Advertisement
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಮತ್ತು ಕುಂದುಕೊರತೆ ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಾಯುಕ್ತ ಮುಂದೆ ಸುಳ್ಳು ಕೇಸು ಹಾಕುವವರ ಸಂಖ್ಯೆ ತೀರಾ ಹೆಚ್ಚುತ್ತಿದೆ, ಇದರಿಂದಾಗಿ ನಿಜವಾದ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಸವಾಲಾಗಿದೆ. ಹಾಗಾಗಿ ಸುಳ್ಳು ಪ್ರಕರಣ ದಾಖಲಿಸುವವರನ್ನು 1ರಿಂದ 3 ವರ್ಷ ಕಾಲ ಜೈಲಿಗೆ ಕಳುಹಿಸಬೇಕಾದೀತು ಎಂದು ಎಚ್ಚರಿಸಿದರು. ಅಧಿಕಾರಿಗಳು ಲೋಕಾ ಯುಕ್ತ ಆದೇಶವನ್ನು ಪರಿಪಾಲಿಸದೆ ಜನರನ್ನು ಸತಾಯಿಸಿದರೆ ಅವರನ್ನೂ ಲೋಕಾಯುಕ್ತ ಕಾಯ್ದೆಯನ್ವಯ ಜೈಲಿಗೆ ಕಳುಹಿಸಬೇಕಾದೀತು ಎಂದರು.
Related Articles
ಭ್ರಷ್ಟಾಚಾರ ಎನ್ನುವುದು ಕ್ಯಾನ್ಸರ್‌ಗಿಂತಲೂ ಅಪಾಯಕಾರಿ. ಖಾಸಗಿ ಆಸ್ಪತ್ರೆಗಳು, ಶಾಲೆಗಳ ಉದ್ಧಾರಕ್ಕಾಗಿ ಸರಕಾರಿ ಆಸ್ಪತ್ರೆಗಳು- ಶಾಲೆಗಳನ್ನು ಹಾಳು ಮಾಡುವ ವ್ಯವಸ್ಥೆಯಿದೆ. ಸರಕಾರಿ ಅಧಿಕಾರಿಗಳಾಗಿ ಉತ್ತಮ ವೇತನ ಪಡೆಯುತ್ತಿದ್ದೀರಿ. ಮತ್ತೇಕೆ ಭ್ರಷ್ಟಾಚಾರ ಮಾಡುತ್ತೀರಿ ಎಂದು ಪ್ರಶ್ನಿಸಿದ ವೀರಪ್ಪ ಅವರು, ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ಜನ ತಿರುಗಿಬೀಳುವ ದಿನ ದೂರವಿಲ್ಲ ಎಂದರು.
Advertisement
ಎಲ್ಲ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ದುರದೃಷ್ಟವಶಾತ್ ಅನೇಕ ಕಡೆಗಳಲ್ಲಿ ದುರಾಡಳಿತ ನಡೆಯುತ್ತಿದೆ ಎಂದರು.
ನಮ್ಮ ದೇಶಕ್ಕೆ ಸಂವಿಧಾನವೇ ಭಗವದ್ಗೀತೆಯಂತೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 78 ವರ್ಷ ಕಳೆದರೂ ಸಂವಿಧಾನದ ನಾಲ್ಕು ಸ್ತಂಭಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಸರಿಯಾಗಿ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿಲ್ಲ ಎನ್ನುವ ನೋವಿದೆ. ಜನರಿಗೆ ಈಗಲೂ ನ್ಯಾಯ ದೊರೆಯುತ್ತಿಲ್ಲ. ಸರಕಾರದ ಸವಲತ್ತುಗಳು ಅರ್ಹರಿಗೆ ದೊರೆಯದೆ ಉಳ್ಳವರು ಅದರ ದುರುಪಯೋಗ ಮಾಡುವಂತಾಗಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ನ್ಯಾ| ವೀರಪ್ಪ ಹೇಳಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ, ಲೋಕಾಯುಕ್ತ ಉಪನಿಬಂಧಕ ರಾದ ಕೆ.ಎಂ. ರಾಜಶೇಖರ್, ಕೆ.ಎಂ. ಬಸವರಾಜಪ್ಪ,, ಅರವಿಂದ ಎನ್.ವಿ., ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಜಿಲ್ಲಾ ಎಸ್‌ಪಿ ಯತೀಶ್ ಎನ್., ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ, ಜಿಪಂ ಸಿಇಒ ಡಾ| ಆನಂದ್, ಡಿಸಿಎಫ್ ಆ್ಯಂಟನಿ ಮರಿಯಪ್ಪ ಉಪಸ್ಥಿತರಿದ್ದರು.
ಸ್ಥಳದಲ್ಲೇ ದೂರು ಅರ್ಜಿ ವಿಚಾರಣೆಬೆಳಗ್ಗೆ 11.30ರ ಬಳಿಕ ಆರಂಭಗೊಂಡ ಅಹವಾಲು ಸ್ವೀಕಾರ, ರಾತ್ರಿ ವರೆಗೂ ನಡೆಯಿತು. ಪ್ರತಿಯೊಬ್ಬರ ದೂರುಗಳನ್ನು ವೈಯಕ್ತಿಕವಾಗಿ ಆಲಿಸಿದ ಅವರು, ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವುದಕ್ಕೆ ಸಮಯ ಮಿತಿ ನಿಗದಿಪಡಿಸಿ ಸೂಚನೆ ನೀಡಿದರು. ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ಹೇಳಿದರು. ಬಜ್ಪೆ ಪಟ್ಟಣ ಪಂಚಾಯತ್‌ನಲ್ಲಿ ತ್ಯಾಜ್ಯ ವಿಲೇವಾರಿ ಗುತ್ತಿಗೆಯ ಬಾಕಿ 2.63 ಲಕ್ಷ ರೂ. ಪಾವತಿ ಮಾಡಿಲ್ಲ ಎಂದು ಗುತ್ತಿಗೆದಾರ ರಾಬರ್ಟ್‌ಎಂಬವರು ದೂರು ನೀಡಿದ್ದು, ಒಂದು ತಿಂಗಳೊಳಗೆ ಅದನ್ನು ಪಾವತಿಸುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ನ್ಯಾ| ವೀರಪ್ಪ ಸೂಚಿಸಿದರು. ಹಳೆಯಂಗಡಿ ವ್ಯಾಪ್ತಿಯಲ್ಲಿ ಡೋರ್ ನಂಬರ್ ನೀಡಲು ಸತಾಯಿಸುತ್ತಿದ್ದ ಪ್ರಕರಣದಲ್ಲಿ ತಿಂಗಳೊಳಗೆ ಡೋರ್ ನಂಬರ್ ನೀಡದಿದ್ದರೆ 6 ತಿಂಗಳು ಜೈಲಿಗೆ ಕಳುಹಿಸುವುದಾಗಿ ಹಳೆಯಂಗಡಿ ಪಿಡಿಒಗೆ ಎಚ್ಚರಿಕೆಯಿತ್ತರು. ಸ್ಮಾರ್ಟ್‌ಸಿಟಿಯ ಜಲಮುಖಿ ಯೋಜನೆಯವರು ಹಸಿರು ನ್ಯಾಯಾ ಧಿಕರಣದ ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ನಾಗರಿಕರ ದೂರಿಗೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಉಲ್ಲಂಘನೆಯಾಗುವುದಾದರೆ ಅಲ್ಲೇ ಮೇಲ್ಮನವಿ ಸಲ್ಲಿಸಿ ಎಂದು ಸೂಚಿಸಿದರು. ಸ್ಟೇಟ್‌ಬ್ಯಾಂಕ್‌ನಿಂದ ಪಡೀಲ್ ಹಾಗೂ ಸ್ಟೇಟ್‌ಬ್ಯಾಂಕ್ ಅಡ್ಯಾರ್ 2, ರೈಲ್ವೇ ಸ್ಟೇಷನ್‌ನಿಂದ ನಂತೂರು, ಮರೋಳಿ, ಸುರತ್ಕಲ್ ಖಾಸಗಿ ಬಸ್ ಐದು ವರ್ಷದಿಂದ ಸ್ಥಗಿತಗೊಂಡಿದ್ದು, ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಶಾಶ್ವತವಾಗಿ ಓಡಿಸುವಂತಾಗಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ಖಾಸಗಿ ಬಸ್‌ನವರಿಗೆ ನೋಟಿಸ್ ನೀಡಿ, ಮುಂದೆ ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಉಪಲೋಕಾಯುಕ್ತರು ಸೂಚಿಸಿದರು. 190 ಅರ್ಜಿ ವಿಲೇವಾರಿ
ಮಂಗಳೂರು: ಉಪಲೋಕಾಯುಕ್ತ ನ್ಯಾ|ಮೂ.ವೀರಪ್ಪ ಅವರು ಸೋಮವಾರ ಮಂಗಳೂರಿನಲ್ಲಿ ನಡೆಸಿದ ದ.ಕ. ಜಿಲ್ಲಾ ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಒಟ್ಟು 190 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ಆಗಮಿಸುವ ನಾಗರಿಕರ ದೂರು ಅರ್ಜಿಸ್ವೀಕರಿಸಲು ಸಭಾಂಗಣದ ಹೊರಗಡೆಯೇ ಪಂಡಾಲ್ ಹಾಕಿ, ಅಧಿಕಾರಿಗಳು ಹೆಲ್ಪ್ಡೆಸ್ಕ್ ವ್ಯವಸ್ಥೆ ಮಾಡಿದ್ದರು. ಅವರ ಸರದಿ ಬಂದಾಗ ಸಭಾಂಗಣದ ಒಳಗೆ ಬಂದು ಉಪಲೋಕಾಯುಕ್ತರ ಮುಂದೆಯೇ ಕುಳಿತು ತಮ್ಮ ಅಹವಾಲು ಹೇಳಲು, ಅವರ ಆಕ್ಷೇಪ ಇರುವ ಅಧಿಕಾರಿಯನ್ನೂ ಅಲ್ಲೇ ಕರೆಸಿ ಸಮಸ್ಯೆ ವಿಲೇವಾರಿ ಮಾಡಲಾಗುತ್ತಿತ್ತು.
ಮಧ್ಯಾಹ್ನ ವರೆಗೆ ಉಪಲೋಕಾಯುಕ್ತರೊಬ್ಬರ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಮಧ್ಯಾಹ್ನದ ಬಳಿಕ ಉಪಲೋಕಾಯುಕ್ತರು, ಅವರ ಕಚೇರಿಯ ಇಬ್ಬರು ಉಪನಿಬಂಧಕರು ಸಹಿತ ಮೂರು ಪೀಠಗಳಾಗಿ ವಿಂಗಡಿಸಿ ಅರ್ಜಿ ವಿಚಾರಣೆ ಕೈಗೊಳ್ಳಲಾದ ಕಾರಣ ಪ್ರಕ್ರಿಯೆಗೆ ವೇಗ ಸಿಕ್ಕಿತು. ಸಭೆಗೂ ಮಳೆಕಾಟ!
ಉಪಲೋಕಾಯುಕ್ತರ ಅಹವಾಲು ಸಭೆಗೂ ಸೋಮವಾರ ಸಂಜೆ ಮಳೆ ಕಾಟಕೊಟ್ಟಿತು. ತೀವ್ರ ಮಳೆಯಾದ್ದರಿಂದ ಬಾಗಿಲಿನ ಮೂಲಕ ಮಳೆ ನೀರು ಒಳ ನುಗ್ಗಿ ಅಧಿಕಾರಿ, ಮಾಧ್ಯಮ ಗ್ಯಾಲರಿ ಭಾಗದಲ್ಲಿ ಸೇರಿಕೊಂಡಿತು. ಬಳಿಕ ಸಿಬಂದಿ ಮಳೆ ನೀರು ಹೊರಹಾಕಿದರು. ಕೆಲವು ವಿಚಾರ ಲೋಕಾಯುಕ್ತಕ್ಕೆ ಶಿಫಾರಸು
ನಂತೂರು, ಕೆಪಿಟಿ ರಸ್ತೆ ಮೇಲ್ಸೇತುವೆ ಪರ್ಯಾಯ ವ್ಯವಸ್ಥೆ ವಿಚಾರದಲ್ಲಿ ಜಿಲ್ಲಾಧಿಕಾರಿಯವರು ತಮ್ಮ ಸಲಹೆ ಸ್ವೀಕರಿಸಿಲ್ಲ ಎಂದು ಸಿಟಿಜನ್ ಫಾರ್ ಸಸ್ಟೆನೆಬಲ್ ಡೆವಲಪ್‌ಮೆಂಟ್‌ನ ಪ್ರತಿನಿಧಿಗಳು ಆಕ್ಷೇಪಿಸಿದರು. ಈ ಅರ್ಜಿಯನ್ನು ಸ್ವೀಕರಿಸಲಾಗಿದ್ದು ಲೋಕಾಯುಕ್ತಕ್ಕೆ ಹೆಚ್ಚಿನ ತನಿಖೆಗೆ ಶಿಫಾರಸು ಮಾಡಿದ್ದಾರೆ. ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗದ ಬಗ್ಗೆಯೂ ಆಕ್ಷೇಪ ಸಲ್ಲಿಸಿದ್ದು ಲೋಕಾಯುಕ್ತ ತನಿಖೆ ನಡೆಸಲಿದ್ದಾರೆ.