Advertisement
ಕುಂದಾಪುರ: ಒಂದು ಕಾಲು ಶತಮಾನದೆಡೆಗೆ ದಾಪುಗಾಲು ಇಡುತ್ತಿರುವ ಶಂಕರನಾರಾಯಣ (ಗೋಳಿ ಕಟ್ಟೆ) ಮಾದರಿ ಹಿರಿಯ ಪ್ರಾಥಮಿಕ ಶಾಲೆ 1896ರಲ್ಲಿ ಊರಿನ ದಿ| ಆನಂದ ರಾಯ ಯಡೇರಿ ಅವರಿಂದ ಏಕೋಪಾಧ್ಯಾಯ ಶಾಲೆಯಾಗಿ ದೇಗುಲದ ದರ್ಬಾರ್ ಹಾಲ್ (ಸಂವಾದ ಮಂಟಪ)ನಲ್ಲಿ ಪ್ರಾರಂಭವಾಯಿತು. ಹಲವು ವರ್ಷ ದೇಗುಲದಲ್ಲೇ ನಡೆದು ಅನಂತರ ಬಂಗ್ಲೆ ಗುಡ್ಡೆ (ಈಗಿನ ಉಪಖಜಾನೆ)ಯಲ್ಲಿ ಮುಂದುವರಿದು ಮುಳಿಹುಲ್ಲಿನ ಮಾಡು ಶಿಥಿಲಗೊಂಡಾಗ ಊರವರ ನೆರವಿನಿಂದ ಹಂಚಿನ ಮಾಡಿಗೆ ಬದಲಾಯಿತು. 1900ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಯಿತು.
1990ರಲ್ಲಿ ಈಗ ಇರುವ ಸಿದ್ದಾಪುರ ರಸ್ತೆಯ ಶಾಲಾ ಕಟ್ಟಡದ ಒಂದು ಪಾರ್ಶ್ವ ಜಖಂ ಆದಾಗ, 2.50 ಎಕರೆ ವಿಶಾಲವಾದ, ಪೇಟೆಗೆ ಸಮೀಪದ ಗುಡ್ಡೆಗೆ ಶಾಲೆ ಸಂಪೂರ್ಣ ಸ್ಥಳಾಂತರವಾಗಿದೆ. ಶಿಕ್ಷಣ ಸಚಿವರಾಗಿದ್ದಾಗ ಡಾ| ಎಂ.ವೀರಪ್ಪ ಮೊಲಿ ಭೇಟಿ ನೀಡಿದ್ದರು. 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇದ್ದಾಗ ಮುಖ್ಯೋಪಾಧ್ಯಾಯರಾಗಿದ್ದ ನಾಗರಾಜ ಮಿತ್ತಂತಾಯರ ನೇತೃತ್ವದಲ್ಲಿ ತಾಲೂಕಿನಲ್ಲಿಯೇ
ಬೇರೆ ಶಾಲೆಗಳು ಗಮನಿಸುವಂತೆ ಅಂಕ ಗಳಿಸುತ್ತಿತ್ತು.
Related Articles
ಅಂದು ಹಾಲಾಡಿ, ಸಿದ್ದಾಪುರ, ಕುಳಂಜೆ,ಉಳ್ಳೂರು- 74 ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಮಾಜಿ ಶಾಸಕರಾದ ಎ. ಜಿ. ಕೊಡ್ಗಿ , ಜಿ. ಎಸ್. ಆಚಾರ್, ಗುತ್ತಿಗೆದಾರ ಮತ್ತು ಉದ್ಯಮಿ ಚಾರಮಕ್ಕಿ ನಾರಾಯಣ ಶೆಟ್ಟಿ , ಜಿಲ್ಲಾಧಿಕಾರಿಯಾಗಿದ್ದ ಹಾಲಾಡಿ ನಾಗರಾಜ ಮಿತ್ತಂತಾಯ, ವರನಟ ಡಾ| ರಾಜ್‌ಕುಮಾರ್ ಅವರಿಗೆ ನೇತ್ರದಾನಕ್ಕೆ ಪ್ರೇರಣೆಯಾದ ಬೆಂಗಳೂರಿನ ನಾರಾಯಣ ನೇತ್ರಾಲಯದ ವೈದ್ಯ ಚಾರಮಕ್ಕಿ ಡಾ| ಭುಜಂಗ ಶೆಟ್ಟಿ, ಬೆಂಗಳೂರಿನ ಸಿ.ಒ.ಡಿ. ಪೊಲೀಸ್ ಉಪಾಧೀಕ್ಷಕ, ಲೇಖಕ ಚಿಟ್ಟೆ ವೇಣುಗೋಪಾಲ ಹೆಗ್ಡೆ, ಕುಂದಾಪುರದ ಹೃದಯ ತಜ್ಞ ಡಾ| ಕಿಶೋರ್ ಶೆಟ್ಟಿ, ಕುಂದಾಪುರ ಸರಕಾರಿ ಆಸ್ಪತ್ರೆ ಮಕ್ಕಳ ತಜ್ಞೆ ಡಾ| ಶೈಲಜಾ ಪ್ರಭು, ಬಡಗುತಿಟ್ಟಿನ ಭಾಗವತ ಸುರೇಶ ಶೆಟ್ಟಿ, ಶಂಕರನಾರಾಯಣ ತಾ.ರ.ಹೋ.ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಸಹಿತ ನೂರಾರು ಗಣ್ಯರಿಗೆ ವಿದ್ಯಾರ್ಜನೆ ಮಾಡಿದೆ. ಮುಖ್ಯೋಪಾಧ್ಯಾಯರು, 6 ಶಿಕ್ಷಕರಿದ್ದು 275 ವಿದ್ಯಾರ್ಥಿಗಳಿಗೆ ಏರಿಕೆಯಾಗಿದೆ. 2ನೇ ತರಗತಿವರೆಗೆ ಆಂಗ್ಲ ಮಾಧ್ಯಮ ತಲುಪಿದೆ.
Advertisement
ಕೊಡುಗೆ1997 ರ ಶತಮಾನೋತ್ಸವದಲ್ಲಿ ಶಾಲಾ ಸ್ಥಾಪಕ ಮುಖ್ಯೋಪಾಧ್ಯಾಯ ದಿ. ಆನಂದ ರಾಯ ಯಡೇರಿ ಅವರ ಬಂಧು ಹಳೆ ವಿದ್ಯಾರ್ಥಿ ಮಂಜುನಾಥ ಯಡೇರಿ ರಂಗ ಮಂದಿರ ನೀಡಿದರು. 1934ರಿಂದ 1990ರವರೆಗೆ ಶಾಲೆಯಾಗಿದ್ದುದರ ಪಕ್ಕ ಇರುವ ಕಟ್ಟಡ ಬೀಳುವ ಪರಿಸ್ಥಿತಿ ಬಂದಾಗ ಗುಡ್ಡ ಜಾಗಕ್ಕೆ ಸ್ಥಳಾಂತರವಾಯಿತು. ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಅಗತ್ಯವಿದೆ. ಗಂಗಾಧರ ಐತಾಳ್ ಎಂಬ ಶಿಸ್ತಿನ, ಪ್ರೀತಿಯ ಮುಖ್ಯಶಿಕ್ಷಕರಿದ್ದರು. ಶಾಲೆಯ ಹೊರಗೆ ತಪ್ಪುಮಾಡಿದರೂ ಅವರು ಮಕ್ಕಳನ್ನು ತಿದ್ದುತ್ತಿದ್ದರು. ಶಾಲೆಯಲ್ಲಿ ನನ್ನ ಹುಡುಗಾಟಿಕೆ ಹೆಚ್ಚಾಗಿ ಶಾಲೆ ಬದಲಿಸಬೇಕಾಯಿತು. ತುಂಬ ಮಂದಿ ಸ್ನೇಹಿತರನ್ನು, ಮರೆಯಲಾರದ ಶಿಕ್ಷಣವನ್ನೂ ನೀಡಿದ ಶಾಲೆ.
-ಎ.ಜಿ. ಕೊಡ್ಗಿ,ಅಮಾಸೆಬೈಲು,
ಮಾಜಿ ಶಾಸಕರು ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ ಹಾಗೂ ದಾನಿಗಳ ನೆರವಿನಿಂದ ಆಂಗ್ಲಮಾಧ್ಯಮ ನಡೆಯುತ್ತಿದೆ. ಅನಿಲ್‌ಕುಮಾರ್ ಶೆಟ್ಟಿ 6.5 ಲಕ್ಷ ರೂ.ಗಳ ಕೊಠಡಿ, ರಾಮದಾಸ ಉಡುಪರು ನೀರಾವರಿ ವ್ಯವಸ್ಥೆ ಮಾಡಿದ್ದು ಡಿಸೆಂಬರ್‌ನಲ್ಲಿ ಲೋಕಾರ್ಪಣೆಯಾಗಲಿದೆ.
-ಸಂತೋಷ ಕುಮಾರ ಶೆಟ್ಟಿ, ಮುಖ್ಯ ಶಿಕ್ಷಕರು -ಲಕ್ಷ್ಮೀ ಮಚ್ಚಿನ