Advertisement

ಫ್ಯಾಕ್ಟರಿ ಕಾರ್ಮಿಕರಿಗಿನ್ನು 12 ಗಂಟೆ ಕೆಲಸ! ಕೆಲಸದ ಅವಧಿ ಹೆಚ್ಚಿಸಲು ಕೇಂದ್ರ ಚಿಂತನೆ

06:53 PM Nov 22, 2020 | sudhir |

ನವದೆಹಲಿ: ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ಗಮನಿಸಿ. ಇನ್ನು ಮುಂದೆ ನೀವು ಹತ್ತೂವರೆ ಗಂಟೆಗಳ ಬದಲು 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ!

Advertisement

ಕಾರ್ಖಾನೆಗಳಲ್ಲಿನ ಕಾರ್ಮಿಕರ ದೈನಂದಿನ ಕೆಲಸದ ಗರಿಷ್ಠ ಅವಧಿಯನ್ನು ಒಂದೂವರೆ ಗಂಟೆ ಕಾಲ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅಲ್ಲದೆ, ಮೊದಲ ಬಾರಿಗೆ ವಲಸೆ ಕಾರ್ಮಿಕರಿಗೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ತಮ್ಮೂರುಗಳಿಗೆ ತೆರಳಲು ಉದ್ಯೋಗದಾತರಿಂದ ಭತ್ಯೆ ಪಡೆಯಬೇಕೆಂದರೆ ವಲಸೆ ಕಾರ್ಮಿಕರು ಕೆಲವೊಂದು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ(ಕೇಂದ್ರ) ನಿಯಮಗಳು, 2020ರ ಕರಡುವಿನಲ್ಲಿ ಈ ಪ್ರಸ್ತಾಪಗಳನ್ನು ಮಾಡಲಾಗಿದೆ. ಹಿಂದಿನ ವರ್ಷದಲ್ಲಿ 6 ತಿಂಗಳ ಕಾಲ ಕೆಲಸ ಪೂರ್ಣಗೊಳಿಸಿದ ಕಾರ್ಮಿಕರು ಮಾತ್ರವೇ ಈ ಭತ್ಯೆ ಪಡೆಯಲು ಅರ್ಹರಾಗುತ್ತಾರೆ.

ಇನ್ನು, ಕಂಪನಿಗಳು ಯಾರನ್ನೇ ಕೆಲಸಕ್ಕೆ ನೇಮಿಸಿಕೊಂಡರೂ ಅವರಿಗೆ ಕಡ್ಡಾಯವಾಗಿ ಸರ್ಕಾರ ಸೂಚಿಸಿದ ನಮೂನೆಯಲ್ಲಿ “ನೇಮಕಾತಿ ಪತ್ರ’ ನೀಡಬೇಕು. ಕೆಲಸದ ಸ್ವರೂಪದ ಜೊತೆಗೆ ಹೆಚ್ಚಿನ ವೇತನ ಮತ್ತು ಬಡ್ತಿಗೆ ಅಗತ್ಯವಿರುವ ಅರ್ಹತೆಗಳೇನು ಎಂಬುದನ್ನೂ ನೇಮಕಾತಿ ಪತ್ರದಲ್ಲಿ ನಮೂದಿಸಿರಬೇಕು. ಮಹಿಳಾ ಉದ್ಯೋಗಿಗಳ ಸಮ್ಮತಿಯಿದ್ದರಷ್ಟೇ ಅವರಿಗೆ ರಾತ್ರಿ ಪಾಳಿ ನೀಡಬೇಕು ಎಂಬುದನ್ನೂ ಪ್ರಸ್ತಾಪಿಸಲಾಗಿದೆ.

ಕಾರ್ಮಿಕ ಒಕ್ಕೂಟಗಳ ವಿರೋಧ
ಕೆಲಸದ ಅವಧಿ ಏರಿಕೆ ಪ್ರಸ್ತಾಪಕ್ಕೆ ಕಾರ್ಮಿಕ ಒಕ್ಕೂಟಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ಈ ಪ್ರಸ್ತಾಪವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next