ಬೆಳಗಾವಿ: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ದುಡುಕಿರುವ ಸರಕಾರ ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿದೆ. ಅವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಸಂವಿಧಾನದ 9ನೇ ಶೆಡ್ನೂಲ್‌ಗೆ ಸೇರಿಸಿ ತಿದ್ದುಪಡಿ ತರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂವಿಧಾನ ತಿದ್ದುಪಡಿ ತರದೇ ಇಲ್ಲಿ ಏನು ಮಾಡಿದರೂ ಪ್ರಯೋಜನವಿಲ್ಲ. ಇಲ್ಲಿ ಕಾನೂನು ತರುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹೇಗಿದ್ದರೂ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಕಾನೂನನ್ನು ಅಲ್ಲಿಗೆ ಕಳುಹಿಸಿ ಅನುಮೋದನೆ ಪಡೆಯಲಿ. ಅದನ್ನು ಬಿಟ್ಟು ನಾವು ಮಾಡಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿ ದುಡುಕಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ನಿಲುವಿನ ಬಗ್ಗೆ ನಮ್ಮ ನಾಯಕರು ಮಾತನಾಡಿದ್ದಾರೆ. ಉಳಿದಂತೆ ಯಾರೂ ಬಂದು ನಮ್ಮ ಬಳಿ ಚರ್ಚೆ ಮಾಡಿಲ್ಲ. ಸರಕಾರ ಮೊದಲು ತನ್ನ ನಿಲುವು ಪ್ರಕಟಿಸಲಿ. ಇದರಲ್ಲಿ ಕಾನೂನು ಅಡಚಣೆಗಳೇನು ಎಂಬುದು ಗೊತ್ತಿಲ್ಲ. ಈ ವಿಚಾರವಾಗಿ ಆಡಳಿತ ಪಕ್ಷ ತೀರ್ಮಾನ ಮಾಡಬೇಕು. ಕಾನೂನು ಏನಿದೆ ಎಂದು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದರು.
ಮೀಸಲಾತಿ ಹೆಚ್ಚಳ ಮಾಡುವಂತೆ ಅನೇಕ ಸಮಾಜಗಳು ಒತ್ತಾಯ ಮಾಡುತ್ತಿವೆ. ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಕುರುಬರು ಹೋರಾಟ ಮಾಡುತ್ತಿದ್ದಾರೆ. ಇನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳದ ವಿಚಾರವಾಗಿ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸಭೆಯಲ್ಲಿ ಸಚಿವರು ಉತ್ತರಿಸಿದ್ದಾರೆ.
ಹೀಗಾಗಿ ಮೀಸಲಾತಿ ವಿಚಾರ ಗೊಂದಲದ ಗೂಡಾಗಿದೆ. ಇದರ ಕಾನೂನು ಅಂಶಗಳನ್ನು ತಿಳಿದು ಕೊಳ್ಳಲು ಎಐಸಿಸಿಯಿಂದ ಒಂದು ಸಮಿತಿ ಮಾಡಲಾಗಿದೆ. ಇದರ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.