Advertisement
ಕರ್ನಾಟಕ ಅರಣ್ಯ ಇಲಾಖೆ ಪ್ರತೀ ವರ್ಷ ಮಾನ್ಸೂನ್‌ನಲ್ಲಿ ಅರಣ್ಯ ಭೂಮಿ, ರಸ್ತೆಬದಿ ಮತ್ತು ಸರಕಾರಿ ಹಾಗೂ ಖಾಸಗಿ ಜಾಗಗಳಲ್ಲಿ ನೆಡುತೋಪು ನಿರ್ಮಿಸುತ್ತದೆ. ಆದರೆ ಸರಕಾರವು 2021-22ರ ಅವಧಿಯಲ್ಲಿ ಹಸುರೀಕರಣಕ್ಕೆ ಅನುದಾನದ ಹಂಚಿಕೆಯನ್ನು ಅತ್ಯಂತ ಕಡಿಮೆ ಮಾಡಿದೆ. ವಿಸ್ತೀರ್ಣದ ಗುರಿಯನ್ನೂ ಕುಗ್ಗಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. 70ರಷ್ಟು ಅನುದಾನ ಹಾಗೂ ಗುರಿ ಕಡಿತವಾಗಿದೆ.
Related Articles
Advertisement
ಕುಂದಾಪುರ ವಿಭಾಗದ ಎಂಟು ಅರಣ್ಯ ವಲಯಗಳಲ್ಲಿ 8 ನರ್ಸರಿಗಳಿವೆ. ಬೈಂದೂರು ವಲಯದ ಸರ್ಪಮನೆ, ಕುಂದಾಪುರದ ಮಾವಿನಗುಳಿ, ಶಂಕರನಾರಾಯಣದ ಮಟ್ಕಲ್ ಗುಡ್ಡೆ, ಉಡುಪಿಯ ಬೈಕಾಡಿ, ಹೆಬ್ರಿಯ ಮಡಾಮಕ್ಕಿ, ಕಾರ್ಕಳದ ಶಿರ್ಲಾಲು, ಮೂಡಬಿದಿರೆಯ ಕುತ್ಲೂರು ಮತ್ತು ವೇಣೂರಿನ ಅಳದಂಗಡಿ ಸಸ್ಯಕ್ಷೇತ್ರಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ. ಕಳೆದ ಬಾರಿ ಇಡೀ ವಿಭಾಗದಲ್ಲಿ ಒಟ್ಟು 17.46 ಲಕ್ಷ ಗಿಡಗಳನ್ನು ಬೆಳೆಸಿದರೆ ಈ ಬಾರಿ ಆ ಗುರಿ 5.21 ಲಕ್ಷಕ್ಕೆ ಇಳಿದಿದೆ. ಇವುಗಳಲ್ಲಿ ಕಳೆದ ಸಾಲಿನಲ್ಲಿ 3.29 ಲಕ್ಷ ಗಿಡಗಳು ಸಾರ್ವಜನಿಕರಿಗೆ ಲಭ್ಯವಾಗಿತ್ತು. ಈ ಸಾಲಿನಲ್ಲಿ ಸಾರ್ವಜನಿಕರಿಗೆ ಸಿಗುವುದು ಕೇವಲ 81 ಸಾವಿರ ಸಸಿಗಳು ಮಾತ್ರ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
100 ಕೋ.ರೂ. ವಿನಿಯೋಗ :
ಅರಣ್ಯ ಇಲಾಖೆ ಜೂನ್-ಜುಲೈನಲ್ಲಿ ಗಿಡಗಳ ನಾಟಿ, ವಿತರಣೆ ಮಾಡುತ್ತದೆ. ಆದರೆ ಗಿಡಗಳ ತಯಾರಿ ಡಿಸೆಂಬರ್, ಜನವರಿಯಿಂದಲೇ ಆರಂಭವಾಗುತ್ತದೆ. ಇಲಾಖೆಯ ಸಸ್ಯಕ್ಷೇತ್ರಗಳಲ್ಲಿ ವಿವಿಧ ಜಾತಿ ಮರಗಳ ಬೀಜಗಳನ್ನು ಆರಿಸಿ, ಸಸಿಗಳನ್ನು ತಯಾರಿಸಲಾಗುತ್ತದೆ. ಅರಣ್ಯ ಇಲಾಖೆ ಇಡೀ ರಾಜ್ಯಾದ್ಯಂತ ಪ್ರತಿ ವರ್ಷ ನೆಡುತೋಪು ಚಟುವಟಿಕೆಗಾಗಿ ಅಂದಾಜು 100 ಕೋ.ರೂ.ಗಳನ್ನು ವಿನಿಯೋಗಿಸುತ್ತಿತ್ತು. ಅದರಲ್ಲಿ ಶೇ. 70ರಷ್ಟು ಕಡಿತವಾಗಿ ಹಸುರೀಕರಣಕ್ಕೆ ಕತ್ತರಿ ಬಿದ್ದಿರುವುದು ಅರಣ್ಯ, ಪ್ರಕೃತಿಯ ಮೇಲೆ ಪರಿಣಾಮ ಬೀಳಲಿದೆ. ಹೊಸ ಪ್ಲ್ಯಾಂಟೇಶನ್ ಕಡಿಮೆಯಾದರೂ ಅವಧಿ ಪೂರ್ಣಗೊಂಡಿರುವ ನೆಡುತೋಪುಗಳಲ್ಲಿ ಮರಗಳ ಕಟಾವು ನಡೆಯುವುದರಿಂದ ಅರಣ್ಯದ ಪ್ರಮಾಣ ಗಣನೀಯವಾಗಿ ಏರುಪೇರಾಗುವ ಆತಂಕವನ್ನು ಪರಿಸರ ತಜ್ಞರು ಹಾಗೂ ಪರಿಸರ ಪ್ರೇಮಿಗಳು ವ್ಯಕ್ತಪಡಿಸುತ್ತಿದ್ದಾರೆ.
ಈ ವರ್ಷ ಕೋವಿಡ್ ಕಾರಣಗಳಿಂದ ಫಂಡ್ ಕೊರತೆಯಾಗಿ ಪ್ಲ್ಯಾಂಟೇಶನ್ ಕಡಿಮೆಯಾಗಿದೆ. ಕಳೆದ ವರ್ಷ 1,600 ಹೆಕ್ಟೇರ್ ಪ್ರದೇಶದಲ್ಲಿ ಪ್ಲ್ಯಾಂಟೇಶನ್ ನಡೆದಿದ್ದರೆ ಈ ಬಾರಿ ಒಟ್ಟು 500 ಹೆ.ನಲ್ಲಿ ಅರಣ್ಯ ಇಲಾಖೆ ಪ್ಲ್ಯಾಂಟೇಶನ್ ನಿಗದಿಪಡಿಸಿದೆ. ಇಲಾಖೆಯಿಂದ ಗಿಡಗಳ ನಾಟಿ ಮಾತ್ರವಲ್ಲದೇ ಸಾರ್ವಜನಿಕರಿಗೆ ವಿತರಣೆಗೂ ಗಿಡಗಳು ಕಡಿಮೆಯಾಗುತ್ತವೆ. ಈ ಹಿಂದಿನ ವರ್ಷಗಳಲ್ಲಿ ನಿಗದಿಗೊಳಿಸುವುದರ ಮೂರನೇ ಒಂದು ಭಾಗದಷ್ಟು ಈ ವರ್ಷ ಗುರಿ ಕೊಟ್ಟಿದೆ. – ಆಶೀಶ್ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆ ಕುಂದಾಪುರ ವಿಭಾಗ