Advertisement

ಹೆತ್ತವರ ನೋಡಿಕೊಳ್ಳದ ಮಕ್ಕಳಿಗೆ ಆರು ತಿಂಗಳು ಜೈಲು

06:00 AM May 13, 2018 | Team Udayavani |

ಹೊಸದಿಲ್ಲಿ: ವಯಸ್ಸಾಗಿರುವ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೆ ಇರುವ ಹಾಗೂ ಅವರನ್ನು ಅವಹೇಳನ ಮಾಡುವ ಮಕ್ಕಳು ಇನ್ನು ಮೂರು ಅಲ್ಲ, ಆರು ತಿಂಗಳ ಜೈಲು ಶಿಕ್ಷೆ  ಎದುರಿಸಬೇಕಾಗಬಹುದು. ಹೆತ್ತವರು ಮತ್ತು ಹಿರಿಯ ನಾಗರಿಕರ ಕ್ಷೇಮಪಾಲನೆ ಹಾಗೂ ಕಲ್ಯಾಣ ಕಾಯ್ದೆ 2007ಕ್ಕೆ ತಿದ್ದುಪಡಿ ತರಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಅದು ಜಾರಿಯಾದರೆ ಹೆತ್ತವರನ್ನು ದೂರ ಮಾಡುವ ಮಕ್ಕಳು ಹೆಚ್ಚಿನ ಅವಧಿಯ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

Advertisement

ಹೆತ್ತವರಿಗಾಗಿ ಮಕ್ಕಳು ನೀಡುವ 10 ಸಾವಿರ ರೂ.ಗಳನ್ನು ಅವರವರ ಆದಾಯಕ್ಕನು ಸಾರವಾಗಿ ಪರಿಷ್ಕರಿಸಲೂ ನಿರ್ಧರಿಸಲಾಗಿದೆ. ಬದಲಾಗಿರುವ ಸಾಮಾಜಿಕ ಸ್ಥಿತಿಗತಿಗೆ ಅನು ಗುಣವಾಗಿ ಬದಲಾವಣೆ ಮಾಡಿ “ಹೆತ್ತವರು ಮತ್ತು ಹಿರಿಯ ನಾಗರಿಕರ ಕಲ್ಯಾಣದ ಕರಡು ಮಸೂದೆ 2018′ ಎಂದು ಹೆಸರಿಸಲಾಗಿದೆ. ಕೇಂದ್ರ ಸಂಪುಟದಲ್ಲಿ ಅದಕ್ಕೆ ಒಪ್ಪಿಗೆ ಸಿಕ್ಕಿದ ಕೂಡಲೇ 2007ರ ಕಾಯ್ದೆ ಸ್ಥಾನದಲ್ಲಿ ಹೊಸ ಕಾಯ್ದೆ ಜಾರಿಯಾಗಲಿದೆ.

ವ್ಯಾಖ್ಯೆ ವಿಸ್ತರಣೆ
ಕರಡು ಮಸೂದೆಯಲ್ಲಿ  ಮಕ್ಕಳು ಎಂಬ ಪದದ ವ್ಯಾಖ್ಯೆಯನ್ನು ವಿಸ್ತರಿಸಲಾಗುತ್ತದೆ. ದತ್ತು ಮಕ್ಕಳು, ಮಲಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಹೆತ್ತವರ ಜತೆಗೂಡಿ ಪ್ರತಿನಿಧಿಸುವ ಅಪ್ರಾಪ್ತ ವಯಸ್ಕ ಮಕ್ಕಳೂ ತಿದ್ದುಪಡಿ ಮಸೂದೆಯಲ್ಲಿ “ಮಕ್ಕಳು’ ಎಂಬ ವ್ಯಾಖ್ಯೆಯ ವ್ಯಾಪ್ತಿಗೆ ಬರುವಂತೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಹಾಲಿ ಇರುವ ಕಾಯ್ದೆ ಯಲ್ಲಿ ಸ್ವಂತ ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ಮಾತ್ರ ಮಕ್ಕಳು ಎಂದು ಪರಿಗಣಿಸಲಾಗುತ್ತಿದೆ.

10 ಸಾವಿರ ರೂ.ಗಿಂತ ಹೆಚ್ಚು 
ಹಿರಿಯ ನಾಗರಿಕರಿಗೆ ಮತ್ತು ಹೆತ್ತವರಿಗೆ ನೆಮ್ಮದಿ ನೀಡುವ ವಿಚಾರವೆಂದರೆ, ಮಕ್ಕಳು ಪ್ರತಿ ತಿಂಗಳು ಹೆತ್ತವರಿಗೆ ನೀಡಬೇಕಾದ ಜೀವನ ನಿರ್ವಹಣ ವೆಚ್ಚಕ್ಕಿದ್ದ 10 ಸಾವಿರ ರೂ.ಗಳ ಗರಿಷ್ಠ ಮಿತಿಯನ್ನು ತೆಗೆದುಹಾಕುವ ಪ್ರಸ್ತಾವವೂ ಇದೆ. ಹೀಗಾಗಿ, ಮಕ್ಕಳ ಆದಾಯಕ್ಕೆ ಅನುಗುಣವಾಗಿ ಜೀವನಾಂಶದ ಮೊತ್ತವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಇದರ ಜತೆಗೆ “ಕ್ಷೇಮಪಾಲನೆ’ ಎನ್ನುವುದರ ವ್ಯಾಪ್ತಿಯಲ್ಲಿ ಆಹಾರ, ಬಟ್ಟೆ, ಮನೆ, ಆರೋಗ್ಯ ಮತ್ತು ಅವರ ಭದ್ರತೆಯೂ ಒಳಗೊಳ್ಳಲಿದೆ ಎಂದು ಖಾತೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. ಒಂದು ವೇಳೆ ಹೆತ್ತವರು ಮತ್ತು ಹಿರಿಯ ನಾಗರಿಕರಿಗೆ ತಮ್ಮ ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಭಾವನೆ ಬಂದರೆ ಕ್ಷೇಮಪಾಲನೆ ಮೇಲ್ಮನವಿ ಪ್ರಾಧಿಕಾರಕ್ಕೆ ಅರಿಕೆ ಮಾಡಿಕೊಳ್ಳುವ ಅವಕಾಶವೂ ಇರುತ್ತದೆ.

ಪ್ರಮುಖ ಅಂಶಗಳು
ದತ್ತು ಮಕ್ಕಳು, ಮಲಮಕ್ಕಳು, ಅಳಿಯಂದಿರು, ಸೊಸೆಯಂದಿರೂ “ಮಕ್ಕಳು’ ಎಂಬ ವ್ಯಾಪ್ತಿಗೆ
ಜೀವನಾಂಶದ ಮೊತ್ತಕ್ಕಿದ್ದ 10 ಸಾವಿರ ರೂ.ಗಳ ಮಿತಿ ತೆಗೆದುಹಾಕುವುದಕ್ಕೂ ಅವಕಾಶ
ಅಂದರೆ, ಮಕ್ಕಳ ಆದಾಯ ಹೆಚ್ಚಿದ್ದರೆ ಜೀವನಾಂಶದ ಮೊತ್ತವೂ ಹೆಚ್ಚಳ
ಕ್ಷೇಮ ಪಾಲನೆ ಎಂಬ ವ್ಯಾಖ್ಯೆಯೂ ವಿಸ್ತರಣೆ
ಹಿರಿಯ ನಾಗರಿಕರಿಗೆ ಸೂಕ್ತ ನೆರವು ಸಿಗದಿದ್ದರೆ ಮೇಲ್ಮನವಿ ಪ್ರಾಧಿಕಾರಕ್ಕೆ ಅರಿಕೆ ಮಾಡಲು ಅವಕಾಶ

Advertisement
Advertisement

Udayavani is now on Telegram. Click here to join our channel and stay updated with the latest news.

Next