪ ನದಿಗಳು ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಒಳಹರಿವು ನವೆಂಬರ್‌ 12ರಿಂದ ಸಂಪೂರ್ಣವಾಗಿ ಸ್ಥಗಿತವಾಗಿದೆ. ಕಳೆದ ವರ್ಷ ಅಕ್ಟೋಬರ್‌ 22ರಿಂದ ಒಳಹರಿವು ಸ್ಥಗಿತಗೊಂಡಿತ್ತು. ಇದರಿಂದ ಶಾಸ್ತ್ರಿ ಜಲಾಶಯದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

519.60 ಮೀ. ಎತ್ತರವಾಗಿ 123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಮಂಗಳವಾರ 519.50 ಮೀ. ಎತ್ತರದಲ್ಲಿ 121.262 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಇದರಲ್ಲಿ 17.62 ಟಿಎಂಸಿ ನೀರು ಜಲಚರಗಳಿಗಾಗಿ ಮೀಸಲು, ಇನ್ನುಳಿದ 103.642 ಟಿಎಂಸಿ ಅಡಿ ನೀರು ಬಳಸಿಕೊಳ್ಳಬಹುದಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಹಾಗೂ ನಾರಾಯಣಪುರ ಬಸವಸಾಗರಗಳಿಂದ ಮುಂಗಾರು ಹಂಗಾಮಿನಲ್ಲಿ ನೀರಾವರಿಗೊಳಪಡುವ ಸುಮಾರು 6.5 ಲಕ್ಷ ಹೆಕ್ಟೇರ್‌ ಪ್ರದೇಶದ ಶೇ. 80ರಷ್ಟು ಜಮೀನು ನೀರಾವರಿಗೊಳಪಡಿಸಲಾಗಿತ್ತು.

ಹಿಂಗಾರು ಹಂಗಾಮಿಗೆ ಆಲಮಟ್ಟಿ ಜಲಾಶಯ ವ್ಯಾಪ್ತಿಯ 85ಕಿ.ಮೀ.ಉದ್ದದ ಆಲಮಟ್ಟಿ ಎಡದಂಡೆ ಕಾಲುವೆಯು 43 ವಿತರಣಾ ಕಾಲುವೆಗಳನ್ನು ಹೊಂದಿ ಬಸವನಬಾಗೇವಾಡಿ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ 21,981.11 ಹೆಕ್ಟೇರ್‌, 58ಕಿ. ಮೀ. ಉದ್ದದ ಆಲಮಟ್ಟಿ ಬಲದಂಡೆ ಕಾಲುವೆಯು 32 ವಿತರಣಾ ಕಾಲುವೆಗಳನ್ನು ಹೊಂದಿ ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ 8,939.98 ಹೆಕ್ಟೇರ್‌, ಮುಳವಾಡ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಯು 17.20 ಕಿ.ಮೀ.ಉದ್ದವಾಗಿ 7 ವಿತರಣಾ ಕಾಲುವೆಗಳನ್ನು ಹೊಂದಿ ನಿಡಗುಂದಿ, ಕೊಲ್ಹಾರ ತಾಲೂಕಿನ 6,046.91ಹೆಕ್ಟೇರ್‌, ಪಶ್ಚಿಮ ಕಾಲುವೆಯು 78 ಕಿ.ಮೀ.ಉದ್ದವಾಗಿ 43 ವಿತರಣಾ ಕಾಲುವೆಗಳ ಮೂಲಕ ಕೊಲ್ಹಾರ, ಬಬಲೇಶ್ವರ, ಜಮಖಂಡಿ ತಾಲೂಕು ಸೇರಿ 15,862.84 ಹೆಕ್ಟೇರ್‌, ಮರೋಳ ಏತ ನೀರಾವರಿ ಹಂತ-1ಯೋಜನೆಯ 51 ಕಿ.ಮೀ.ಉದ್ದದ ಪೂರ್ವ ಕಾಲುವೆಯು 20ವಿತರಣಾ ಕಾಲುವೆ ಮೂಲಕ 6,015.93 ಹೆಕ್ಟೇರ್‌ ಹಾಗೂ 45 ಕಿ.ಮೀ. ಉದ್ದದ ಪಶ್ಚಿಮ ಕಾಲುವೆಯು 24ವಿತರಣಾ ಕಾಲುವೆಗಳ ಮೂಲಕ 6,970.80 ಹೆಕ್ಟೇರ್‌, ಮರೋಳ ಏತ ನೀರಾವರಿ ಯೋಜನೆಯ ಹಂತ-2 ಹನಿ ನೀರಾವರಿ ಯೋಜನೆಯಿಂದ ಹುನಗುಂದ ತಾಲೂಕಿನ 24 ಸಾವಿರ ಹೆಕ್ಟೇರ್‌.

ತಿಮ್ಮಾಪುರ ಏತ ನೀರಾವರಿಯ ಡಿಸಿ-1 ಕಾಲುವೆಯು 53 ಕಿ.ಮೀ. ಉದ್ದವಾಗಿದ್ದು 24 ವಿತರಣಾ ಕಾಲುವೆಯಿಂದ ಬಾಗಲಕೋಟೆ ತಾಲೂಕಿನ 12,472.38 ಹೆಕ್ಟೇರ್‌ ಹಾಗೂ ಡಿಸಿ-2 ಕಾಲುವೆಯು 28 ಕಿ.ಮೀ. ಉದ್ದವಾಗಿ 12 ವಿತರಣಾ ಕಾಲುವೆಯಿಂದ 3,382.86 ಹೆಕ್ಟೇರ್‌. 1.6 ಕಿ.ಮೀ. ಉದ್ದದ ಚಿಮ್ಮಲಗಿ ಏತನೀರಾವರಿ ಸಂಯುಕ್ತ ಕಾಲುವೆಯಿಂದ 1,073.31 ಹೆಕ್ಟೇರ್‌, 54 ಕಿ.ಮೀ. ಉದ್ದದ ಚಿಮ್ಮಲಗಿ ಏತ ನೀರಾವರಿಯ ಪಶ್ಚಿಮ ಕಾಲವೆಯು 8 ವಿತರಣಾ ಕಾಲುವೆಯಿಂದ ಮುದ್ದೇಬಿಹಾಳ, ನಿಡಗುಂದಿ ಹಾಗೂ ಬಸವನಬಾಗೇವಾಡಿ ತಾಲೂಕಿನ 4,140.47 ಹೆಕ್ಟೇರ್‌. 8 ಕಿ.ಮೀ. ಉದ್ದದ ಸೊನ್ನ ಏತ ನೀರಾವರಿಯು 2 ವಿತರಣಾ ಕಾಲುವೆಯಿಂದ 546.69 ಹೆಕ್ಟೇರ್‌, 12 ಕಿ.ಮೀ.ಉದ್ದದ ತೆಗ್ಗಿಸಿದ್ದಾಪುರ ಏತ ನೀರಾವರಿಯು 4 ವಿತರಣಾ ಕಾಲುವೆಯಿಂದ 471.68 ಹೆಕ್ಟೇರ್‌, ರೊಳ್ಳಿ-ಮನ್ನಿಕೇರಿ ಏತ ನೀರಾವರಿಯು 1,2,3 ಹಂತವಾಗಿ ವಿಂಗಡಿಸಲಾಗಿದ್ದು ಅದರಲ್ಲಿ 2 ಹಂತ ಇನ್ನೂ ಪೂರ್ಣಗೊಂಡಿಲ್ಲ.

ಉಳಿದಂತೆ 797.20 ಹೆಕ್ಟೇರ್‌ ಜಮೀನು ಸೇರಿ ಸುಮಾರು 1,12,710.47 ಹೆಕ್ಟೇರ್‌ ಜಮೀನು. ಬಸವಸಾಗರದ ನಾರಾಯಣಪುರ ಎಡದಂಡೆ, ಬಲದಂಡೆ, ಇಂಡಿ ಶಾಖಾ ಕಾಲುವೆ, ಇಂಡಿ ಏತ ನೀರಾವರಿ ಕಾಲುವೆ, ಜೇವರ್ಗಿ ಶಾಖಾ ಕಾಲುವೆ, ಮುಡಬಾಳ ಶಾಖಾ ಕಾಲುವೆ, ಶಹಾಪುರ ಶಾಖಾ ಕಾಲುವೆ, ರಾಂಪುರ ಏತ ನೀರಾವರಿ, ಬಂದಾಳ, ರಾಜನಕೊಳೂರ ಸೇರಿ ಸುಮಾರು 5 ಲಕ್ಷ 57 ಸಾವಿರ ಹೆಕ್ಟೇರ್‌ ಸೇರಿ ಒಟ್ಟು ನೀರಾವರಿ ಗೊಳಪಡುತ್ತದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

-ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next