ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಮೇಕೆದಾಟು ಪಾದಯಾತ್ರೆಯ ಮೇಲೆ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕೋವಿಡ್ ಕಠಿಣ ನಿಯಮಗಳು ಪ್ರತಿಕೂಲ ಪರಿಣಾಮ ಬೀರಲಿದೆಯೇ ? ಎಂಬ ಚರ್ಚೆ ಈಗ ಆರಂಭವಾಗಿದೆ.
ಇದನ್ನೂ ಓದಿ: ಮೇಕೆದಾಟು; ಮಿಸ್ಟರ್ ಸುಳ್ಳಯ್ಯ ಹೊಸ ಕತೆ, ಚಿತ್ರಕಥೆ ಬರೆದಿದ್ದಾರೆ: ಕುಮಾರಸ್ವಾಮಿ ವಾಗ್ಬಾಣ
ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಸೋಮವಾರ ಪರೋಕ್ಷ ಸುಳಿವು ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಗಳವಾರ ಸಾಯಂಕಾಲ ತಜ್ಞರ ಜತೆ ಚರ್ಚೆ ನಡೆಸುತ್ತೇನೆ. ಆ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ವಿಮರ್ಶೆ ನಡೆಸಿ ಇಡಿ ರಾಜ್ಯಕ್ಕೆ ಸಾರ್ವತ್ರಿಕವಾಗಿ ಅನ್ವಯವಾಗುವಂಥ ನಿಯಮ ರೂಪಿಸುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸಿಗರು ಮೇಕೆದಾಟು ಪಾದಯಾತ್ರೆ ನಡೆಸಲು ಸಿದ್ದರಾಗಿರುವುದು ನಮ್ಮ ಗಮನದಲ್ಲಿದೆ. ನಾವು ರೂಪಿಸುವ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಎಂಬ ಬೇಧವಿಲ್ಲ. ನಿಯಮ ಸಾರ್ವತ್ರಿಕವಾಗಿರುತ್ತದೆ ಎಂದು ಹೇಳುವ ಮೂಲಕ ಪಾದಯಾತ್ರೆಗೂ ನಿಯಮ ಅನ್ವಯವಾಗಲಿದೆ ಎಂಬ ಸುಳಿವು ನೀಡಲಿದ್ದಾರೆ.
ಕೋವಿಡ್ ಹಾಗೂ ಓಮಿಕ್ರಾನ್ ಪ್ರಕರಣ ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಇದರ ಸ್ವರೂಪ ತೀವ್ರವಾಗಿದೆ. ಆದರೆ ಜನಜೀವನಕ್ಕೆ ತೊಂದರೆಯಾಗದ ರೀತಿಯಲ್ಲಿ ಎಲ್ಲರ ಸಹಕಾರ ಅಗತ್ಯ. ಸ್ವಯಂ ಪ್ರೇರಣೆಯಿಂದ ಎಲ್ಲರೂ ಕೋವಿಡ್ ನಿಯಮ ಪಾಲನೆ ಮಾಡಬೇಕೆಂದು ಹೇಳಿದ್ದಾರೆ.
ಪಾದಯಾತ್ರೆಗೆ ಪ್ರತಿಯಾಗಿ ರಾಜಕೀಯ ದಾಳ ಉರುಳಿಸಲು ನಿರ್ಧರಿಸಿರುವ ಸಿಎಂ ಬೊಮ್ಮಾಯಿ, ರಾಮನಗರ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ ಇಂದು ರಾಮನಗರ ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ.ಎತ್ತಿನಹೊಳೆ ಹಾಗೂ ಶ್ರೀರಂಗಯೋಜನೆ ಜಾರಿ ಬಗ್ಗೆ ಪ್ರತ್ಯೇಕ ಸಂಕಲ್ಪ ಪಟ್ಟಿ ಸಿದ್ದಪಡಿಸಿದ್ದಾರೆ. ತಜ್ಞರ ಸಭೆಗೆ ಮುನ್ನವೇ ಈ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಗುರುವಾರದ ಬಳಿಕ ಜನದಟ್ಟಣೆ ತಡೆಯುವ ನಿಯಮ ರೂಪಿಸಿ ಕಾಂಗ್ರೆಸ್ ಪಾದಯಾತ್ರೆ ಮಂಕು ಮಾಡುವ ಲೆಕ್ಕಾಚಾರ ಆರಂಭವಾಗಿದೆ.