Advertisement

ಕೈಗಾ ಸೇರಿ 10 ಅಣು ರಿಯಾಕ್ಟರ್‌ ಸ್ಥಾಪನೆಗೆ ಗ್ರೀನ್‌ ಸಿಗ್ನಲ್‌

03:45 AM May 18, 2017 | Team Udayavani |

ನವದೆಹಲಿ: ವಿದ್ಯುತ್‌ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಕೈಗಾ ಸೇರಿದಂತೆ ದೇಶದ ಇನ್ನೂ 10 ಕಡೆಗಳಲ್ಲಿ ಅಣು ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಬುಧವಾರ ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌ ನೀಡಿದೆ.

Advertisement

“ರಾಜಸ್ಥಾನದ ಮಹಿ ಬನ್‌ಸ್ವಾರಾ, ಮಧ್ಯಪ್ರದೇಶದ ಚುಟ್ಕಾ, ಕರ್ನಾಟಕದ ಕೈಗಾ, ಹರ್ಯಾಣದ ಗೋರಖ್‌ಪುರದಲ್ಲಿ 10 ರಿಯಾಕ್ಟರ್‌ಗಳನ್ನು ಸ್ಥಾಪಿಸಲಾಗುತ್ತದೆ. ಪ್ರತಿಯೊಂದು ರಿಯಾಕ್ಟರ್‌ 700 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥವನ್ನು ಹೊಂದಿರಲಿದ್ದು, ಒಟ್ಟು 7000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿದೆ’ ಎಂದು ಕೇಂದ್ರ ಇಂಧನ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಸದ್ಯ ಕರ್ನಾಟಕದ ಕೈಗಾ ಅಣುಸ್ಥಾವರ ಸೇರಿದಂತೆ 8 ಅಣು ಸ್ಥಾವರಗಳಿಂದ ಪ್ರತಿ ಗಂಟೆಗೆ 30,292.91 ಕಿಲೋವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಇನ್ನೂ ಆರು ಅಣು ಸ್ಥಾವರಗಳ ಕಾಮಗಾರಿ ನಡೆಯುತ್ತಿದ್ದು, ಇವುಗಳಿಂದ 4,300 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ನಿರೀಕ್ಷಿಸಲಾಗುತ್ತಿದೆ.

ಎಫ್ಐಪಿಬಿ ರದ್ದುಗೊಳಿಸಲು ಕೇಂದ್ರದ ಚಿಂತನೆ
ಮಾಜಿ ಸಚಿವ ಪಿ. ಚಿದಂಬರಂ ಮನೆಯ ಮೇಲೆ ಸಿಬಿಐ ದಾಳಿ ನಡೆಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್ಐಪಿಬಿ)ಯನ್ನೇ ರದ್ದುಗೊಳಿಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿ ಕೇಂದ್ರ ಸಂಪುಟ ಸಭೆಯೂ ಒಪ್ಪಿಗೆ ನೀಡಿದೆ. ಚಿದಂಬರಂ ವಿತ್ತ ಸಚಿವರಾಗಿದ್ದಾಗಲೇ ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಗೆ ಅಕ್ರಮವಾಗಿ ವಿದೇಶಿ ಹೂಡಿಕೆಗಾಗಿ ಅವಕಾಶ ಮಾಡಿಕೊಟ್ಟಿದ್ದಾರೆನ್ನುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಿಬಿಐ ದಾಳಿ ನಡೆಸಿತ್ತು. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಕೂಡ ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದು, ಎಫ್ಐಪಿಬಿ ಮೂಲಕ ತಂದೆಯ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರು ಎನ್ನುವುದು ಇಡೀ ಪ್ರಕರಣದ ಹಿಂದಿನ ಪ್ರಮುಖ ಅಂಶವಾಗಿದೆ. ಫೆಬ್ರವರಿಯ ಬಜೆಟ್‌ ವೇಳೆಗೆ ಎಫ್ಐಪಿಬಿಯನ್ನು ರದ್ದುಗೊಳಿಸಿ, ನೇರ ವಿದೇಶಿ ಹೂಡಿಕೆ ಹಾಗೂ ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಹೆಚ್ಚಿನ ಒತ್ತು ನೀಡುವ ಯೋಜನೆಗಳನ್ನು ಪ್ರಕಟಿಸುವುದು ವಿತ್ತ ಸಚಿವ ಅರುಣ್‌ ಜೇಟ್ಲಿ ಅವರ ಲೆಕ್ಕಾಚಾರವಾಗಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next