ಸಂಬಂಧಿಸಿದ ಅಷ್ಟೂ ಪರಿಕರಗಳು ಉಪಯೋಗ ಶೂನ್ಯವಾಗುತ್ತಿದೆ.
Advertisement
ಕೋವಿಡ್ ಸಂದರ್ಭ ಸೇರಿದಂತೆ ಚಿಕಿತ್ಸೆಗೆ ಹೆಸರುವಾಸಿಯಾದ ಕುಂದಾಪುರ ಉಪವಿಭಾಗ ಆಸ್ಪತ್ರೆ ಪಕ್ಕದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಟ್ಟಿಸಿಕೊಟ್ಟ 6 ಕೋ.ರೂ.ಗೂ ಅಧಿಕ ವೆಚ್ಚದ ಹೊಸ ಕಟ್ಟಡವಿದೆ. ಇದರಲ್ಲಿ ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಿಭಾಗ ಕಾರ್ಯಾಚರಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ಅತೀ ಹೆಚ್ಚು ಹೆರಿಗೆ ಮಾಡಿಸಿದ ಕೀರ್ತಿ ಇಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯರದ್ದು. 171 ಸೋಂಕಿತ ಮಹಿಳೆಯರಿಗೆ ಯಶಸ್ವಿ ಚಿಕಿತ್ಸೆ, ಹೆರಿಗೆ ಮಾಡಿಸಲಾಗಿದೆ. ಕೋವಿಡ್ ಸಂದರ್ಭ ಹೆರಿಗೆ ಆಸ್ಪತ್ರೆಯನ್ನು ಕೋಟ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲಾಮಟ್ಟದಿಂದ ಹೊರತಾಗಿ ಕೋವಿಡ್ ಆಸ್ಪತ್ರೆ ಆರಂಭವಾದುದೂ ಕುಂದಾಪುರ ದಲ್ಲೇ. ಅದು ಕೂಡ ಚಿಕಿತ್ಸೆಯಲ್ಲಿ ರಾಜ್ಯದ ಗಮನ ಸೆಳೆದಿತ್ತು. ಅತೀ ಹೆಚ್ಚು ರೋಗಿಗಳು ಗುಣಮುಖರಾಗಿದ್ದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡುವಿಕೆಯಲ್ಲಿ ರಾಜ್ಯದಲ್ಲಿ 20 ಆಸ್ಪತ್ರೆ ಗಳ ಪೈಕಿ, ಉಡುಪಿ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿ ಈ ಆಸ್ಪತ್ರೆ ಇದೆ. ಭಟ್ಕಳದಿಂದ ಕೂಡ ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಾರೆ. ಅವಿಭಜಿತ ಕುಂದಾಪುರ ತಾಲೂಕಿನ ಏಕೈಕ ಸರಕಾರಿ ದೊಡ್ಡ ಆಸ್ಪತ್ರೆ. ಕೊರೊನೋತ್ತರದಲ್ಲೂ ಚಿಕಿತ್ಸೆಗೆ ಬರುವವರ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ದಿನಕ್ಕೆ 500ರಷ್ಟು ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಾರೆ. ಈ ವರ್ಷ ಜನವರಿಯಲ್ಲಿ 4,200, ಫೆಬ್ರವರಿಯಲ್ಲಿ 4,069, ಮಾರ್ಚ್‌ನಲ್ಲಿ 3,316, ಎಪ್ರಿಲ್‌ನಲ್ಲಿ 2,120, ಮೇಯಲ್ಲಿ 3,236, ಜೂನ್‌ನಲ್ಲಿ 1,730 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಕಳೆದ ಎರಡು ಮೂರು ತಿಂಗಳಿಂದ ಇಲ್ಲಿ ಕರ್ತವ್ಯ ನಿರ್ವಹಿಸುವ ದಂತವೈದ್ಯರನ್ನು ಜಿಲ್ಲಾ ಕೊರೊನಾ ಕಾಲ್‌ಸೆಂಟರ್‌ಗೆ ಕರ್ತವ್ಯದ ಮೇರೆಗೆ ನಿಯೋಜಿಸಲಾಗಿದೆ. ಕಾಲ್‌ಸೆಂಟರ್‌ನಲ್ಲಿ ಕೂಡ ವೈದ್ಯಕೀಯದ ಮಾಹಿತಿ ಇರುವವರೇ ಬೇಕಾದ ಕಾರಣ, ಎಂಬಿಬಿಎಸ್ ವೈದ್ಯರ ತುರ್ತು ಸೇವೆ ಕೊರೊನಾ ಸಂದರ್ಭ ಅವಶ್ಯ ಇರುವ ಕಾರಣ ದಂತವೈದ್ಯರ ನೇಮಕ ಮಾಡಿರುವ ಸಾಧ್ಯತೆಯಿದೆ. ಅದೇನೇ ಇದ್ದರೂ ಕುಂದಾಪುರ ಆಸ್ಪತ್ರೆಯಲ್ಲಿ ದಂತವೈದ್ಯರಿಲ್ಲದೇ ರೋಗಿಗಳು ಹಲ್ಲು ನೋವಿನೊಂದಿಗೆ ಮರಳುವಂತಾಗಿದೆ. ವಿವಿಧೆಡೆಯಿಂದ ಭೇಟಿ
ಉಪವಿಭಾಗ ಆಸ್ಪತ್ರೆಗೆ ಭಟ್ಕಳ, ಸಾಗರ, ಬೈಂದೂರು, ಹೊಸಂಗಡಿ ಮೊದಲಾದೆಡೆಯಿಂದ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಬಹುತೇಕ ಎಲ್ಲ ಚಿಕಿತ್ಸೆಯೂ ಇಲ್ಲಿ ದೊರೆಯುವ ಕಾರಣ ಇದರ ಹೊರತಾಗಿ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಪ್ರಮೇಯ ಬರುವುದಿಲ್ಲ. ಕಳೆದ ವರ್ಷ ಕೋವಿಡ್ ಸಂದರ್ಭ ಸರಕಾರವೇ ದಂತ ಚಿಕಿತ್ಸಾಲಯಗಳನ್ನು ಮುಚ್ಚಲು ನಿರ್ಧರಿಸಿತ್ತು. ಕೋವಿಡ್ ಹರಡುವ ಸಂದರ್ಭ ದಂತ ಚಿಕಿತ್ಸೆ ಕಟ್ಟುನಿಟ್ಟಾಗಿ ನಡೆಸಲ್ಪಡುತ್ತದೆ. ಆದ್ದರಿಂದ ಎಲ್ಲ ಕಡೆ ದಂತ ಚಿಕಿತ್ಸೆಗಾಗಿ ಹುಡುಕುತ್ತಾ ಕೂರುವ ಬದಲು ಸರಕಾರಿ ಆಸ್ಪತ್ರೆಯಲ್ಲಿ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಜನ ಆಗಮಿಸುತ್ತಾರೆ. ಹಾಗೆ ಆಗಮಿಸಿದಾಗ ಅವರಿಗೆ ಸುಸಜ್ಜಿತ ದಂತ ಚಿಕಿತ್ಸಾ ವಿಭಾಗ ಕಾಣಿಸುತ್ತದೆ. ಆಧುನಿಕ ಪರಿಕರಗಳು ಕಾಣಿಸುತ್ತವೆ. ಆದರೆ ದಂತವೈದ್ಯರು ಇಲ್ಲ. ಕೇಳಿದರೆ ಜಿಲ್ಲಾ ಕಾಲ್ ಸೆಂಟರ್‌ಗೆ ಅವರನ್ನು ನಿಯೋಜಿಸಲಾಗಿದೆ ಎಂಬ ಉತ್ತರ ಬರುತ್ತಿದೆ.
Related Articles
ತುರ್ತು ಅಗತ್ಯಕ್ಕಾಗಿ ಕುಂದಾಪುರ ಆಸ್ಪತ್ರೆಯ ದಂತವೈದ್ಯರನ್ನು ಜಿಲ್ಲಾ ಕಾಲ್‌ಸೆಂಟರ್‌ಗೆ ನಿಯೋಜಿಸಲಾಗಿತ್ತು. ಕೊರೊನಾ ಪ್ರಕರಣಗಳ, ಕರೆಗಳ ಸಂಖ್ಯೆಯಲ್ಲಿ ವ್ಯತ್ಯಯ ಆದ ಕಾರಣ ಎರಡು ದಿನಗಳಲ್ಲಿ ಅವರನ್ನು ಮರಳಿ ಕರ್ತವ್ಯದ ಸ್ಥಳವಾದ ಕುಂದಾಪುರ ಆಸ್ಪತ್ರೆಗೆ ಕಳುಹಿಸಲಾಗುವುದು. ಕೊರೊನಾ ಸಂದರ್ಭ ದಂತಚಿಕಿತ್ಸೆ ಸೀಮಿತವಾಗಿರುತ್ತದೆ ಹೊರತು ರೋಗಿಗಳಿಗೆ ತೊಂದರೆ ಮಾಡುವ ಉದ್ದೇಶ ಇಲ್ಲ.
– ಡಾ| ನಾಗಭೂಷಣ ಉಡುಪ,
ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ
Advertisement