ಬೆಂಗಳೂರು: ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ 45 ದಿನಗಳ ಒಳಗೇ ಜಾರಿ ಮಾಡಿದ್ದೇವೆ. ಇದನ್ನು ಪ್ರತಿಯೊಬ್ಬ ಮತದಾರರಿಗೆ ಅರ್ಥ ಮಾಡಿಸಿ, ವಿಧಾನಸಭೆ ಅಧಿವೇಶನದಲ್ಲಿ ಎದೆ ಎತ್ತಿ ಹೆಮ್ಮೆಯಿಂದ ಮಾತನಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಶಾಸಕರಿಗೆ ಹುರಿದುಂಬಿಸಿದರು.
ಸಂಪುಟ ಸಭೆಗೂ ಮುನ್ನ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದರು.
ನಾವು 2013 ಚುನಾವಣೆ ವೇಳೆ ನೋಡಿದ್ದ ಭರವಸೆಗಳನ್ನು ಸರ್ಕಾರ ನಡೆಸಿದ ಐದು ವರ್ಷಗಳಲ್ಲಿ ಈಡೇರಿಸಿ “ನುಡಿದಂತೆ ನಡೆದ ಸರ್ಕಾರ” ಎನ್ನುವ ಹೆಗ್ಗಳಿಕೆ ಗಳಿಸಿದ್ದೇವೆ. ಬಿಜೆಪಿ 2018 ರ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 608 ಭರವಸೆಗಳಲ್ಲಿ ಶೇ 95 ರಷ್ಟನ್ನು ಈಡೇರಿಸಲೇ ಇಲ್ಲ. ಹೀಗಾಗಿ ಬಿಜೆಪಿಗೆ ನಮ್ಮ ಕಡೆ ಬೊಟ್ಟು ಮಾಡುವ ನೈತಿಕತೆಯೇ ಇಲ್ಲ. ಹೀಗಾಗಿ ಅಧಿವೇಶನದಲ್ಲಿ ಸುಳ್ಳುಗಳಿಗೆ ಅವರು ಜೋತು ಬೀಳುತ್ತಾರೆ. ನೀವು ಸರಿಯಾಗಿ ಖಚಿತವಾದ ಧ್ವನಿಯಲ್ಲಿ ಸತ್ಯವನ್ನು ಮಾತನಾಡಿ ಎಂದು ತಿಳಿಸಿದರು.
ಇದನ್ನೂ ಓದಿ:Karnataka Budget: ಮದ್ಯಪ್ರಿಯರಿಗೆ ಶಾಕ್ ನೀಡಿದ ಸಿದ್ದು ಸರ್ಕಾರ; ಅಬಕಾರಿ ತೆರಿಗೆ ಹೆಚ್ಚಳ
2023ರ ಚುನಾವಣೆ ವೇಳೆ ನಾವು ನೀಡಿದ್ದ ಐದು ಗ್ಯಾರಂಟಿಗಳನ್ನೂ ನಾವು ಈಡೇರಿಸಲು ಶುರು ಮಾಡಿದ್ದೇವೆ. ಕೋಟಿಗಟ್ಟಲೆ ಕನ್ನಡಿಗರು ಈಗಾಗಲೇ ನಮ್ಮ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೂ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗುತ್ತಿದ್ದಾರೆ. ಇದನ್ನು ನಾವು ಸ್ವಾಗತಿಸಬೇಕು. ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮತದಾರರು ತಲೆ ಎತ್ತಿ ಹೆಮ್ಮೆ ಪಡುವ ಸಂದರ್ಭವನ್ನು ನಮ್ಮ ಸರ್ಕಾರ ಸೃಷ್ಟಿಸಿದೆ ಎಂದರು.
ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಮತ್ತು ಆಯವ್ಯಯ ಮಂಡಿಸುವುದು ಈ ಬಾರಿ ಸವಾಲಿನದ್ದಾಗಿತ್ತು. ಹೀಗಾಗಿ ನಾನು ಸರಣಿ ಸಭೆಗಳನ್ನು ಅಧಿಕಾರಿಗಳ ಜತೆ ನಡೆಸುತ್ತಿದ್ದೆ. ಈ ಸಂದರ್ಭದಲ್ಲಿ ಶಾಸಕರುಗಳಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಈ ಅಧಿವೇಶನವನ್ನು ಹಳಬರು ಮತ್ತು ನೂತನ ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವಿಷಯ ತಜ್ಞರಾಗಿ, ಅಧ್ಯಯನಶೀಲರಾಗಿ ಸಕಲ ಸಿದ್ದತೆಗಳೊಂದಿಗೆ ಬಂದು ಬಿಜೆಪಿಯವರ ಸುಳ್ಳುಗಳಿಗೆ, ಜೆಡಿಎಸ್ ನವರ ಡ್ರಾಮಾಗಳಿಗೆ ಅರ್ಥಪೂರ್ಣವಾಗಿ ಉತ್ತರಿಸಿ ಎಂದು ಸಲಹೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಎಲ್ಲಾ ಸಚಿವರು ಮತ್ತು ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿದ್ದರು.