ಹುಬ್ಬಳ್ಳಿ: ಜನಪ್ರತಿನಿಧಿಗಳು ಮತಗಳಿಗಾಗಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿರುವ ಸಂದರ್ಭದಲ್ಲಿ ಗೋ ಸಂರಕ್ಷಣೆ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾದರೆ ಸರಕಾರಗಳ ಗಮನ ಸೆಳೆಯಬಹುದು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಹವ್ಯಕ ಸಭಾಭವನದಲ್ಲಿ ಮಂಗಳವಾರ ನಡೆದ ಗೋ ಪರಿವಾರ ಸದಸ್ಯರ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಗೋ ಸಂರಕ್ಷಣೆಗಾಗಿ ಹಮ್ಮಿಕೊಂಡ ಅಭಿಯಾನದಲ್ಲಿ ಪ್ರತಿಯೊಬ್ಬರನ್ನು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಆಂದೋಲನಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕು ಎಂದರು.
ಗೋ ಪರಿವಾರ ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಕೆಲಸ ಮಾಡಿದರೆ ಸಾಲದು. ಗ್ರಾಮ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಸಂಘಟನೆ ಬಲಪಡಿಸಬೇಕು. ರೈತರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕಾರ್ಯವಾಗಬೇಕು. ಗ್ರಾಮ ಮಟ್ಟದಿಂದ ಗೋ ಸಮೀಕ್ಷೆ ಆಗಬೇಕು.
ಪ್ರತಿ ಗುರುವಾರ ಪ್ರಗತಿಯ ವರದಿಯನ್ನು ಜಿಲ್ಲಾ ಗೋ ಪರಿವಾರಕ್ಕೆ ನೀಡಬೇಕು. ಡಿ. 3ರಂದು ಯಾತ್ರೆ ಆರಂಭವಾಗುವುದರೊಳಗೆ 5 ಕೋಟಿ ಜನರ ಅಭಿಪ್ರಾಯದ ಅರ್ಜಿ ಪಡೆಯುವಂತೆ ಸೂಚಿಸಿದರು. ಕೇವಲ ಅರ್ಜಿ ಸ್ವೀಕರಿಸಿದರೆ ಸಾಲದು. ಗೋ ರಕ್ಷಣೆ ವಿಚಾರದಲ್ಲಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು. ಮತ ಕೇಳಲು ಬರುವ ಪ್ರತಿನಿಧಿಗಳಿಗೆ ಗೋ ರಕ್ಷಣೆ ಕುರಿತು ನಿಮ್ಮ ನಿಲುವೇನು ಎಂದು ಪ್ರಶ್ನಿಸುವ ಮಟ್ಟಿಗೆ ಪ್ರತಿಯೊಬ್ಬರನ್ನು ತಯಾರು ಮಾಡಬೇಕು.
ಈ ಅಭಿಯಾನ ಜನಾಂದೋಲನ ರೂಪ ಪಡೆದಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೊಂಡೊಯ್ಯುವ ಕೆಲಸ ಎಲ್ಲರಿಂದ ಆಗಬೇಕು ಎಂದು ಶ್ರೀಗಳು ಹೇಳಿದರು. ಮಹೇಶ ಚಟ್ನಳ್ಳಿ, ಕೋಶಾಧ್ಯಕ್ಷ ಮುರಳಿಧರ ಪ್ರಭು, ಎಂ.ವಿ. ಹೆಗಡೆ, ಪೋಷಕಿ ಭಾರತಿ ಪಾಟೀಲ, ಸಂಘಟನಾ ಕಾರ್ಯದರ್ಶಿ ಡಿ.ಎಸ್. ಭಟ್, ವೀಣಾ ಹೆಗಡೆ ಇತರರಿದ್ದರು.